ಬೆಂಗಳೂರಿನಲ್ಲಿ ಐಸ್ ಆಪಲ್‌ಗೆ ಬೇಡಿಕೆಯೋ ಬೇಡಿಕೆ, ಒಂದು ಹಣ್ಣಿನ ಬೆಲೆ ಇಷ್ಟೊಂದಾ?
ತಿನ್ನಲು, ಕುಡಿಯಲು ಏನಾದರೂ ತಂಪಾದ್ದನ್ನು ಹುಡುಕುತ್ತಿದ್ದರೆ ಐಸ್ ಆಪಲ್ ಬೆಸ್ಟ್. ಪ್ರಸ್ತುತ ಮಾರುಕಟ್ಟೆಯಲ್ಲಿ ಅನೇಕ ಕಾಲೋಚಿತ ಹಣ್ಣುಗಳು ಲಭ್ಯವಿದ್ದರೂ ಐಸ್ ಆಪಲ್ ಮಾತ್ರ ದುಬಾರಿಯಾಗಿರುವುದು ಏಕೆ ಗೊತ್ತಾ?.

ಕಲ್ಲಂಗಡಿ, ಮಾವು, ಸೌತೆಕಾಯಿ, ಲಿಚಿ ಇತ್ಯಾದಿಗಳು ಬೇಸಿಗೆಯಲ್ಲಿ ಲಭ್ಯವಿರುವ ಕೆಲವು ಹಣ್ಣುಗಳು. ಇವು ನೀರು ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಹಾಗೆಯೇ ಬೇಸಿಗೆಯಲ್ಲಿ ಜನರು ಹೆಚ್ಚಾಗಿ ತಿನ್ನುವ ಇನ್ನೊಂದು ಹಣ್ಣಿದೆ. ಅದೇ ಐಸ್ ಆಪಲ್. ಇದನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯವಾಗಿ ಥಾಟಿ ನುಂಗು ಎಂದೇ ಕರೆಯಲಾಗುತ್ತದೆ. ತಾಪಮಾನ ಹೆಚ್ಚಿರುವ ದಿನಗಳಲ್ಲಿ ನಿಮ್ಮನ್ನು ಹೈಡ್ರೀಕರಿಸಲು ಇದು ಬೆಸ್ಟ್ ಹಣ್ಣು. ಋತುಮಾನಕ್ಕೆ ತಕ್ಕಂತೆ ಸಿಗುವ ಈ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇಷ್ಟು ರಸಭರಿತವಾದ ಐಸ್ ಆಪಲ್ ಈಗ ಬಜೆಟ್ ಸ್ನೇಹಿಯಾಗಿಲ್ಲ. ಅದರ ಬೆಲೆ ಏರಿಕೆ ನೋಡಿ ಜನರ ಜೇಬು ಬಿಸಿಯಾಗಿದೆ. ಹೌದು, ಈ ರುಚಿಕರವಾದ ಹಣ್ಣು ಪ್ರಸ್ತುತ 50 ರೂ.ಗಳಿಗೆ ಮಾರಾಟವಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 65 ರಷ್ಟು ಹೆಚ್ಚಾಗಿದೆ.
ಐಸ್ ಆಪಲ್ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದ ನಂತರ ಬೇಡಿಕೆ ಹೆಚ್ಚಾಗಿದೆ. ಅಷ್ಟೇ ಅಲ್ಲ ಇದು ನಮ್ಮ ಸ್ಥಳೀಯ ಹಣ್ಣಲ್ಲ. ಆದ ಕಾರಣ ಲಾಜಿಸ್ಟಿಕ್ಸ್ ಮತ್ತು ವಿತರಣಾ ವೆಚ್ಚದಲ್ಲಿ ಹೆಚ್ಚಳವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಗರದಲ್ಲಿ ಹಗಲಿನ ತಾಪಮಾನದ ಏರಿಕೆಯಿಂದ ಬೇಡಿಕೆ ಹೆಚ್ಚಾಗಿದೆ. ನಿಜ ಹೇಳಬೇಕೆಂದರೆ ಆರೋಗ್ಯಕರ ಕಾಲೋಚಿತ ಹಣ್ಣುಗಳ ಬಗ್ಗೆ ಜಾಗೃತಿ ಹೆಚ್ಚಾದಂತೆ ನಗರದಾದ್ಯಂತ ಐಸ್ ಆಪಲ್‌ಗೆ ಹೆಚ್ಚಿನ ಅಭಿಮಾನಿಗಳು ಸಿಗುತ್ತಿದ್ದಾರೆ.
"ಇದರಲ್ಲಿ ಅನುಮಾನವಿಲ್ಲ, ಖಂಡಿತ ಇದು ಥಾಟಿ ನುಂಗು ಸೀಸನ್. ಆದರೂ ಬೆಲೆ ಏರಿಕೆಯಾಗಿರುವುದು ಗೊಂದಲಕ್ಕೀಡುಮಾಡಿದೆ" ಎಂದು ಮಾರಾಟಗಾರರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹಣ್ಣು ನೆರೆಯ ತಮಿಳುನಾಡಿನಿಂದ, ವಿಶೇಷವಾಗಿ ಊಟಿ-ಕೊಯಮತ್ತೂರು, ವೆಲ್ಲೂರು, ಮರುವತೂರು, ಕಾಂಚೀಪುರಂ, ಪೊಲ್ಲಾಚಿ ಮತ್ತು ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾರಿಗೆ ಮತ್ತು ವಿತರಣಾ ವೆಚ್ಚಗಳು ಹೆಚ್ಚಿವೆ. ತಮಿಳುನಾಡಿನಲ್ಲಿ ಪ್ರತಿ ಹಣ್ಣಿನ ಬೆಲೆ 25-30 ರೂ.ಗಳಾಗಿದ್ದರೂ, ಅದು ಬೆಂಗಳೂರಿನ ಬೀದಿಗಳಿಗೆ ತಲುಪುವ ಹೊತ್ತಿಗೆ 50 ರೂ.ಗಳಾಗುತ್ತದೆಯಂತೆ.
ಮತ್ತೋರ್ವ ವ್ಯಾಪಾರಿ ಕೂಡ ಇದೇ ರೀತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದ್ದು, "ಲ್ಯಾಂಡಿಂಗ್ ವೆಚ್ಚವೇ ಹೆಚ್ಚಾಗಿದೆ. ನಮಗೆ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಪ್ರತಿದಿನ ಬೆಳಗ್ಗೆ ಮಿನಿ-ಟ್ರಕ್‌ನಲ್ಲಿ ಬರುವ ವಿತರಕರು ಬೆಂಗಳೂರಿಗೆ ಹಣ್ಣುಗಳನ್ನು ತರುವಾಗ ಅಂತರ-ರಾಜ್ಯ ತೆರಿಗೆ ಮತ್ತು ರಸ್ತೆ ಟೋಲ್ ಶುಲ್ಕವನ್ನು ಪಾವತಿಸಬೇಕು. ವೆಚ್ಚಗಳು ಹೆಚ್ಚಿದ್ದರೂ, ಹಣ್ಣಿನ ಬೇಡಿಕೆ ಸ್ಥಿರವಾಗಿದೆ. ಇದೆಲ್ಲದರ ಮಧ್ಯೆ ದಿನಕ್ಕೆ ಸುಮಾರು 10 ಕೆಜಿ ಐಸ್ ಆಪಲ್ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನು ಖರೀದಿದಾರರು ಹೇಳುವ ಪ್ರಕಾರ, "ಕಳೆದ ವರ್ಷ ನಾನು ಅವುಗಳನ್ನು ಹೆಚ್ಚು ಖರೀದಿಸಲಿಲ್ಲ, ಆದರೆ ಈಗ ನಾನು ಆರೋಗ್ಯಕರ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.", "ಆನ್‌ಲೈನ್‌ನಲ್ಲಿ ಹೆಚ್ಚು ಬೆಲೆಯಲ್ಲಿ ಕೊಳ್ಳುವುದಕ್ಕಿಂತ ಅವುಗಳನ್ನು ತಾಜಾವಾಗಿ ಕತ್ತರಿಸುವ ಮಾರಾಟಗಾರರಿಂದ ಖರೀದಿಸುವುದು ಉತ್ತಮ". "ನಗರದಲ್ಲಿ ಕೋಕೋಗಿಂತ ಐಸ್ ಆಪಲ್ ಇನ್ನೂ ಅಗ್ಗವಾಗಿದೆ. ನಾವು ಐಸ್ ಆಪಲ್ ತಿನ್ನಬಹುದು, ಮತ್ತು ಅದು ಕೂಡ ಹೊಟ್ಟೆ ತುಂಬಿಸುತ್ತಿದೆ." ಎಂದೆಲ್ಲಾ ಐಸ್ ಆಪಲ್ ಬೆಲೆಯ ಕುರಿತು ತಿಳಿಸಿದ್ದಾರೆ.
ಐಸ್ ಆಪಲ್ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಸತು, ರಂಜಕ, ಥಯಾಮಿನ್, ರಿಬೋಫ್ಲಾವಿನ್ ಮತ್ತು ಕಬ್ಬಿಣದಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಹಣ್ಣುಗಳು ಚರ್ಮದ ಸಮಸ್ಯೆಗಳಿಗೆ, ವಿಶೇಷವಾಗಿ ತೀವ್ರ ತಾಪಮಾನದ ಸಮಸ್ಯೆಗಳಿಂದಾಗಿ ಉಂಟಾಗುವ ಕೆಂಪು ದದ್ದುಗಳು ಮತ್ತು ತುರಿಕೆಗೆ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತವೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವ ಸಂವೇದನೆಯನ್ನು ತಡೆಯುವುದರ ಜೊತೆಗೆ ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒದಗಿಸುವುದರಿಂದ ಆಸಿಡಿಟಿ ಮತ್ತು ನಿರ್ಜಲೀಕರಣ ಸೇರಿದಂತೆ ವಿವಿಧ ಹೊಟ್ಟೆ ಸಮಸ್ಯೆಗಳಿಗೆ ಪರಿಹಾರವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
