ಇದೊಂದು ಟೀ ಸಾಕು.. ಕರುಳಿನ ಸಮಸ್ಯೆ ಹತ್ತಿರಕ್ಕೆ ಬರಲ್ಲ, ಜೀರ್ಣಕ್ರಿಯೆಯೂ ಸೂಪರ್ ಆಗಿರುತ್ತೆ!
Home Remedies For Digestion: ಹೆಚ್ಚೆಚ್ಚು ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಟೀ ಇಲ್ಲದೆ ಒಂದು ದಿನವೂ ಕಳೆಯಲು ಸಾಧ್ಯವಿಲ್ಲ ಎನ್ನುವವರಿಗೆ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಟೀ ರೆಸಿಪಿ ಶೇರ್ ಮಾಡಿದ್ದಾರೆ. ಇದನ್ನು ಕುಡಿಯುವುದರಿಂದ ನಿಮಗೆ ಕರುಳಿನ ಸಮಸ್ಯೆಗಳು ಹತ್ತಿರ ಬರಲ್ಲ.

ಇದು ಉತ್ತಮ ಮಾರ್ಗ
ನೀವೂ ಬ್ಲಾಕ್ ಟೀ ಪ್ರಿಯರಾಗಿದ್ದರೆ ಒಂದು ಗುಡ್ ನ್ಯೂಸ್ ಇದೆ. ಅದೇನಪ್ಪಾ ಅಂದ್ರೆ ಈ ನಿಮ್ಮ ನೆಚ್ಚಿನ ಪಾನೀಯವನ್ನು ಉರಿಯೂತ ನಿವಾರಕ ಶಕ್ತಿ ಕೇಂದ್ರವಾಗಿ ಪರಿವರ್ತಿಸಬಹುದು. ಹೌದು, ನಿಮಗೆ ಪದೇ ಪದೇ ಟೀ ಕುಡಿಯಬೇಕೆಂದು ಅನಿಸಿದರೆ ಇದು ಒಂದು ಉತ್ತಮ ಮಾರ್ಗವಾಗಿದೆ. ಆದರೆ ಟೀಗೆ ನೀವು ಕೆಲವು ಪದಾರ್ಥಗಳನ್ನು ಸೇರಿಸಬೇಕು ಅಷ್ಟೇ. ಅಂದರೆ ಮಾಮೂಲಿ ಟೀಯನ್ನೇ ಸ್ವಲ್ಪ ವಿಭಿನ್ನವಾಗಿ ತಯಾರಿಸಬೇಕು.
ಉರಿಯೂತವನ್ನು ಕಡಿಮೆ ಮಾಡಲು
ಏಮ್ಸ್, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ಇತ್ತೀಚೆಗೆ ನಿಮ್ಮ ಬ್ಲಾಕ್ ಟೀಯನ್ನು ಉರಿಯೂತ ನಿವಾರಕ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಲು ಐದು ಸುಲಭ ಹಂತಗಳನ್ನು ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಶೇರ್ ಮಾಡಿದ್ದಾರೆ. ಈ ರೀತಿ ಟೀ ಕುಡಿಯುವ ವಿಧಾನವು ನಿಮ್ಮ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು, ಕರುಳಿನ ಒಳಪದರವನ್ನು ಶಮನಗೊಳಿಸಲು, ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ಕರುಳಿನ ಸೂಕ್ಷ್ಮಜೀವಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಗಾದರೆ ನಿಮ್ಮ ಸಾಮಾನ್ಯ ಬ್ಲಾಕ್ ಟೀಯನ್ನ ಪವರ್ ಟೀ ಆಗಿ ಪರಿವರ್ತಿಸುವುದು ಹೇಗೆಂದು ನೋಡೋಣ..
ಮೊದಲನೇಯ ಹಂತ
ಮೊದಲಿಗೆ ಸಾಮಾನ್ಯ ಟೀ ಪುಡಿ ಬದಲಿಗೆ ಬ್ಲಾಕ್ ಟೀ ಪುಡಿ ಬಳಸುವುದು. ಮೊದಲಿಗೆ ಟೀ ಪುಡಿಯನ್ನ ನೀರಿನಲ್ಲಿ ಕುದಿಸುವ ಮೂಲಕ ಪ್ರಾರಂಭಿಸಿ. ಈ ಟೀ ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ.
ಎರಡನೇಯ ಹಂತ
ಕುದಿಸುವಾಗ ಒಂದು ಸಣ್ಣ ತುಂಡು ತಾಜಾ ಶುಂಠಿಯನ್ನು ಸೇರಿಸಿ. ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಮೂರನೇ ಹಂತ
ಕೆಲವು ಏಲಕ್ಕಿ ಬೀಜಗಳನ್ನು ಪುಡಿಮಾಡಿ ಸೇರಿಸಿ. ಇವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಕ್ಕರೆ ಸೇರಿಸದೆಯೇ ನೈಸರ್ಗಿಕ ಸಿಹಿ ಪರಿಮಳವನ್ನು ನೀಡುತ್ತದೆ.
ನಾಲ್ಕನೇ ಹಂತ
ಲವಂಗದ ಸಣ್ಣ ತುಂಡನ್ನು ಸೇರಿಸಿ. ಇದರಲ್ಲಿ ಯುಜೆನಾಲ್ ಎಂಬ ಸಂಯುಕ್ತವಿದ್ದು, ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ.
ಐದನೇಯ ಹಂತ
ಚಹಾ ಸಿದ್ಧವಾದ ನಂತರ, ಅದನ್ನು ಸೋಸಿ ಸ್ವಲ್ಪ ತಣ್ಣಗಾಗಲು ಬಿಡಿ. ಬೇಕಾದರೆ, ನೀವು ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

