ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!
ಸೀನು ದೇಹದಲ್ಲಿ ನಡೆಯುವ ಅತ್ಯಂತ ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ ಸೀನು ಬಂದರೆ ಅದೊಂದು ಅನಾರೋಗ್ಯ ಎಂದು ಭಾವಿಸುತ್ತೇವೆ. ಆದರೆ ಸೀನು ಒಂದು ವೇಗದ ರಕ್ಷಣಾ ವ್ಯವಸ್ಥೆ. ಅಷ್ಟಕ್ಕೂ ಸೀನು ಯಾಕೆ ಬರುತ್ತೆ, ಅದರ ಹಿಂದಿನ ವೈಜ್ಞಾನಿಕ ಕಾರಣ ಏನು ಅಂತ ನೋಡೋಣ.

ರೋಗನಿರೋಧಕ ವ್ಯವಸ್ಥೆ
ಪರಾಗ, ಧೂಳು, ಸಾಕುಪ್ರಾಣಿಗಳ ಕೂದಲು, ಫಂಗಸ್‌ನಂತಹ ಕಣ್ಣಿಗೆ ಕಾಣದ ಸಣ್ಣ ಕಣಗಳು ಮೂಗಿನೊಳಗೆ ಹೋದಾಗ, ದೇಹವು ಅವುಗಳನ್ನು ಅಪಾಯಕಾರಿ ಎಂದು ಭಾವಿಸುತ್ತದೆ. ಆಗ ರೋಗನಿರೋಧಕ ವ್ಯವಸ್ಥೆಯು 'ಹಿಸ್ಟಮೈನ್' ಎಂಬ ವಸ್ತುವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮೂಗಿನ ಒಳಭಾಗದಲ್ಲಿ ಸ್ವಲ್ಪ ಊತ, ಕಿರಿಕಿರಿ ಉಂಟಾಗಿ ಸೀನು ಬರುತ್ತದೆ.
ಕಿರಿಕಿರಿ ಹೆಚ್ಚಾಗುತ್ತದೆ
ಶೀತದ ವೈರಸ್‌ಗಳು ಮೂಗಿನ ಮ್ಯೂಕಸ್ ಮೆಂಬರೇನ್‌ಗೆ ಸೋಂಕು ತಂದು ಊತವನ್ನು ಉಂಟುಮಾಡುತ್ತವೆ. ವೈರಸ್ ಬೆಳೆದಂತೆ, ಆ ಜಾಗದಲ್ಲಿ ಕಿರಿಕಿರಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಶೀತ ಅಥವಾ ಫ್ಲೂ ಇದ್ದಾಗ ಸತತವಾಗಿ ಸೀನುಗಳು ಬರುತ್ತವೆ.
ಆ ಕಣಗಳನ್ನು ಹೊರಹಾಕುತ್ತದೆ
ಹೊಗೆ, ಮಾಲಿನ್ಯ, ಪರ್ಫ್ಯೂಮ್, ಕ್ಲೀನಿಂಗ್ ಕೆಮಿಕಲ್ಸ್, ಮೆಣಸಿನ ಪುಡಿಯಂತಹ ವಸ್ತುಗಳು ಮೂಗಿನ ಸೂಕ್ಷ್ಮ ನರಗಳನ್ನು ಪ್ರಚೋದಿಸುತ್ತವೆ. ಈ ನರಗಳು ತಕ್ಷಣವೇ ಮೆದುಳಿಗೆ 'ಕಿರಿಕಿರಿ ಇದೆ, ಹೊರಹಾಕಬೇಕು' ಎಂಬ ಸಂಕೇತವನ್ನು ಕಳುಹಿಸುತ್ತವೆ. ಆಗ ದೇಹವು ವೇಗವಾಗಿ ಸೀನುವ ಮೂಲಕ ಆ ಕಣಗಳನ್ನು ಹೊರಹಾಕುತ್ತದೆ.
ಹಠಾತ್ ಬೆಳಕಿಗೆ ಒಡ್ಡಿಕೊಂಡಾಗ..
ಕೆಲವರಿಗೆ ಸೂರ್ಯನ ಬೆಳಕು ಅಥವಾ ಹಠಾತ್ ಬೆಳಕಿಗೆ ಒಡ್ಡಿಕೊಂಡಾಗ ಸೀನು ಬರುತ್ತದೆ. ಇದನ್ನು 'ಫೋಟಿಕ್ ಸ್ನೀಜ್ ರಿಫ್ಲೆಕ್ಸ್' ಎನ್ನುತ್ತಾರೆ. ಇದು ಕಣ್ಣಿನ ನರಗಳು ಮತ್ತು ಮೂಗಿನ ನರಗಳು ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಉಂಟಾಗುತ್ತದೆ. 18-35% ಜನರಲ್ಲಿ ಈ ಪ್ರತಿಕ್ರಿಯೆ ಕಂಡುಬರುತ್ತದೆ.
ವೈದ್ಯರು ಹೇಳೋದೇನು?
ತಣ್ಣನೆಯ ಗಾಳಿಯನ್ನು ಉಸಿರಾಡಿದಾಗ ಮೂಗಿನ ನರಗಳು ತಕ್ಷಣವೇ ಪ್ರತಿಕ್ರಿಯಿಸುತ್ತವೆ. ಇದು ರಕ್ಷಣಾತ್ಮಕ ಕ್ರಮವಾಗಿ ಸೀನನ್ನು ಉಂಟುಮಾಡುತ್ತದೆ. ಕೆಲವರು ಊಟದ ನಂತರವೂ ಸೀನುತ್ತಾರೆ. ಇದನ್ನು 'ಸ್ನೇಟಿಯೇಷನ್' (Snatiation) ಎನ್ನುತ್ತಾರೆ. ಹೊಟ್ಟೆ ಹಿಗ್ಗಿದಾಗ, ಅದು ಸೀನನ್ನು ನಿಯಂತ್ರಿಸುವ ನರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

