- Home
- News
- India News
- ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ಇಂದೂ ಕೂಡ ಸಾಮಾನ್ಯ ಸ್ಥಿತಿಗೆ ಮರಳಲಿಲ್ಲ. ಕಳೆದ ನಾಲ್ಕು ದಿನಗಳಿಂದ 2 ಸಾವಿರಕ್ಕೂ ಹೆಚ್ಚು ಇಂಡಿಗೋ ಫ್ಲೈಟ್ ಹಾರಾಟ ರದ್ದಾಗಿದೆ. ವಿಮಾನ ಸಂಸ್ಥೆ ಬಿಕ್ಕಟ್ಟು ಐದನೇ ದಿನವೂ ಮುಂದುವರೆದಿದೆ.

ಪ್ರಯಾಣಿಕರ ಪರದಾಟ
ಇಂಡಿಗೋ ಫ್ಲೈಟ್ ನಂಬಿ ನಿಲ್ದಾಣಕ್ಕೆ ಬಂದಿದ್ದ 300,000 ಕ್ಕೂ ಹೆಚ್ಚು ಪ್ರಯಾಣಿಕರ ಪ್ಲಾನ್ ತಲೆಕೆಳಗಾಗಿದೆ. ವಿಮಾನ ನಿಲ್ದಾಣದಲ್ಲಿಯೇ ಅನೇಕ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲ ವಿಮಾನದಲ್ಲೂ ಎರಡು – ಮೂರು ಗಂಟೆ ಪ್ರಯಾಣಿಕರು ಕಾಯುವ ಸ್ಥಿತಿ ಬಂದಿದೆ. ಬೆಳಿಗ್ಗೆ 11 ಗಂಟೆಗೆ ವಿಮಾನ ಏರಿದ್ದ ಪ್ರಯಾಣಿಕರು ಸಂಜೆ 5 ಗಂಟೆಯವರೆಗೆ ವಿಮಾನದಲ್ಲಿ ಕುಳಿತಿದ್ದಾರೆ. ಆದ್ರೆ ವಿಮಾನ ಹಾರಾಟ ನಡೆಸಲಿಲ್ಲ. ಸಿಬ್ಬಂದಿಯಿಂದ ಸರಿಯಾದ ರೆಸ್ಪಾನ್ಸ್ ಪ್ರಯಾಣಿಕರಿಗೆ ಸಿಗಲಿಲ್ಲ. ವಿಮಾನ ನಿಲ್ದಾಣ ಹಾಗೂ ವಿಮಾನದಲ್ಲಿ ಕುಡಿಯೋ ನೀರಿನಿಂದ ಹಿಡಿದು ಆಹಾರದವರೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ ಅಂತ ಪ್ರಯಾಣಿಕರೊಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ.
ಗಂಡನನ್ನು ಕಳೆದುಕೊಂಡ ಪತ್ನಿ
ಪಾಟ್ನಾದಲ್ಲಿರುವ ಪತಿಗೆ ಅಪಘಾತವಾಗಿತ್ತು. ಬೇಗ ತಲುಪಬಹುದು ಎನ್ನುವ ಕಾರಣಕ್ಕೆ ಪತ್ನಿ ವಿಮಾನ ಪ್ರಯಾಣದ ಪ್ಲಾನ್ ಮಾಡಿದ್ಲು. ಆದ್ರೆ ಎಲ್ಲವೂ ಭಸ್ಮವಾಯ್ತು. ಗಂಡ ಕೊನೆ ಉಸಿರೆಳೆಯುತ್ತಿದ್ದರೆ ಪತ್ನಿ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯ್ತಿದ್ದಳು. ಬೋರ್ಡಿಂಗ್ ಗೇಟ್ನಲ್ಲಿ ಅವಳ ಫೋನ್ ರಿಂಗಾದಾಗ ಅವಳ ಕಿರುಚಾಟ ಇಡೀ ವಿಮಾನ ನಿಲ್ದಾಣವನ್ನು ಸ್ಥಬ್ತಗೊಳಿಸಿತ್ತು.
ಸ್ಯಾನಿಟರಿ ಪ್ಯಾಡ್ ಗೆ ಪರದಾಟ
12 ವರ್ಷದ ಬಾಲಕಿಗೆ ಮೊದಲ ಬಾರಿ ಪಿರಿಯಡ್ ಕಾಣಿಸಿಕೊಂಡಿತ್ತು. ಬ್ಲೀಡಿಂಗ್ ಆಗ್ತಿದೆ. ಪ್ಯಾಡ್ ಗಾಗಿ ಅಸಹಾಯಕ ತಂದೆ ವಿಮಾನ ನಿಲ್ದಾಣ ಸುತ್ತಿದ್ದಾರೆ. ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ಇಲ್ಲ, ಪ್ರತಿಕ್ರಿಯೆ ನೀಡಲು ಸಿಬ್ಬಂದಿ ಇಲ್ಲ. ಬಾಲಕಿ ನೋವಿನಿಂದ ಅಳ್ತಿದ್ರೆ ತಂದೆ ಕೈಚೆಲ್ಲಿ ಕುಳಿತಿದ್ದರು. ಈ ವಿಷ್ಯ ತಿಳಿದ ನೆಟ್ಟಿಗರು, ವಿಮಾನ ನಿಲ್ದಾಣದ ಮೆಡಿಕಲ್ ಶಾಪ್ ಹಾಗೂ ಟಾಯ್ಲೆಟ್ ನಲ್ಲಿ ಪ್ಯಾಡ್ ಲಭ್ಯವಿರುತ್ತೆ ಅಂತ ಸಲಹೆ ನೀಡಿದ್ದಾರೆ. ಆದ್ರೆ ಎಲ್ಲ ವಿಮಾನ ನಿಲ್ದಾಣದ ಟಾಯ್ಲೆಟ್ ನಲ್ಲಿ ಪ್ಯಾಡ್ ಇರೋದಿಲ್ಲ, ಭಾರತದ ಅನೇಕ ನಿಲ್ದಾಣಗಳಲ್ಲಿ ಪ್ಯಾಡ್ ಸಿಗೋದಿಲ್ಲ.
ಕೊನೆಯ ವಿದಾಯ ಸಾಧ್ಯವಾಗ್ಲಿಲ್ಲ
ವಿಮಾನ ಹಾರಾಟದಲ್ಲಿ ವಿಳಂಬ ಹಾಗೂ ರದ್ದಾದ ಕಾರಣ ತಂದೆಗೆ ಸರಿಯಾದ ಸಮಯಕ್ಕೆ ಮಗನ ಬಳಿ ಬರಲಾಗಲಿಲ್ಲ. ತಂದೆ ಬರುವಷ್ಟರಲ್ಲಿ ಮಗನನ್ನು ಐಸಿಯುಗೆ ಶಿಫ್ಟ್ ಮಾಡಿಯಾಗಿತ್ತು. ನಾನು ತುಂಬಾ ತಡವಾಗಿ ಬಂದೆ ಎನ್ನುವ ಮಾತು ಬಿಟ್ರೆ ಮತ್ತೇನೂ ಉಳಿದಿರಲಿಲ್ಲ ಎಂದು ತಂದೆಯೊಬ್ಬರು ತಮ್ಮ ನೋವು ತೋಡಿಕೊಂಡಿದ್ದಾರೆ.
ಒಂದು ವರ್ಷದ ಶ್ರಮ ಒಂದು ದಿನದಲ್ಲಿ ಹಾಳು
17 ವರ್ಷದ ಹುಡುಗಿಯೊಬ್ಬಳು ಪ್ರವೇಶ ಪರೀಕ್ಷೆಗಾಗಿ ವಿಮಾನ ಬುಕ್ ಮಾಡಿದ್ಲು. ವರ್ಷದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಆದ್ರೆ ಎಲ್ಲ ಶ್ರಮ ವ್ಯರ್ಥವಾಯ್ತು. ಮೂರು ವಿಮಾನಗಳು ರದ್ದಾದ ಕಾರಣ ಪರೀಕ್ಷೆ ಬರೆಯುವ ಕನಸು ನನಸಾಗಲಿಲ್ಲ. ಪರೀಕ್ಷೆ ಮುಗಿಯುವವರೆಗೂ ಅವಳು ವಿಮಾನ ನಿಲ್ದಾಣದಲ್ಲೇ ಕುಳಿತಿದ್ದಳು. ನೋವಿನಲ್ಲಿ ಇಷ್ಟುದಿನ ರಾತ್ರಿ – ಹಗಲು ಎನ್ನದೆ ಓದಿದ್ದ ಎಜ್ಯುಕೇಷನ್ ಅಪ್ಲಿಕೇಶನ್ಗಳನ್ನು ಡಿಲಿಟ್ ಮಾಡಿದ್ಲು. ಮೂರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಒಂದಲ್ಲ ಒಂದು ಮಹತ್ವದ ಉದ್ದೇಶಕ್ಕೆ ಪ್ರಯಾಣ ಬೆಳೆಸಿರ್ತಾರೆ. ಎಲ್ಲರ ಕೆಲ್ಸಕ್ಕೂ ಅಡ್ಡಿಯಾಗಿದೆ. ಅದೆಷ್ಟೋ ಮಂದಿ ಮೌನವಾಗಿ ಕಣ್ಣೀರಿಡ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

