ತಲಾಖ್ ಎ ಹಸನ್‌ಗೆ ನಿಷೇಧ? ಮಹಿಳೆಯರ ಘನತೆ ಹಾಳಾಗಲು ಬಿಡಲ್ಲ: ಸುಪ್ರೀಂ
'ತಲಾಖ್-ಎ-ಹಸನ್' ಪದ್ಧತಿಯನ್ನು ರದ್ದುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಚಿಂತನೆ ನಡೆಸಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಈ ಪದ್ಧತಿಯನ್ನು ನ್ಯಾಯಾಂಗ ಹಸ್ತಕ್ಷೇಪದ ಮೂಲಕ ನಿಷೇಧಿಸುವ ಸಾಧ್ಯತೆಯಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ಮುಂದಾಗಿದೆ.

ತಲಾಖ್ ಎ ಹಸನ್
ನವದೆಹಲಿ: ಮುಸ್ಲಿಂ ಪುರುಷನು ತಿಂಗಳಿಗೆ ಒಂದು ಸಲದಂತೆ ಸತತ 3 ತಿಂಗಳವರೆಗೆ ‘ತಲಾಖ್’ ಹೇಳುವ ಮೂಲಕ ವಿವಾಹ ವಿಚ್ಛೇದನ ನೀಡುವ ಪದ್ಧತಿಯಾದ ‘ತಲಾಖ್-ಎ-ಹಸನ್’ ಅನ್ನು ರದ್ದುಗೊಳಿಸುವ ಇಂಗಿತವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ.
ನ್ಯಾಯಾಂಗ ಹಸ್ತಕ್ಷೇಪ
ಈ ವಿಷಯವನ್ನು 5 ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಉಲ್ಲೇಖಿಸಲು ಗಂಭೀರ ಚಿಂತನೆ ನಡೆಸಲಾಗುತ್ತದೆ ಎಂದಿದೆ. ಇದರ ನಿಷೇಧ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ‘ಈ ಪದ್ಧತಿಯು ಒಟ್ಟಾರೆಯಾಗಿ ಸಮಾಜದ ಮೇಲೆ ಪರಿಣಾಮ ಬೀರುವುದರಿಂದ, ನ್ಯಾಯಾಂಗ ಹಸ್ತಕ್ಷೇಪ ಅಗತ್ಯವಾಗಬಹುದು. ನಾಗರಿಕ ಸಮಾಜವು ಮಹಿಳೆಯರ ಘನತೆಯನ್ನು ಹಾಳುಮಾಡುವ ಪದ್ಧತಿಗಳನ್ನು ಅನುಮತಿಸಲು ಸಾಧ್ಯವಿಲ್ಲ’ ಎಂದು ಹೇಳಿತು.
ಏನಿದು ತಲಾಖ್ ಎ ಹಸನ್?
ಈಗಾಗಲೇ ತ್ರಿವಳಿ ತಲಾಖ್ ಅನ್ನು ಭಾರತ ಸರ್ಕಾರ ಈ ಹಿಂದೆಯೇ ನಿರ್ಬಂಧಿಸಿದೆ. ಅದು ಒಮ್ಮೆಗೇ ‘ತಲಾಖ್, ತಲಾಖ್, ತಲಾಖ್’ ಎಂದು 3 ಸಲ ಹೇಳುವ ಪದ್ಧತಿಯಾಗಿದೆ. ಆದರೆ ತಿಂಗಳಿಗೆ ಒಂದರಂತೆ 3 ಸಲ ತಲಾಖ್ ಹೇಳುವುದನ್ನು ‘ತಲಾಖ್ ಎ ಹಸನ್’ ಎನ್ನುತ್ತಾರೆ.
ಪತಿ- ಪತ್ನಿ ಮುನಿಸು
ತಲಾಖ್ ಎ ಹಸನ್ ಪದ್ಧತಿಯಲ್ಲಿ ಪತಿ- ಪತ್ನಿ ತಮ್ಮ ಮುನಿಸು ಮರೆತು ಒಂದಾಗಲು ಅವಕಾಶ ಇರುತ್ತದೆ. ಮೂರು ತಿಂಗಳಲ್ಲಿ ಒಮ್ಮೆಯೂ ಪತಿ- ಪತ್ನಿ ಒಂದಾಗುವ ಮನಸ್ಸು ಮಾಡದೇ ಇದ್ದರೆ ಮೂರು ತಿಂಗಳ ಬಳಿಕ ಪತಿ- ಪತ್ನಿ ಬೇರಾಗುತ್ತಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ; ಏನಿದು ಪ್ರಕರಣ?
ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ
ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಕಾನೂನು ಬಾಹಿರ ಎಂದು 2019ರಲ್ಲಿ ಸಂಸತ್‌ನಲ್ಲಿ ಮಸೂದೆ ಅಂಗೀಕರಿಸಿತ್ತು.ಆದರೆ ತಲಾಖ್ ಎ ಹಸನ್ ಪದ್ಧತಿ ಈಗಲೂ ಜೀವಂತ. ಇದು ಪತಿ ಪತ್ನಿಗೆ ಏಕಪಕ್ಷೀಯವಾಗಿ ವಿಚ್ಛೇದನ ನೀಡುವ ಬಗೆಯಾಗಿದೆ.ಇದನ್ನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿದೆ. ಈ ಅರ್ಜಿ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾಗಿದೆ.
ಇದನ್ನೂ ಓದಿ: Interview: ವಲಸಿಗರ ಸಮಸ್ಯೆಗೆ ಮಹಿಷಿ ವರದಿ ಜಾರಿ ಮದ್ದು - ಜಿ.ಆರ್. ಶಿವಶಂಕರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

