- Home
- Karnataka Districts
- ಬೆಂಗಳೂರು ಮರಣ ಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಜಿಬಿಎ ಅಧಿಕಾರಿಗಳಿಗೆ ಫುಲ್ ಕ್ಲಾಸ್!
ಬೆಂಗಳೂರು ಮರಣ ಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಜಿಬಿಎ ಅಧಿಕಾರಿಗಳಿಗೆ ಫುಲ್ ಕ್ಲಾಸ್!
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದು 7 ಬೀದಿ ಬದಿ ವ್ಯಾಪಾರಿಗಳು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ. ನಗರದಾದ್ಯಂತ ಶಿಥಿಲಗೊಂಡ ಕಟ್ಟಡಗಳ ಸಮೀಕ್ಷೆಗೆ ಆದೇಶ.

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಸ್ಥಳಕ್ಕೆ ಸಿಎಂ ಭೇಟಿ
ಬೆಂಗಳೂರು (ಏ.29): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ಭೀಕರ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು 7 ಮಂದಿ ಬೀದಿ ಬದಿ ವ್ಯಾಪಾರಿಗಳು ಸಾವನ್ನಪ್ಪಿದ ಘಟನೆ ರಾಜ್ಯವನ್ನೇ ನಡುಗಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಫುಲ್ ಕ್ಲಾಸ್
ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಪಾಲಿಕೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 'ಈ ಗೋಡೆ ಯಾವಾಗ ಕಟ್ಟಿದ್ದು? ಯಾವಾಗ ಪ್ಲಾನ್ ಆಗಿದ್ದು? ಇದು ಹಳೆಯ ಗೋಡೆ ಅಂತ ನಿಮಗೆ ಗೊತ್ತಿರಲಿಲ್ವಾ? ಚೀಫ್ ಇಂಜಿನಿಯರ್ ಯಾರು?' ಎಂದು ಪ್ರಶ್ನೆಗಳ ಸುರಿಮಳೆಗೈಯುವ ಮೂಲಕ ಅಧಿಕಾರಿಗಳ ಚಳಿ ಬಿಡಿಸಿದರು.
ಗೋಡೆ ಪರಿಶೀಲಿಸಿದ್ದರೆ 7 ಜೀವ ಉಳಿಯುತ್ತಿದ್ದವು
'ಗೋಡೆ ಹಳೆಯದ್ದು ಅಂತ ಪರಿಶೀಲನೆ ನಡೆಸುವ ಕನಿಷ್ಠ ಜ್ಞಾನ ನಿಮಗಿಲ್ಲವೇ? ನಿಮ್ಮ ನಡುವೆ ಕೋ-ಆರ್ಡಿನೇಷನ್ ಇಲ್ವಾ? ನೀವು ಸರಿಯಾಗಿ ಎಚ್ಚರವಹಿಸಿದ್ದರೆ ಇವತ್ತು 7 ಬಡ ಜೀವಗಳು ಉಳಿಯುತ್ತಿದ್ದವು' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಇಂಜಿನಿಯರ್‌ಗಳ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ರಿಟಿಷರ ಕಾಲದ ಗೋಡೆ
ಸಾವನ್ನಪ್ಪಿದ ಎಂಟು ಮಂದಿ ಕೂಡ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಬಡವರಾಗಿದ್ದಾರೆ. ಬೌರಿಂಗ್ ಆಸ್ಪತ್ರೆಯ ಈ ಗೋಡೆಯನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಬೆಂಗಳೂರು ನಗರಸಭೆಯಿಂದ ಹಿಡಿದು ಇಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ವರೆಗೂ ಹತ್ತಾರು ಆಡಳಿತ ಮಂಡಳಿಗಳು ಬದಲಾಗಿವೆ.
ಗೋಡೆ ಕುಸಿಯುವುದಕ್ಕೂ ಮುನ್ನ ಇದ್ದ ಚಿತ್ರಣ
ಬೆಂಗಳೂರು ನಗರದ ಅಭಿವೃದ್ಧಿ ಹೆಸರಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಲಾಗಿದ್ದರೂ, ಶಿಥಿಲಾವಸ್ಥೆಯಲ್ಲಿದ್ದ ಈ ಹಳೆಯ ಗೋಡೆಯನ್ನು ದುರಸ್ತಿ ಮಾಡುವ ಅಥವಾ ಹೊಸದಾಗಿ ನಿರ್ಮಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದು ವ್ಯವಸ್ಥಿತ ಕೊಲೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಭೇಟಿ, ಗಾಯಾಳುಗಳ ಆರೋಗ್ಯ ವಿಚಾರಣೆ:
ಘಟನಾ ಸ್ಥಳದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದರು. ಕಾಂಪೌಂಡ್ ಕುಸಿತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಸಿಎಂ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ಗಾಯಾಳುಗಳಿಗೆ ಅತ್ಯಂತ ಗುಣಮಟ್ಟದ ಮತ್ತು ಉಚಿತ ಚಿಕಿತ್ಸೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಟ್ಟುನಿಟ್ಟಿನ ಆದೇಶ:
ನಗರದಾದ್ಯಂತ ಇರುವ ಇಂತಹ ಹಳೆಯ ಕಾಂಪೌಂಡ್ ಗೋಡೆಗಳು ಮತ್ತು ಶಿಥಿಲಗೊಂಡ ಕಟ್ಟಡಗಳ ಬಗ್ಗೆ ತಕ್ಷಣವೇ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಬಿಎ ಅಧಿಕಾರಿಗಳಿಗೆ ಸಿಎಂ ಆದೇಶಿಸಿದರು. 'ಇನ್ನೊಮ್ಮೆ ಇಂತಹ ಘಟನೆ ಮರುಕಳಿಸಿದರೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.
ಬಡ ವ್ಯಾಪಾರಿಗಳ ಸಾವಿನಿಂದ ಶಿವಾಜಿನಗರದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

