- Home
- Karnataka Districts
- ಭರ್ಜರಿ ಮಳೆ ಸುರಿದಿದ್ದಾಯ್ತು, ಈಗ ಕುಡಿಯುವ ನೀರಲ್ಲಿ ಬ್ಯಾಕ್ಟೀಯಾ ಪತ್ತೆ; ಕಲುಷಿತ ನೀರಿನ ಸಮಸ್ಯೆಗೆ ನಲುಗಿದ ಕೊಪ್ಪ!
ಭರ್ಜರಿ ಮಳೆ ಸುರಿದಿದ್ದಾಯ್ತು, ಈಗ ಕುಡಿಯುವ ನೀರಲ್ಲಿ ಬ್ಯಾಕ್ಟೀಯಾ ಪತ್ತೆ; ಕಲುಷಿತ ನೀರಿನ ಸಮಸ್ಯೆಗೆ ನಲುಗಿದ ಕೊಪ್ಪ!
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದು, ಜನರ ಆರೋಗ್ಯದಲ್ಲಿ ಆತಂಕ ಮೂಡಿದೆ. ಆರೋಗ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಚರಂಡಿ ನೀರು ಕೆರೆಗೆ ಸೇರುತ್ತಿರುವುದೇ ಕಾರಣ ಎನ್ನಲಾಗಿದೆ. ಸ್ಥಳೀಯರು ಪಟ್ಟಣ ಪಂಚಾಯಿತಿ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ 20): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದ ಜನರು ಕುಡಿಯುವ ನೀರೇ ಇದೀಗ ವಿಷವಾಗಿ ಪರಿವರ್ತನೆ ಆಗುತ್ತಿದೆ. ಕುಡಿಯುವ ನೀರಲ್ಲಿ ಬ್ಯಾಕ್ಟೀರಿಯಾ ಪತ್ತೆ ಆಗಿದ್ದರೂ ಪಟ್ಟಣ ಪಂಚಾಯಿತಿಯಿಂದ ಜನರಿಗೆ ಅದೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ನೀರು ಸೇವನೆ ಮಾಡಿ ಜನರು ಆರೋಗ್ಯದ ಸಮಸ್ಯೆ ತುತ್ತಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಆರೋಗ್ಯ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಪತ್ತೆಯಾದ ಬ್ಯಾಕ್ಟೀರಿಯಾ:
ಜಿಲ್ಲೆಯ ಕೊಪ್ಪ ತಾಲೂಕ್ ಶುದ್ಧ ವಾತಾವರಣ ಹೊಂದಿರುವ ಮಲೆನಾಡಿನ ಪರಿಸರ ಈಗ ಕಲುಷಿತಗೊಂಡಿದೆ. ಹಳ್ಳಿಗಳಲ್ಲಿ ಶುದ್ಧವಾದ ವಾತಾವರಣವೇ ಇದೆ. ಆದರೆ ಪಟ್ಟಣಗಳಲ್ಲಿ ಎಲ್ಲವೂ ಮಲಿನವಾಗುತ್ತಿದೆ. ನೀರು ಕುಡಿಯಲಾರದಷ್ಟು ಹದಗೆಡುತ್ತಿದೆ. ಕೊಪ್ಪದ ಜನರು ದಿನನಿತ್ಯ ಕುಡಿಯುವ ನೀರಿನಲ್ಲಿ ಜೀವಕ್ಕೆ ಹಾನಿಕಾರಕವಾಗುತ್ತಿದೆ. ಕೊಪ್ಪ ಪಟ್ಟಣಕ್ಕೆ ನೀರು ಪೂರೈಕೆ ಆಗುವ ಹುಚ್ಚಾರಾಯರ ಕೆರೆ ಇದೀಗ ಕಲುಷಿತಗೊಂಡಿದೆ. 4,000ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವೇ ಹುಚ್ಚಾರಾಯರ ಕೆರೆ ಆಗಿದೆ.
ಆದರೆ, ಇದೀಗ ಹುಚ್ಚರಾಯರ ಕೆರೆ ನೀರಿನಲ್ಲಿ ದುರ್ವಾಸನೆ ಜೊತೆಗೆ ಕಲುಷಿತಗೊಳ್ಳುತ್ತಿದೆ ಎಂದು ಹಲವರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಲು ಮುಂದಾಯಿತು. ಈ ವೇಳೆ ನೀರಲ್ಲಿ ಜೀವಕ್ಕೆ ಹಾನಿ ಮಾಡಬಲ್ಲ ಬ್ಯಾಕ್ಲೀರಿಯಾ ಇರುವುದು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ, ಇಲಾಖೆ ದೃಢಪಡಿಸಿದೆ. ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ವರದಿಯಿಂದ ಕೊಪ್ಪ ಜನತೆಗೆ ಶಾಕ್ ನೀಡಿದಂತಾಗಿದೆ.
ಕೆರೆಗೆ ಸೇರ್ಪಡೆ ಆಗುತ್ತಿರುವ ಚರಂಡಿ, ಕೊಳಚೆ ನೀರು:
ಕಳೆದ ವರ್ಷ ಬೇಸಿಗೆಯಲ್ಲಿ ಮಳೆ ಬಾರದ ಕಾರಣ ಏಪ್ರಿಲ್, ಮೇನಲ್ಲಿ ತುಂಗಾ ನದಿಯ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ಮಳೆಯಾಗುತ್ತಿರುವ ಕಾರಣ ಕೆರೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಕೆರೆಯ ನೀರು ತಳಮಟ್ಟಕ್ಕೆ ಹೋಗಿದೆ ಹಾಗೂ ಮಳೆಯಾದ ಕಾರಣ ಪಕ್ಕದ ಪ್ರದೇಶ, ಚರಂಡಿ ಇತರ ಭಾಗದಿಂದ ಕೊಳಚೆ ಸಹಿತ ಕೆರೆಗೆ ನೀರು ಹರಿದ ಪರಿಣಾಮ ಕಲುಷಿತಗೊಂಡಿದೆ ಎನ್ನುವ ಅಭಿಪ್ರಾಯ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಆಡಳಿತ ಮಂಡಳಿ , ಶಾಸಕರ ವಿರುದ್ಧ ಆಕ್ರೋಶ :
ಕೊಪ್ಪ ಪಟ್ಟಣದ ಜನತೆಗೆ ನೀರುಣಿಸುವ ನೀರು ಮಲಿನಗೊಂಡಿದ್ದು ಸುಮಾರು ಒಂದು ವಾರದಿಂದ ಪಟ್ಟಣಕ್ಕೆ ಗಬ್ಬು ವಾಸನೆಯ ನೀರನ್ನು ಸರಬರಾಜಾಗುತ್ತಿದ್ದು ಹಾಗೂ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆರೋಗ್ಯ ಇಲಾಖೆಯ ವರದಿ ಸಾರ್ವಜನಿಕವಾಗಿ ಹರಿದಾಡಿದ್ದು ಅದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದ ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಶೆಟ್ಟಿ ನೀರು ಶುದ್ಧೀಕರಣ ಘಟಕಕ್ಕೆ ಬೇಟಿ ಕೊಟ್ಟು ಪರಿಶೀಲಿಸಿ ವಾಸ್ತವತೆಯನ್ನು ಅರಿತು ಅವೈಜ್ಞಾನಿಕ ನಿರ್ವಹಣೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಇಂತಹ ದೊಡ್ಡ ಸಮಸ್ಯೆ ಪಟ್ಟಣದಲ್ಲಿ ನಡೆದಿದ್ದರೂ ಕ್ಷೇತ್ರದ ಶಾಸಕರು ಈ ವಿಚಾರವಾಗಿ ಗಮನಹರಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪಟ್ಟಣದಲ್ಲಿನ ಕುಡಿಯುವ ನೀರಿನ ಮಾಲಿನ್ಯವನ್ನು ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿಲ್ಲ ಈ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಆಡಳಿತ ನಡೆಸುವವರ ನಿರ್ಲಕ್ಷ್ಯ ಹೆಚ್ಚಿದೆ. ಸಾರ್ವಜನಿಕರು ಇಂತಹ ಗಂಭೀರ ವಿಚಾರಗಳನ್ನು ಪ್ರಶ್ನಿಸದಿದ್ದರೆ ಭವಿಷ್ಯ ದಲ್ಲಿ ಭಾರಿ ನಷ್ಟಕ್ಕೆ ನಾವುಗಳೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

