- Home
- Karnataka Districts
- ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ ಸೆಂಟ್ ಜೋಸೆಫ್ ಶಾಲೆ ಪ್ರಿನ್ಸಿಪಾಲ್!
ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ ಸೆಂಟ್ ಜೋಸೆಫ್ ಶಾಲೆ ಪ್ರಿನ್ಸಿಪಾಲ್!
ಚಿಕ್ಕಮಗಳೂರಿನ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿದ್ದ 7ನೇ ತರಗತಿ ವಿದ್ಯಾರ್ಥಿಗೆ ಪ್ರಿನ್ಸಿಪಾಲ್ ಹಲ್ಲೆ ನಡೆಸಿ, ಶಬರಿಮಲೆ ಯಾತ್ರೆಗೆ ರಜೆ ನಿರಾಕರಿಸಿದ್ದಾರೆ. ಈ ಘಟನೆಯು ಹಿಂದೂ ಸಂಘಟನೆಗಳ ತೀವ್ರ ಪ್ರತಿಭಟನೆ ಮಾಡಿದ್ದಾರೆ.

ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಶಾಲಾ ಆಡಳಿತ ಮಂಡಳಿಯ ನಡೆಯೊಂದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ 7ನೇ ತರಗತಿಯ ಬಾಲಕನಿಗೆ ಶಾಲಾ ಪ್ರಿನ್ಸಿಪಾಲ್ ಹೊಡೆದಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಯ ವಿವರ
7ನೇ ತರಗತಿಯ ಬಾಲಕನೊಬ್ಬ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಾಲೆಗೆ ಹಾಜರಾಗಿದ್ದನು. ಇದನ್ನು ಕಂಡ ಶಾಲೆಯ ಮುಖ್ಯ ಪ್ರಿನ್ಸಿಪಾಲ್, 'ಯಾರನ್ನು ಕೇಳಿ ಮಾಲೆ ಹಾಕಿದ್ದೀಯಾ?' ಎಂದು ಪ್ರಶ್ನಿಸಿ ಬಾಲಕನಿಗೆ ಹೊಡೆದಿದ್ದಾರೆ ಎನ್ನಲಾಗಿದೆ.
ಶಬರಿಮಲೆ ಯಾತ್ರೆಗೆ ಹೋಗಲು ರಜೆ ನೀಡುವುದಿಲ್ಲ
ಅಲ್ಲದೆ, 'ಶರ್ಟ್ ಒಳಗೆ ಬನಿಯನ್ ಏಕೆ ಹಾಕಿಲ್ಲ?' ಎಂದು ವಿಚಾರಿಸಿ, ಶಬರಿಮಲೆ ಯಾತ್ರೆಗೆ ಹೋಗಲು ರಜೆ ನೀಡುವುದಿಲ್ಲ ಎಂದು ಕಠಿಣವಾಗಿ ಹೇಳಿದ್ದಾರೆ. 'ಇರುಮಡಿಯನ್ನ ನಿಮ್ಮ ಅಪ್ಪನ ಕೈಯಲ್ಲಿ ಶಬರಿಮಲೆಗೆ ಕಳಿಸಿ, ನೀನು ಶಾಲೆಗೆ ಬರಬೇಕು' ಎಂದು ಆಡಳಿತ ಮಂಡಳಿ ಬಾಲಕನಿಗೆ ತಾಕೀತು ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಹಿಂದೂ ಸಂಘಟನೆಗಳ ಕಿಡಿ
ವಿಷಯ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ (VHP), ಭಜರಂಗದಳದ ಕಾರ್ಯಕರ್ತರು ಮತ್ತು ಮಾಲಾಧಾರಿಗಳು ಶಾಲೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. 'ಸರ್ಕಾರದ ಆದೇಶ ಇಲ್ಲದಿದ್ದರೂ ಕ್ರಿಸ್‌ಮಸ್‌ಗೆ 15 ದಿನ ರಜೆ ನೀಡುವ ನೀವು, ಸಂಪ್ರದಾಯದಂತೆ ಶಬರಿಮಲೆಗೆ ಹೋಗುವ ಬಾಲಕನಿಗೆ ರಜೆ ನೀಡಲು ಯಾಕೆ ಹಿಂದೇಟು ಹಾಕುತ್ತೀರಿ? ದಸರಾ ರಜೆ ನೀಡಲು ಸತಾಯಿಸುವ ನಿಮಗೆ ಧಾರ್ಮಿಕ ಸ್ವಾತಂತ್ರ್ಯದ ಅರಿವಿಲ್ಲವೇ?' ಎಂದು ಪ್ರತಿಭಟನಾಕಾರರು ಶಾಲಾ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
ಮಕ್ಕಳ ಧಾರ್ಮಿಕ ಭಾವನೆಗೆ ಧಕ್ಕೆ
'ಮಕ್ಕಳ ಧಾರ್ಮಿಕ ಭಾವನೆಗೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ. ಹಿಜಾಬ್ ವಿಚಾರದಲ್ಲಿ ಕಾನೂನು ಹೇಗಿದೆಯೋ, ಇಲ್ಲಿಯೂ ಹಾಗೆಯೇ ವರ್ತಿಸಿ. ಇಲ್ಲದಿದ್ದರೆ ನಿಮ್ಮ ಸಂಸ್ಥೆಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.
ಪ್ರಿನ್ಸಿಪಾಲ್ ಕ್ಷಮೆಯಾಚನೆ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಶಾಲೆಯ ಪ್ರಿನ್ಸಿಪಾಲ್, ಪ್ರತಿಭಟನಾಕಾರರ ಮುಂದೆ ಬಂದು ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ, ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ತಾರತಮ್ಯ ಎಸಗಬಾರದು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

