- Home
- Karnataka Districts
- ಕೊಪ್ಪಳದ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹುಳು ಪತ್ತೆ; ಸಚಿವರೇನ್ ನಿದ್ದೆ ಮಾಡ್ತಿದ್ದಾರಾ?
ಕೊಪ್ಪಳದ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹುಳು ಪತ್ತೆ; ಸಚಿವರೇನ್ ನಿದ್ದೆ ಮಾಡ್ತಿದ್ದಾರಾ?
ಕೊಪ್ಪಳ ತಾಲೂಕಿನ ಬಿಸರಹಳ್ಳಿ ಮತ್ತು ಹೊಸಲಿಂಗಾಪುರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳುಗಳು ಮತ್ತು ನುಶಿಗಳು ಪತ್ತೆಯಾಗಿವೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬಿಸಿಯೂಟದಲ್ಲಿ ಹುಳು
ಕೊಪ್ಪಳ (ಡಿ.16): ಕೊಪ್ಪಳ ತಾಲೂಕಿನ ಎರಡು ಪ್ರಮುಖ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವಾಗಿ ನೀಡಲಾದ ಅನ್ನ ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಹುಳುಗಳು ಹಾಗೂ ನುಶಿ (Weevils) ಪತ್ತೆಯಾಗಿರುವ ಆತಂಕಕಾರಿ ಘಟನೆ ಮಂಗಳವಾರ ವರದಿಯಾಗಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಶಾಲಾ ಸಿಬ್ಬಂದಿ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸರಹಳ್ಳಿ ಹಾಗೂ ಹೊಸಲಿಂಗಾಪುರದಲ್ಲಿ ಘಟನೆ
ಕೊಪ್ಪಳ ತಾಲೂಕಿನ ಬಿಸರಹಳ್ಳಿಯ ನೃಪತುಂಗ ಪ್ರೌಢ ಶಾಲೆ (ಅನುದಾನಿತ ಶಾಲೆ) ಮತ್ತು ಹೊಸಲಿಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ವಿದ್ಯಾರ್ಥಿಗಳು ಊಟ ಮಾಡಲು ಕುಳಿತಾಗ, ಅನ್ನ ಮತ್ತು ಆಹಾರದ ಇತರ ಭಾಗಗಳಲ್ಲಿ ಸತ್ತ ಹುಳುಗಳು ಹಾಗೂ ಸಣ್ಣ ಸಣ್ಣ ನುಶಿಗಳು ಕಂಡುಬಂದಿವೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಕೂಡಲೇ ತಮ್ಮ ಪೋಷಕರು ಮತ್ತು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರಿಂದ ತರಾಟೆ
ಮಾಹಿತಿ ತಿಳಿದ ಕೂಡಲೇ ಬಿಸರಹಳ್ಳಿ ಮತ್ತು ಹೊಸಲಿಂಗಾಪುರದ ಗ್ರಾಮಸ್ಥರು ಶಾಲೆಗಳಿಗೆ ಧಾವಿಸಿ ಬಂದಿದ್ದಾರೆ. ಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದೀರಿ ಎಂದು ಆರೋಪಿಸಿ, ಅಡುಗೆ ಸಿಬ್ಬಂದಿ ಮತ್ತು ಶಾಲಾ ಮುಖ್ಯೋಪಾಧ್ಯಾಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 'ಸರ್ಕಾರ ಬಿಸಿಯೂಟಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತದೆ. ಆದರೆ, ಮಕ್ಕಳಿಗೆ ನೀಡುವ ಅಕ್ಕಿ ಮತ್ತು ಇತರ ಧಾನ್ಯಗಳನ್ನು ಸೂಕ್ತವಾಗಿ ಸಂಗ್ರಹಿಸದೆ ಇರುವುದು ಎಷ್ಟು ಸರಿ? ನುಶಿ ಹಿಡಿದ ಹಳಸಿದ ಅಕ್ಕಿಯನ್ನು ಅಡುಗೆಗೆ ಬಳಸಿ, ವಿಷಾಹಾರ ನೀಡಲು ಮುಂದಾಗಿದ್ದೀರಾ?' ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯ ಕೊರತೆ
ನೃಪತುಂಗ ಪ್ರೌಢ ಶಾಲೆ ಅನುದಾನಿತ ಶಾಲೆಯಾಗಿದ್ದರೆ, ಹೊಸಲಿಂಗಾಪುರ ಶಾಲೆಯು ಸರ್ಕಾರಿ ಶಾಲೆಯಾಗಿದೆ. ಎರಡೂ ಶಾಲೆಗಳಲ್ಲಿ ಒಂದೇ ರೀತಿಯ ನಿರ್ಲಕ್ಷ್ಯ ಕಂಡುಬಂದಿರುವುದು ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯ ಕೊರತೆಯನ್ನು ಎತ್ತಿ ತೋರಿಸಿದೆ. ಶಾಲೆಯಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿ ಮತ್ತು ಬೇಳೆಗಳ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದಾಗ, ಅಲ್ಲಿಯೂ ಕೂಡ ಕಳಪೆ ಸಂಗ್ರಹಣೆಯಿಂದಾಗಿ ಧಾನ್ಯಗಳು ಹಾಳಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.
ಪದೇ ಪದೇ ದೂರು
ಬಿಸಿಯೂಟದ ಗುಣಮಟ್ಟ ಮತ್ತು ಸ್ವಚ್ಛತೆಯ ಬಗ್ಗೆ ಪದೇ ಪದೇ ದೂರುಗಳು ಬರುತ್ತಿದ್ದರೂ, ಇಲಾಖೆ ಕಠಿಣ ಕ್ರಮ ಕೈಗೊಳ್ಳದಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಮಕ್ಕಳು ಈ ಊಟವನ್ನು ಸೇವಿಸಿದ್ದರೆ ಸಾಮೂಹಿಕವಾಗಿ ಅಸ್ವಸ್ಥರಾಗುವ ಸಾಧ್ಯತೆಗಳಿದ್ದವು.
ಈ ಘಟನೆಯ ಕುರಿತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಬೇಕು ಮತ್ತು ನಿರ್ಲಕ್ಷ್ಯ ತೋರಿದ ಸಿಬ್ಬಂದಿಯ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಆಡಳಿತ ಮಂಡಳಿಗಳು ಮತ್ತು ಅಡುಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.

