- Home
- Karnataka Districts
- Mysuru: ಪುತ್ರ ಸಂತಾನದ ನೆನಪಿಗೆ ಒಡೆಯರ್ ನೀಡಿದ 11 ಕೆಜಿ ಬಂಗಾರದ ಮುಖವಾಡ; ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ
Mysuru: ಪುತ್ರ ಸಂತಾನದ ನೆನಪಿಗೆ ಒಡೆಯರ್ ನೀಡಿದ 11 ಕೆಜಿ ಬಂಗಾರದ ಮುಖವಾಡ; ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ
ಶಿವರಾತ್ರಿಯಂದು ಮೈಸೂರಿನ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. ಜಯಚಾಮರಾಜೇಂದ್ರ ಒಡೆಯರ್ ಅವರು 1954ರಲ್ಲಿ ನೀಡಿದ ಈ ಮುಖವಾಡದ ದರ್ಶನವು ವರ್ಷಕ್ಕೊಮ್ಮೆ ಮಾತ್ರ ಲಭ್ಯವಿದೆ.

11 ಕೆಜಿ ಚಿನ್ನದ ಮುಖವಾಡ
ಶಿವರಾತ್ರಿಯ ವಿಶೇಷವಾಗಿ ಶಿವಲಿಂಗಕ್ಕೆ ಅಲಂಕರಿಸಲು ಬರೋಬ್ಬರಿ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತರಲಾಗಿದೆ. ಶಿವ ಮುಖವಾಡ ಮಾತ್ರವಲ್ಲೆ, ಗಂಗೆಯ ಮುಖವಾಡ ಕೂಡ ಅಪರಂಜಿ ಚಿನ್ನದ್ದಾಗಿದೆ.
ವರ್ಷಕ್ಕೊಮ್ಮೆ ಮಾತ್ರ ದರ್ಶನ
ಈ ಪವಿತ್ರ ಚಿನ್ನದ ಮುಖವಾಡವನ್ನು ವರ್ಷವಿಡೀ ಖಜಾನೆಯಲ್ಲಿ ಇಡಲಾಗುತ್ತದೆಯಾದರೂ, ಕೇವಲ ಶಿವರಾತ್ರಿಯ ದಿನದಂದು ಮಾತ್ರ ಶಿವಲಿಂಗಕ್ಕೆ ಧಾರಣೆ ಮಾಡುವುದು ಇಲ್ಲಿನ ಪರಂಪರೆಯಾಗಿದೆ. ಅರಮನೆ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಯಂದು ಪೂಜೆ ಸಲ್ಲಿಸಲಾಗುತ್ತದೆ.
ಐತಿಹಾಸಿಕ ಹಿನ್ನೆಲೆ
ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ಪುತ್ರ ಸಂತಾನವಾದ ಸವಿನೆನಪಿಗಾಗಿ 1954ರಲ್ಲಿ ಈ ಅಮೂಲ್ಯವಾದ ಚಿನ್ನದ ಮುಖವಾಡವನ್ನು ದೇವರಿಗೆ ಕಾಣಿಕೆಯಾಗಿ ನೀಡಿದ್ದರು.
ಮುಖವಾಡದ ವಿಶೇಷತೆ
ಮೈಸೂರು ಮಹಾರಾಜರು ತ್ರಿಣೇಶ್ವರನಿಗೆ ಕಾಣಿಕೆ ನೀಡಿರುವ ಕೊಳಗದಲ್ಲಿ ಒಂದು ಚಿನ್ನದ ಜಟಾಮುಕುಟ, ಒಂದು ಚಿನ್ನದ ಕರ್ಣಕುಂಡಲ, ಒಂದು ಚಿನ್ನದ ತಾಟಂಕ, ಎರಡು ಲೋಲಕ, ಎರಡು ಕೆಂಪಿನ ಹರಳಿನ ಓಲೆಗಳು, ಹಣೆಯಲ್ಲಿ ಕೆಂಪು ಕಲ್ಲಿನ ತಿಲಕ, ಒಂದು ಸಣ್ಣ ಮೂಗುತಿ ಇರುವ ಒಂದು ಚಿನ್ನದ ಗಂಗೆ ನೀಡಿದ್ದಾರೆ. ಚಿನ್ನದ ಕೊಳಗವು ಏಳು ಕೆಂಪು ಕಲ್ಲುಗಳು, ಬೆಳ್ಳಿಯ ಅರ್ಧ ಚಂದ್ರ ಮತ್ತು ಬೆಳ್ಳಿಯ ಒಂದು ತಿರುಪು ಹೊಂದಿದೆ.
ಭಕ್ತರ ಸಾಗರ
ವರ್ಷಕ್ಕೊಮ್ಮೆ ಮಾತ್ರ ಸಿಗುವ ಈ ಅಪರೂಪದ ದರ್ಶನವನ್ನು ಪಡೆಯಲು ಮೈಸೂರಿನಾದ್ಯಂತ ಸಾವಿರಾರು ಭಕ್ತರು ಮುಂಜಾನೆಯಿಂದಲೇ ಅರಮನೆ ಆವರಣಕ್ಕೆ ಆಗಮಿಸುತ್ತಿದ್ದು, ಭಕ್ತರಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

