ಬೇಯಿಸಿದ ಮೊಟ್ಟೆಯನ್ನ ಎಷ್ಟು ದಿನ ಇಡಬಹುದು, ಫ್ರೆಶ್ ಆಗಿರಬೇಕೆಂದ್ರೆ ಏನ್ ಮಾಡ್ಬೇಕು?
Boiled Eggs Storage: ಮೊಟ್ಟೆಯ ಫ್ರೆಶ್‌ನೆಸ್ ಕಾಪಾಡಿಕೊಳ್ಳಲು ಸರಿಯಾಗಿ ಸಂಗ್ರಹಿಸುವುದು ಅತ್ಯಗತ್ಯವಾಗುತ್ತದೆ. ಹಾಗಾದರೆ ಬೇಯಿಸಿದ ಮೊಟ್ಟೆಗಳನ್ನು ಸಂಗ್ರಹಿಸಲು ಸರಿಯಾದ ಮಾರ್ಗ ಯಾವುದು?. ನೋಡೋಣ ಬನ್ನಿ..

ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ
ಮೊಟ್ಟೆ ಬಹುತೇಕರ ಬ್ರೇಕ್‌ಫಾಸ್ಟ್ ಆಗಿದೆ. ಮೊಟ್ಟೆ ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವುದರಿಂದ ಫಿಟ್‌ನೆಸ್ ಉತ್ಸಾಹಿಗಳು ಸಹ ಅವುಗಳನ್ನು ಹೆಚ್ಚಾಗಿ ತಿನ್ನಲು ಬಯಸುತ್ತಾರೆ. ಕೆಲವರು ಇವುಗಳನ್ನು ಹಸಿಯಾಗಿಯೇ ತಿನ್ನುತ್ತಾರೆ. ಆದರೆ ಬೇಯಿಸಿದ ಮೊಟ್ಟೆಗಳನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಸಂಗ್ರಹಿಸಲು ಸರಿಯಾದ ಮಾರ್ಗ
ಮೊಟ್ಟೆಗಳು ಹಲವಾರು ದಿನಗಳವರೆಗೆ ಹಾಳಾಗುವುದಿಲ್ಲ. ಕೆಲವೊಮ್ಮೆ ಜನರು ಒಂದೇ ಬಾರಿಗೆ ಅಗತ್ಯಕ್ಕಿಂತ ಹೆಚ್ಚು ಮೊಟ್ಟೆಗಳನ್ನು ಕುದಿಸುತ್ತಾರೆ, ಆಗ ಅವುಗಳನ್ನು ಎತ್ತಿಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದರೆ ಅವುಗಳ ಫ್ರೆಶ್‌ನೆಸ್ ಕಾಪಾಡಿಕೊಳ್ಳಲು ಸರಿಯಾಗಿ ಸಂಗ್ರಹಿಸುವುದು ಅತ್ಯಗತ್ಯವಾಗುತ್ತದೆ. ಹಾಗಾದರೆ ಬೇಯಿಸಿದ ಮೊಟ್ಟೆಗಳನ್ನು ಸಂಗ್ರಹಿಸಲು ಸರಿಯಾದ ಮಾರ್ಗ ಯಾವುದು?. ನೋಡೋಣ ಬನ್ನಿ..
ಬ್ಯಾಕ್ಟೀರಿಯಾಗಳು ಪ್ರವೇಶಿಸುವ ಅಪಾಯ
ಯುಎಸ್ ಆಹಾರ ಮತ್ತು ಔಷಧ ಆಡಳಿತದ ಪ್ರಕಾರ, ಕುದಿಸಿ ಬೇಯಿಸಿದ ಮೊಟ್ಟೆಯನ್ನ ಒಂದು ವಾರದೊಳಗೆ ಸೇವಿಸಬೇಕು. ಈ ಸಮಯದಲ್ಲಿ ಶೆಲ್ ಅಂದರೆ ಸಿಪ್ಪೆ ತೆಗೆಯದಿರುವುದು ಉತ್ತಮ. ಏಕೆಂದರೆ ಸಿಪ್ಪೆಯು ಮೊಟ್ಟೆಯನ್ನ ಹೆಚ್ಚು ಕಾಲ ತಾಜಾವಾಗಿರಿಸುತ್ತದೆ. ಶೆಲ್ ತೆಗೆಯುವುದರಿಂದ ಬ್ಯಾಕ್ಟೀರಿಯಾಗಳು ಮೊಟ್ಟೆಯನ್ನು ಪ್ರವೇಶಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಮೃದುವಾಗಿ ಬೇಯಿಸಿದ ಮೊಟ್ಟೆಗಳು ಬೇಗನೆ ಹಾಳಾಗುತ್ತವೆ.
ಗಾಳಿಯಾಡದ ಡಬ್ಬಿ ಬಳಸಿ
ಬೇಯಿಸಿದ ಮೊಟ್ಟೆಯನ್ನ ಯಾವಾಗಲೂ ಫ್ರಿಜ್‌ನಲ್ಲಿ ಸಂಗ್ರಹಿಸಿ. ಮೊಟ್ಟೆಯ ವಾಸನೆಯು ಫ್ರಿಜ್‌ನಲ್ಲಿರುವ ಇತರ ಆಹಾರ ಪದಾರ್ಥಗಳಲ್ಲಿ ಹೀರಿಕೊಳ್ಳುವುದನ್ನು ತಡೆಯಲು ಗಾಳಿಯಾಡದ ಡಬ್ಬಿ ಬಳಸಿ. ಒಂದು ವೇಳೆ ನೀವು ಸಿಪ್ಪೆಗಳನ್ನು ತೆಗೆದಿದ್ದರೆ ಹಾಳಾಗುವುದನ್ನು ತಡೆಯಲು ಅವುಗಳನ್ನು ಮುಚ್ಚಿಡುವುದು ಮುಖ್ಯ. ಇದಲ್ಲದೆ, ಮೊಟ್ಟೆಯನ್ನ ಅವುಗಳ ಸಿಪ್ಪೆಯೊಂದಿಗೆ ಸಂಗ್ರಹಿಸುವುದರಿಂದ ಅವು ಹೆಚ್ಚು ಕಾಲ ತಾಜಾವಾಗಿರುತ್ತವೆ. ಸಿಪ್ಪೆ ಮೊಟ್ಟೆಗಳನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತವೆ, ಅವು ಹಾಳಾಗುವುದನ್ನು ತಡೆಯುತ್ತವೆ.
ವಾಸನೆಯನ್ನು ಪರೀಕ್ಷಿಸಲು ಮರೆಯದಿರಿ
ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಎಮಿಲಿ ರೂಬಿನ್, ವಿವರಿಸಿರುವ ಪ್ರಕಾರ ಗಟ್ಟಿಯಾಗಿ ಬೇಯಿಸಿದ ಮೊಟ್ಟೆಗಳು ಕೆಟ್ಟುಹೋದಾಗ ಅವು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು. ನೀವು ಒಂದು ವಾರಕ್ಕಿಂತ ಹೆಚ್ಚು ಕಾಲ ಫ್ರಿಜ್‌ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿದ್ದರೆ ಅವುಗಳನ್ನು ಬಳಸುವ ಮೊದಲು ಅವುಗಳ ವಾಸನೆಯನ್ನು ಪರೀಕ್ಷಿಸಲು ಮರೆಯದಿರಿ.
ಹಸಿರು ಬಣ್ಣ ಕಾಣಿಸಿಕೊಂಡರೆ
ರೂಬಿನ್ ಪ್ರಕಾರ, ಮೊಟ್ಟೆಯ ಹಳದಿ ಲೋಳೆಯ ಮೇಲೆ ಹಸಿರು ಬಣ್ಣ ಕಾಣಿಸಿಕೊಂಡರೆ ಅದು ಹಾಳಾಗುವ ಸೂಚನೆಯಲ್ಲ. ಹಳದಿ ಲೋಳೆಯಲ್ಲಿರುವ ಕಬ್ಬಿಣ ಮತ್ತು ಮೊಟ್ಟೆಯ ಬಿಳಿ ಲೋಳೆಯಲ್ಲಿರುವ ಹೈಡ್ರೋಜನ್ ಸಲ್ಫೈಡ್ ನಡುವಿನ ನೈಸರ್ಗಿಕ ಪ್ರತಿಕ್ರಿಯೆಯಿಂದ ಇದು ಉಂಟಾಗುತ್ತದೆ. ವಾಸ್ತವವಾಗಿ ಇದರರ್ಥ ಮೊಟ್ಟೆ ಅತಿಯಾಗಿ ಬೇಯಿಸಲಾಗಿದೆ ಎಂದರ್ಥ. ಇದು ನೋಡಲು ಅಸ್ಪಷ್ಟವಾಗಿದ್ದರೂ, ಅದು ಅಪಾಯಕಾರಿಯಲ್ಲ. ಆದರೆ ಹಳದಿ ಲೋಳೆ ಅಥವಾ ಮೊಟ್ಟೆಯ ಬಿಳಿ ಲೋಳೆಯ ಮೇಲೆ ಗಾಢ ಕಂದು, ಕಪ್ಪು ಅಥವಾ ಹಸಿರು ಕಲೆಗಳಿದ್ದರೆ ಅದು ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾದ ಸಂಕೇತವಾಗಿರಬಹುದು. ಅಂತಹ ಮೊಟ್ಟೆಯನ್ನ ಸೇವಿಸಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

