- Home
- News
- State
- ಮಳೆಗಾಲಕ್ಕೂ ಮುನ್ನ ತುಂಗಭದ್ರಾ ಜಲಾಶಯ ಸೇಫ್; ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಯಶಸ್ವಿ
ಮಳೆಗಾಲಕ್ಕೂ ಮುನ್ನ ತುಂಗಭದ್ರಾ ಜಲಾಶಯ ಸೇಫ್; ಎಲ್ಲಾ 33 ನೂತನ ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಯಶಸ್ವಿ
ಆಗಸ್ಟ್ 2024ರಲ್ಲಿ ಗೇಟ್ ಕಿತ್ತುಹೋಗಿ ನೀರು ಸೋರಿಕೆಯಾದ ನಂತರ, ತುಂಗಭದ್ರಾ ಜಲಾಶಯದ ಎಲ್ಲಾ 33 ಶಿಥಿಲಗೊಂಡಿದ್ದ ಗೇಟ್‌ಗಳನ್ನು ಬದಲಾಯಿಸಲು ನಿರ್ಧರಿಸಲಾಯಿತು. ₹52 ಕೋಟಿ ವೆಚ್ಚದ ಈ ಬೃಹತ್ ಯೋಜನೆಯಡಿ, ನೂತನ ಗೇಟ್‌ಗಳ ಅಳವಡಿಕೆ ಕಾರ್ಯವು ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ.

ವಿಜಯನಗರ (ಏ.26): ತುಂಗಭದ್ರಾ ಜಲಾಶಯದ 33 ನೂತನ ಗೇಟ್ ಅಳವಡಿಕೆ ಕಾರ್ಯ ಶನಿವಾರ ಸಂಪೂರ್ಣಗೊಂಡಿದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನೂತನ ಗೇಟ್ ಅಳವಡಿಕೆ ಕಾರ್ಯ ಡಿ.24, 2025 ರಿಂದ ಪ್ರಾರಂಭವಾಗಿದ್ದು, ಏ.25ಕ್ಕೆ ಸಂಪನ್ನಗೊಂಡಿದೆ. ಇನ್ನೂ ಸಣ್ಣಪುಟ್ಟ ಕೆಲಸಗಳಿದ್ದು, ಮೇ ಅಂತ್ಯದವರೆಗೆ ಪೂರ್ಣಗೊಳ್ಳಲಿದೆ ಎಂದರು.ಆಗಸ್ಟ್ 2024ರ ಮಧ್ಯರಾತ್ರಿ ತುಂಗಭದ್ರಾ ಜಲಾಶಯದ ಗೇಟ್ ನಂ.19 ನೀರಿನ ರಭಸಕ್ಕೆ ಕಿತ್ತು ಹೋದ ಪರಿಣಾಮ 45,000 ಕ್ಯೂಸಕ್ ನೀರು ಸೋರಿಕೆ ಆಗಿತ್ತು.
ತಕ್ಷಣ ಎಚ್ಚೆತ್ತ ತುಂಗಭದ್ರಾ ಮಂಡಳಿ ಅಧಿಕಾರಿಗಳು ಜಲಾಶಯ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರನ್ನು ಕರೆಸಿ ಗೇಟ್ ನಂ.19ಕ್ಕೆ ಸ್ಟಾಪ್ ಲಾಕ್ ಅಳವಡಿಸಿ ಪೋಲಾಗುತ್ತಿದ್ದ ನೀರನ್ನು ತಡೆಯುವಲ್ಲಿ ಯಶಸ್ವಿಯಾದರು.
ತಜ್ಞ ಕನ್ನಯ್ಯ ನಾಯ್ಡು ತುಂಗಭದ್ರಾ ಜಲಾಶಯದ ಎಲ್ಲ 33 ಗೇಟ್ ಪರಿಶೀಲಿಸಿ ಜಲಾಶಯದ ಗೇಟ್‌ಗಳು ಶಿಥಿಲಗೊಂಡಿದ್ದು, ಜಲಾಶಯದ ನೀರನ್ನು ತಡೆಯುವ ಸಾಮರ್ಥ್ಯ ಗೇಟ್‌ಗಳು ಕಳೆದುಕೊಂಡಿವೆ ತಕ್ಷಣವೇ ಬದಲಿಸಬೇಕು ಎಂದು ಕರ್ನಾಟಕ ಹಾಗೂ ಆಂಧ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು.
ಕನ್ನಯ್ಯ ನಾಯ್ಡು ಸಲಹೆ ಗಂಭೀರವಾಗಿ ಪರಿಗಣಿಸಿದ ತುಂಗಭದ್ರಾ ಮಂಡಳಿಯು ಮೇ. 2025ರಲ್ಲಿ ತುಂಗಭದ್ರಾ ಜಲಾಶಯದ ನೂತನ ಗೇಟ್ ಅಳವಡಿಸುವ ನಿಟ್ಟಿನಲ್ಲಿ ₹52 ಕೋಟಿ ಟೆಂಡರ್ ಕರೆದು ಗುಜರಾತ್ ಮೂಲದ ಕಂಪನಿಗೆ ಗೇಟ್ ಅಳವಡಿಸುವ ಟೆಂಡರ್ ನೀಡಿದ್ದರು.
ಜೂನ್ 2025ರಲ್ಲಿ ಗೇಟ್ ಬದಲಿಸುವ ನಿಟ್ಟಿನಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಒಂದುವರೆ ವರ್ಷ ಅವಧಿ ನೀಡಲಾಯಿತು, ಅಂದರೆ, ಜೂನ್ 2025 ರಿಂದ ಡಿಸೆಂಬರ್ 2026ರವರೆಗೆ ಗೇಟ್ ಅಳವಡಿಕೆ ಕಾರ್ಯ ಮುಗಿಸಬೇಕು ಎಂದು ಗುತ್ತಿಗೆದಾರನೊಂದಿಗೆ ಒಪ್ಪಂದ ಮಾಡಲಾಯಿತು.
ಜನವರಿ ತಿಂಗಳಲ್ಲಿ ಒಂದು ಗೇಟ್ ಸಹ ಅಳವಡಿಕೆ ಮಾಡದ ಕಾರಣ ಕನ್ನಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಗೇಟ್ ಅಳವಡಿಕೆ ಕಾರ್ಯಕ್ಕೆ ಮೂರು ಪ್ರತ್ಯೇಕ ತಂಡ ರಚಿಸಿ ಒಂದು ತಂಡದಿಂದ ಗೇಟ್ ನಿರ್ಮಾಣ, ಇನ್ನೊಂದು ತಂಡ ಹಳೇ ಗೇಟ್ ತೆರವು ಕಾರ್ಯಾಚರಣೆ, ಮೂರನೇ ತಂಡದಿಂದ ನೂತನ ಗೇಟ್ ಅಳವಡಿಕೆ ಕಾರ್ಯ ಮಾಡಲಾಯಿತು.
ಈ ಮೂರು ತಂಡದಲ್ಲಿ ಒಟ್ಟು 120 ಜನರು ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದರು. ಇದಲ್ಲದೆ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ, ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ತುಂಗಭದ್ರಾ ಮಂಡಳಿ ಇಂಜಿನಿಯರ್ ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

