ನಿಧಾನ ಕೈ ಹಾಕಿದ, ಸುಮ್ನೆ ಬಿಡ್ತಿನಾ? ಬಸ್ನಲ್ಲಿ ನಡೆದ ಕರಾಳ ಘಟನೆ ನೆನೆದ Bigg Boss ರಿಷಾ ಗೌಡ
ಬಿಗ್ಬಾಸ್ ಖ್ಯಾತಿಯ ನಟಿ ರಿಷಾ ಗೌಡ ಅವರು, ಬೆಂಗಳೂರಿನ ಬಸ್ನಲ್ಲಿ ಪ್ರಯಾಣಿಸುವಾಗ ತಮಗಾದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದವನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೆ, ಮಹಿಳೆಯರ ಉಡುಗೆಗೂ ಇಂತಹ ಘಟನೆಗಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತೀಟೆ ತೀರಿಸಿಕೊಳ್ಳೋ ಕೆಲ ಪುರುಷರು
ಬಸ್, ಟ್ರೈನ್ ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಮೈಮುಟ್ಟಿ ಕೆಲವು ಪುರುಷರು ತಮ್ಮ ತೀಟೆಯನ್ನು ತೀರಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಹೆಣ್ಣುಮಕ್ಕಳ ಸಿಗಲಿಲ್ಲ ಎಂತಾದರೆ ಹೆಣ್ಣು ನಾಯಿ, ಬೆಕ್ಕು, ಕತ್ತೆ, ಮೇಕೆಯನ್ನೂ ಬಿಡದ ಜನರು ಇದ್ದಾರೆ. ಇನ್ನು ಬಸ್ನಲ್ಲಿ ಪ್ರಯಾಣ ಮಾಡುವ ಹೆಣ್ಣುಮಕ್ಕಳ ಸ್ಥಿತಿ ಇಂಥ ಪುರುಷರಿಂದ ದೇವರಿಗೇ ಪ್ರೀತಿ. ಕೆಲವೊಮ್ಮೆ ಬಸ್ ರಶ್ ಇದ್ದಾಗ ಆಕಸ್ಮಿಕವಾಗಿ ಕೈ ತಗುಲಿತೋ, ಉದ್ದೇಶಪೂರ್ವಕವಾಗಿ ಹಾಗೆ ಮಾಡುತ್ತಿದ್ದಾರೋ ಎಂದು ತಿಳಿಯದೇ ಗಲಾಟೆ ಮಾಡುವುದು ಸರಿಯಲ್ಲ ಎಂದು ಹಲವು ಹೆಣ್ಣುಮಕ್ಕಳು ಸುಮ್ಮನೇ ಕಿರಿಕಿರಿ ಅನುಭವಿಸುವುದು ಇದ್ದರೆ, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡುವ ಗಂಡಸರ ಬಗ್ಗೆ ತಿಳಿದರೆ ಎಲ್ಲಾ ಹೆಣ್ಣುಮಕ್ಕಳು ಸುಮ್ಮನೇ ಇರುವುದಿಲ್ಲ. ಅವರ ಗ್ರಹಚಾರ ಬಿಡಿಸುತ್ತಾರೆ.
ಬಿಗ್ಬಾಸ್ ರಿಷಾ ಗೌಡ
ಅದೇ ರೀತಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ಬಿಗ್ಬಾಸ್ ಖ್ಯಾತಿ ರಿಷಾ ಗೌಡ (Bigg Boss Risha Gowda) ಅವರಿಗೆ ಅನುಭವ ಆಗಿದ್ದು, ಅದರ ಬಗ್ಗೆ ಚಾನೆಲ್ ಒಂದರಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ ಬಸ್ನಲ್ಲಿ ಹೋಗುತ್ತಿದ್ದ ಸಂದರ್ಭದ ಘಟನೆಯನ್ನು ನಟಿ ಮೆಲುಕು ಹಾಕಿದ್ದಾರೆ.
ನಾರ್ಮಲ್ ಡ್ರೆಸ್
ಟಾಪ್ ಮತ್ತು ಜೀನ್ಸ್ ಧರಿಸಿ ಏರ್ಪೋರ್ಟ್ ಬಸ್ ಹತ್ತಿದ್ದೆ. ಬಸ್ಗೆ ಹೋಗುವುದು ಕಡಿಮೆ. ಆದರೆ ಅಂದು ಬಸ್ಗೆ ಹೋಗಿದ್ದೆ. ನನ್ನ ಹಿಂದೆ ಒಬ್ಬ ಆಸಾಮಿ ಕುಳಿತಿದ್ದ. ಪದೇ ಪದೇ ನನ್ನನ್ನು ಅಸಭ್ಯವಾಗಿ ಮುಟ್ಟುತ್ತಿದ್ದ. ಸಹಿಸಿಕೊಳ್ಳುವಷ್ಟು ಸಹಿಸಿಕೊಂಡು ಅಲ್ಲಿಯೇ ಅವನ ಕಪಾಳಕ್ಕೆ ಬಾರಿಸಿದೆ. ಇಷ್ಟಾದರೂ ಅಲ್ಲಿದ್ದ ಪುರುಷ ಪ್ರಯಾಣಿಕರು ಏನೂ ಆಗಿಯೇ ಇಲ್ಲವೆನ್ನುವಂತೆ ಸುಮ್ಮನೇ ಕಣ್ಕಣ್ ಬಿಟ್ಟು ನೋಡುತ್ತಿದ್ದರು. ಕಂಡಕ್ಟರ್ ಮಾತ್ರ ನೆರವಿಗೆ ಬಂದರು ಎಂದಿದ್ದಾರೆ ರಿಷಾ.
ಬಟ್ಟೆ ಪ್ರಶ್ನೆ ಅಲ್ಲ
ಇಂಥ ವಿಷಯ ಬಂದಾಗಲೆಲ್ಲಾ ಹೆಣ್ಣುಮಕ್ಕಳ ಬಟ್ಟೆ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಅದೇ ಕಾರಣಕ್ಕೆ ನಾನು ಜೀನ್ಸ್, ನಾರ್ಮಲ್ ಟಾಪ್ ಹಾಕಿಕೊಂಡು ಹೋಗಿದ್ದನ್ನು ಹೇಳಿರುವುದು. ಇಂಥ ಗಂಡಸರಿಗೆ ಸೀರೆ, ಲಂಗ, ಚೂಡಿದಾರ್ ಹೀಗೆ ಮೈತುಂಬಾ ಬಟ್ಟೆ ಹಾಕಿಕೊಂಡರೂ ತೀಟೆ ಬಿಡುವುದಿಲ್ಲ. ಒಟ್ಟಿನಲ್ಲಿ ಇಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆನೇ ಇಲ್ಲವಾಗಿದೆ ಎಂದಿದ್ದಾರೆ ನಟಿ.
ಇಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ
ಇಂಥ ಸಂದರ್ಭದಲ್ಲಿ ಹೆಣ್ಣುಮಕ್ಕಳು ದಿಟ್ಟತನ ಪ್ರದರ್ಶಿಸಿದರೆ ಅಲ್ಲಿದ್ದ ಪುರುಷರೂ ಸಹಾಯಕ್ಕೆ ಬರಬೇಕು. ಆದರೆ ಇಲ್ಲಿ ಹಾಗೆ ಆಗುತ್ತಿಲ್ಲ. ಕರ್ನಾಟಕ, ಭಾರತ ಎಲ್ಲಿಯೂ ಹೆಣ್ಣುಮಕ್ಕಳಿಗೆ ಸುರಕ್ಷಿತೆ ಇಲ್ಲ ಎಂದಿರುವ ನಟಿ, ತಾವು ದುಬೈನಲ್ಲಿ ಇದ್ದಾಗಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ದುಬೈನಲ್ಲಿ ಹೀಗೆಲ್ಲಾ ಆಗೋದೇ ಇಲ್ಲ
ದುಬೈನಲ್ಲಿ ರಾತ್ರಿ ಮೂರು ಗಂಟೆಯಾದರೂ ಒಬ್ಬ ಹೆಣ್ಣುಮಗಳು ಧೈರ್ಯವಾಗಿ ಓಡಾಡಬಹುದು. ಆದರೆ ಇಲ್ಲಿ 9 ಗಂಟೆ ಆದ್ಮೇಲೆ ಹೋಗೋದೇ ಕಷ್ಟವಾಗಿದೆ. ನಮ್ಮಲ್ಲಿ ಬೇರೆ ದೇಶಗಳಂತೆ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ. ಅದರಲ್ಲಿಯೂ ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಅಂದರೆ ಬರೀ ಅಡುಗೆ ಮನೆ ಕೆಲಸ ಮಾಡಿಕೊಂಡಿರಬೇಕು ಎನ್ನುವ ಮನಸ್ಥಿತಿ ಇನ್ನೂ ಇದೆ. ಹುಡುಗರಿಗೆ ಎಷ್ಟು ಅಧಿಕಾರವಿದೆಯೋ ಅಷ್ಟೇ ಹುಡುಗಿಯರಿಗೂ ಇದೆ. ಆದರೆ ಸಮಾಜ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಅಷ್ಟೇ ಎಂದು ನೋವಿನಿಂದ ನಟಿ ನುಡಿದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

