Divorce Cases: ಅಷ್ಟಕ್ಕೂ ಮಹಿಳೆಯರು ಡಿವೋರ್ಸ್ ತೆಗೆದುಕೊಳ್ಳುವ ಸಂಖ್ಯೆ ಹೆಚ್ಚಾಗೋದಕ್ಕೆ ಕಾರಣ ಏನು?
ಹಿಂದಿನ ದಿನಗಳಲ್ಲಿ ಮದುವೆಯನ್ನು ಏಳು ಜೀವಗಳ ಬಂಧವೆಂದು ಪರಿಗಣಿಸಲಾಗಿತ್ತು. ಅಜ್ಜ-ಅಜ್ಜಿಯರ ಪೀಳಿಗೆಯನ್ನು ನೋಡಿದರೆ, ಒಮ್ಮೆ ಮದುವೆಯಾದ ನಂತರ, ಆ ಸಂಬಂಧವು ಜೀವನಪರ್ಯಂತ ಉಳಿಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಹೆಚ್ಚಾಗಲು ಕಾರಣ ಏನು?

ಮದುವೆ ಅನ್ನೋದು ಮಕ್ಕಳ ಆಟವಲ್ಲ, ಅದು ಏಳು ಜನ್ಮಗಳ ಬಂಧ... ನೀವು ಮನೆಯಲ್ಲಿ ಹಿರಿಯರಿಂದ ಇದನ್ನು ಹೆಚ್ಚಾಗಿ ಕೇಳಿರಬೇಕು. ಮದುವೆಯನ್ನು ಜೀವನದ ಪ್ರಮುಖ ಹಂತವೆಂದು ಪರಿಗಣಿಸಲಾಗಿತ್ತು. ಆದರೆ ಈಗ ಈ ಹಂತ ದುರ್ಬಲಗೊಳ್ಳುತ್ತಿದೆ. ವಿಚ್ಛೇದನ ಪ್ರಕರಣಗಳು (divorce cases) ಮುನ್ನೆಲೆಗೆ ಬರುತ್ತಿವೆ. ಇದರ ಹಿಂದಿನ ಕಾರಣವೇನು ಮತ್ತು ಅಂತಹ ಪರಿಸ್ಥಿತಿ ಯಾವಾಗ ಉದ್ಭವಿಸುತ್ತದೆ ಅನ್ನೋದನ್ನು ತಿಳಿಯೋಣ.
ಈಗ ಮದುವೆಯನ್ನು ಉಳಿಸಿಕೊಳ್ಳಲು ಯಾವುದೇ ಒತ್ತಡವಿಲ್ಲ
ಹಿಂದಿನ ಕಾಲದಲ್ಲಿ ಮದುವೆಯನ್ನು (marriage) ಏಳು ಜನ್ಮಗಳ ಬಂಧವೆಂದು ಪರಿಗಣಿಸಲಾಗಿತ್ತು. ನಾವು ಅಜ್ಜ-ಅಜ್ಜಿಯರ ಪೀಳಿಗೆಯನ್ನು ನೋಡಿದರೆ, ಒಮ್ಮೆ ಮದುವೆಯಾದ ನಂತರ, ಸಂಬಂಧವು ಜೀವನಪರ್ಯಂತ ಉಳಿಯುತ್ತಿತ್ತು. ಈ ಸಂಬಂಧವನ್ನು ಮುರಿಯುವುದನ್ನು ಬಿಟ್ಟುಬಿಡಿ, ಅಂತಹ ಆಲೋಚನೆಗಳು ಅವರ ಮನಸ್ಸಿಗೆ ಎಂದಿಗೂ ಬರುತ್ತಿರಲಿಲ್ಲ. ಇದರ ಹಿಂದೆ ಹಲವು ಕಾರಣಗಳಿರಬಹುದು, ಆ ಸಮಯದಲ್ಲಿ ಮಹಿಳೆಯರ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆಗಳು ಇರಲಿಲ್ಲ, ಅಥವಾ ಯಾವುದೇ ರೀತಿಯ ಸಹಾಯವೂ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮದುವೆಯನ್ನು ಉಳಿಸಬೇಕಾದ್ದು ಮುಖ್ಯವಾಗಿತ್ತು. ಆದರೆ ಈಗ ಮಹಿಳೆಯರಿಗೆ ಆಯ್ಕೆ ಇದೆ. ಕೇವಲ ಪ್ರದರ್ಶನಕ್ಕಾಗಿ ಮದುವೆಯ ಬಂಧವನ್ನು ಕಾಪಾಡಿಕೊಳ್ಳುವ ಹೊರೆ ಅವರ ಮೇಲಿಲ್ಲ. ಅವರು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಅವರು ಪ್ರೀತಿಯಿಂದ ಕಟ್ಟಿದ ಸಂಸಾರ, ಮನೆಯಿಂದ ಹೊರ ಬರುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಕೇವಲ ಒಳ್ಳೆಯವರಾಗಿರುವುದಷ್ಟೇ ಸಾಲದು
ಒಂದು ತಲೆಮಾರಿನ ಹಿಂದೆ, ಒಬ್ಬ ಮಹಿಳೆಗೆ ತನ್ನ ಪತಿ ಮೋಸ ಮಾಡದಿರುವುದು, (cheating husband) ಹೊಡೆಯದಿರುವುದು ಮದುವೆ ಉಳಿಸಿಕೊಳ್ಳಲು ಸಾಕಾಗಿತ್ತು. ಆದರೆ ಕಾಲ ಬದಲಾಗಿದೆ. ಮಹಿಳೆಯರು ಈಗ ಸಿಂಪಲ್ ವಿಷಯಗಳನ್ನು ಸಹ ಪ್ರಶ್ನಿಸುತ್ತಾರೆ. ಅವರು ಭಾವನಾತ್ಮಕ ಸಂಪರ್ಕ, ಪರಸ್ಪರ ಬೆಂಬಲವನ್ನು ಬಯಸುತ್ತಿದ್ದಾರೆ. ಅವರಿಗೆ ಅದು ಸಿಗದಿದ್ದರೆ, ಅವರು ದೂರ ಸರಿಯುತ್ತಾರೆ.
ವಿಚ್ಛೇದನ ಇನ್ನು ಮುಂದೆ ನಾಚಿಕೆಗೇಡಿನ ಸಂಗತಿಯಲ್ಲ
ಮಹಿಳೆಯರು ಈಗ ವಿಚ್ಛೇದನವನ್ನು ನಾಚಿಕೆಯಿಂದಲ್ಲ, ಬದಲಾಗಿ ಸ್ಪಷ್ಟತೆಯಿಂದ ನೋಡುತ್ತಾರೆ. ಮಹಿಳೆಯರು ಇನ್ನು ಮುಂದೆ ವಿಚ್ಛೇದನವನ್ನು ಅವಮಾನವೆಂದು ನೋಡುವುದಿಲ್ಲ, ಬದಲಾಗಿ ನಿರ್ಧಾರವೆಂದು ನೋಡುತ್ತಾರೆ. ನೆರೆಹೊರೆಯವರು ಮತ್ತು ಸಮಾಜ ಏನು ಹೇಳುತ್ತದೆ ಎಂಬುದರ ಬಗ್ಗೆ ಮಹಿಳೆಯರು ಇನ್ನು ಮುಂದೆ ಚಿಂತಿಸುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಮಹಿಳೆಯರು ತಮ್ಮ ಮಕ್ಕಳಿಗಾಗಿ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ
ಅನೇಕ ಮಹಿಳೆಯರು ತಮ್ಮ ಮಕ್ಕಳಿಗಾಗಿ ಅತೃಪ್ತ ದಾಂಪತ್ಯ ಜೀವನಕ್ಕೆ(married life) ಬದ್ಧರಾಗಿರುತ್ತಾರೆ. ಆದರೆ ಮಕ್ಕಳಿಗೆ ಬೇಕಾಗಿರುವುದು ಪರಿಪೂರ್ಣ ಕುಟುಂಬವಲ್ಲ, ಬದಲಾಗಿ ಭಾವನಾತ್ಮಕವಾಗಿ ಆರೋಗ್ಯಕರ ಕುಟುಂಬ. ಅವರು ತಮ್ಮ ಹೆತ್ತವರನ್ನು ನೋಡಿ ಕಲಿಯುತ್ತಾರೆ. ಒಬ್ಬ ಮಹಿಳೆ ತನ್ನ ಮನೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ತೋರಿಸಿಕೊಳ್ಳುವ ಬದಲು ಶಾಂತಿಯನ್ನು ಆರಿಸಿಕೊಂಡಾಗ, ಅವಳು ಮನೆಯನ್ನು ಮುರಿದಿದ್ದಾಳೆ ಎಂದರ್ಥವಲ್ಲ. ಆ ಮಹಿಳೆ ತನ್ನ ಮಕ್ಕಳಿಗೆ ಸ್ವಾಭಿಮಾನ ಹೇಗಿರುತ್ತದೆ ಎಂಬುದನ್ನು ತೋರಿಸುತ್ತಿದ್ದಾಳೆ.
ಒಂಟಿತನ ಅನುಭವಿಸಲು ಪ್ರಾರಂಭಿಸಿದಾಗ ಡಿವೋರ್ಸ್
ಸಂಗಾತಿಯು ಮಹಿಳೆಯ ಭಾವನೆಗಳನ್ನು ಅರ್ಥಮಾಡಿಕೊಳ್ಳದಿದ್ದಾಗ, ಅವಳು ಒಂಟಿತನ ಅನುಭವಿಸಲು ಪ್ರಾರಂಭಿಸುತ್ತಾಳೆ. ಅವಳನ್ನು ಯಾರೂ ಗಮನಿಸುವುದಿಲ್ಲ. ಅನೇಕ ಮಹಿಳೆಯರು ತಮ್ಮನ್ನು ಕೆಟ್ಟದಾಗಿ ನಡೆಸುತ್ತಾರೆ ಎನ್ನುವ ಕಾರಣಕ್ಕೆ ವಿಚ್ಛೇದನ ಪಡೆಯುತ್ತಿಲ್ಲ, ಬದಲಿಗೆ ಅವರನ್ನು ನೋಡಲು ಯಾರೂ ಇಲ್ಲ, ಭಾವನೆಗಳಿಗೆ ಸ್ಪಂಧಿಸಲು ಯಾರೂ ಇಲ್ಲ ಎನ್ನುವ ಕಾರಣಕ್ಕೆ ಡಿವೋರ್ಸ್ ಪಡೆಯುತ್ತಾರೆ.
ಮಹಿಳೆಯರು ಈಗ ಬದಲಾಗುತ್ತಿದ್ದಾರೆ
ವಿವಾಹ ಬಂಧಗಳು ಈಗ ದುರ್ಬಲಗೊಳ್ಳುತ್ತಿವೆ ಎನ್ನುವ ವಿಚಾರದ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತೆ. ಇದರಲ್ಲಿ ಬದಲಾವಣೆಗಳು ಗೋಚರಿಸುತ್ತಿವೆ. ಆದರೆ ಸತ್ಯವೆಂದರೆ ಮಹಿಳೆಯರು ಈಗ ಬದಲಾಗಿದ್ದಾರೆ. ಇದು ದುರಂತವಲ್ಲ, ಈ ಬದಲಾವಣೆಯ ಅಗತ್ಯ ಇದೆ. ಮಹಿಳೆಯರು ಪ್ರೀತಿಯಿಂದ ದೂರ ಸರಿಯುತ್ತಿಲ್ಲ, ಬದಲಾಗಿ ಪ್ರೀತಿಯ ಕಡೆಗೆ ಸಾಗುತ್ತಿದ್ದಾರೆ. ತಮಗೆ ಗೌರವ ನೀಡುವ, ತಮ್ಮ ಸ್ವಾಭಿಮಾನಕ್ಕೆ ಅಡ್ಡ ಬಾರದ, ನಿಸ್ವಾರ್ಥ ಪ್ರೀತಿಯನ್ನು ಕೊಡುವ ಸಂಬಂಧವನ್ನು ಅವರು ಬಯಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

