ಕ್ರೈಸ್ತ ದೇಶವಾದ ಅಮೆರಿಕದಲ್ಲೇಕೆ ಆತನ ಪ್ರತಿಮೆ? ಟ್ರಂಪ್ ಆಪ್ತನ ಪ್ರಶ್ನೆ
ಅಮೆರಿಕದ ರಿಪಬ್ಲಿಕನ್ ನಾಯಕರೊಬ್ಬರು ಹನುಮಂತನನ್ನು 'ನಕಲಿ ದೇವರು' ಎಂದು ಕರೆದು ಟೆಕ್ಸಾಸ್‌ನಲ್ಲಿರುವ ಪ್ರತಿಮೆಯನ್ನು ಪ್ರಶ್ನಿಸಿದ್ದಾರೆ. ಇದರೊಂದಿಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿರುವುದು ಭಾರತೀಯರಲ್ಲಿ ಆತಂಕ ಸೃಷ್ಟಿಸಿದೆ.

ಅಮೆರಿಕದಲ್ಲೇಕೆ ಆತನ ಪ್ರತಿಮೆ ಇದೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರ ಭಾರತ ವಿರೋಧಿ ಹೇಳಿಕೆಗಳು ಮುಂದುವರಿದಿದ್ದು, ಈ ಬಾರಿ ಹನುಮಂತ ದೇವರ ವಿರುದ್ಧ ರಿಪಬ್ಲಿಕನ್ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಹನುಮಂತ ನಕಲಿ ದೇವರು. ಕ್ರೈಸ್ತ ದೇಶವಾದ ಅಮೆರಿಕದಲ್ಲೇಕೆ ಆತನ ಪ್ರತಿಮೆ ಇದೆ? ಎಂದು ಪ್ರಶ್ನಿಸಿದ್ದಾರೆ.
ಅಲೆಕ್ಸಾಂಡರ್ ಡಂಕನ್
ಕಳೆದ ವಾರ ಟ್ವೀಟ್ ಮಾಡಿರುವ ಅಲೆಕ್ಸಾಂಡರ್ ಡಂಕನ್ ಅವರು ಟೆಕ್ಸಾಸ್‌ನಲ್ಲಿ ನಿರ್ಮಾಣ ಆಗಿರುವ 90 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಪ್ರಶ್ನಿಸಿದ್ದಾರೆ. ‘ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಾಗಿದ್ದು, ಇಲ್ಲಿ ನಕಲಿ ಹಿಂದೂ ದೇವರ ಪ್ರತಿಮೆ ಇರುವುದು ಸರಿಯಲ್ಲ. ಟೆಕ್ಸಾಸ್‌ನಲ್ಲಿ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಾವೇಕೆ ಅನುಮತಿ ನೀಡಿದ್ದೇವೆ?’ ಎಂದು ಪ್ರಶ್ನಿಸಿದ್ದಾರೆ.
ಸ್ಟ್ಯಾಚೂ ಆಫ್ ಯೂನಿಯನ್
ಇದಕ್ಕೆ ಅಮೆರಿಕ ಹಿಂದೂ ಪ್ರತಿಷ್ಠಾನ ಕಿಡಿಕಾರಿದ್ದು, ಡಂಕನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಟೆಕ್ಸಾಸ್‌ನ ಶುಗರ್ ಲ್ಯಾಂಡ್ ಎಂಬಲ್ಲಿ ಅಷ್ಟಲಕ್ಷ್ಮಿ ದೇವಸ್ಥಾನವಿದ್ದು ಅದರಲ್ಲಿ ಹನುಮಂತನ ಪ್ರತಿಮೆ ಸ್ಥಾಪಿಸಲಾಗಿದೆ. ಅದಕ್ಕೆ ‘ಸ್ಟ್ಯಾಚೂ ಆಫ್ ಯೂನಿಯನ್’ ಎಂದೂ ಕರೆಯುತ್ತಾರೆ.
ವೀಸಾ ಶುಲ್ಕ ಹೆಚ್ಚಳ
ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ವೀಸಾ ಶುಲ್ಕ ಹೆಚ್ಚಳ ಭಾರತೀಯರಲ್ಲಿ ಕಳವಳ ಉಂಟುಮಾಡಿದೆ. ಅಮೆರಿಕದ ಕಂಪನಿಗಳು ಭಾರತೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದು ಎಂಬ ಆತಂಕ ವ್ಯಕ್ತವಾಗಿದೆ. ಆದರೆ ವಿಶ್ವದ ಬೃಹತ್ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತ ಆತಂಕಪಡುವ ಅಗತ್ಯವಿಲ್ಲವೆಂಬುದು ಸ್ಪಷ್ಟ.
ಎಚ್-1ಬಿ ವೀಸಾ ಶುಲ್ಕ
ಸೆ.19ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಶುಲ್ಕದಲ್ಲಿ ಹೆಚ್ಚಳ ಮಾಡಿ, ವಾರ್ಷಿಕ 88 ಲಕ್ಷ ರು.ಗಳಿಗೆ ($100,000) ಏರಿಸಿರುವುದಾಗಿ ಘೋಷಿಸಿದರು. ಅನೇಕ ಭಾರತೀಯರಿಗೆ ಇದು ಬಾಂಬ್ ದಾಳಿ ಮಾಡಿದಂತಾಯಿತು. ಅಧಿಕಾರಕ್ಕೆ ಬಂದಂದಿನಿಂದಲೂ ‘ಅಮೆರಿಕ ಮೊದಲು’ ಎನ್ನುವ ತಮ್ಮ ನೀತಿಗನುಗುಣವಾಗಿ, ವಿದೇಶಿ ಉದ್ಯೋಗಿಗಳನ್ನು ಅಮೆರಿಕದ ಕಂಪನಿಗಳು ನೇಮಿಸಿಕೊಳ್ಳುವುದರ ವಿರುದ್ಧ ಟ್ರಂಪ್ ಸಿಡಿಯುತ್ತಲೇ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
