ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್ ಬೀಚ್ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ
ಏಳು ವರ್ಷಗಳ ನಿರ್ಮಾಣದ ನಂತರ, ಉತ್ತರ ಕೊರಿಯಾದ ವೊನ್ಸಾನ್-ಕಲ್ಮಾ ಬೀಚ್ ರೆಸಾರ್ಟ್ ಜುಲೈ 1 ರಂದು ತೆರೆಯಲಿದೆ. ಈ ರೆಸಾರ್ಟ್ 54 ಹೋಟೆಲ್‌ಗಳು, ಚಿತ್ರಮಂದಿರಗಳು, ಬಿಯರ್ ಪಬ್‌ಗಳು ಸೇರಿದಂತೆ ಹಲವು ಆಕರ್ಷಣೆಗಳನ್ನು ಹೊಂದಿದೆ.

ಉತ್ತರ ಕೊರಿಯಾ, ಬಹುಕಾಲದ ವಿಳಂಬದ ನಂತರ, ಜುಲೈ 1ರಂದು ವೊನ್ಸಾನ್-ಕಲ್ಮಾ ಬೀಚ್ ರೆಸಾರ್ಟ್ ಅನ್ನು ತೆರೆದು ದೇಶದ ಪ್ರವಾಸೋದ್ಯಮ ವಿಸ್ತರಣೆಗೆ ಹೊಸ ಹೆಜ್ಜೆ ಇಡುವುದಕ್ಕೆ ಸಜ್ಜಾಗುತ್ತಿದೆ. ಸುಮಾರು ಏಳು ವರ್ಷಗಳ ನಿರ್ಮಾಣ ಕಾರ್ಯದ ನಂತರ ಉತ್ತರ ಕೊರಿಯಾದ ವೊನ್ಸಾನ್ ಕಲ್ಮಾ ಕರಾವಳಿ ರೆಸಾರ್ಟ್ ವಲಯ ಇದೀಗ ಸಾರ್ವಜನಿಕಕ್ಕೆ ತೆರೆದು ಕೊಳ್ಳುತ್ತಿದೆ. ಈ ರೆಸಾರ್ಟ್‌ನಲ್ಲಿ 54 ಹೋಟೆಲ್‌ಗಳು, ಚಿತ್ರಮಂದಿರ, ಬಿಯರ್ ಪಬ್‌ಗಳು ಸೇರಿದಂತೆ ಅನೇಕ ಆಕರ್ಷಣೆಗಳು ಮತ್ತು ಸೌಲಭ್ಯಗಳಿವೆ. ಕ್ಷಿಪಣಿ ಪರೀಕ್ಷೆಗಳಲ್ಲೇ ಹೆಚ್ಚು ನಿರತರಾಗಿರುವ ನಾಯಕ ಕಿಮ್ ಜಾಂಗ್ ಉನ್, ಈ ರೆಸಾರ್ಟ್‌ಗೆ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿ ಅದರ ಪ್ರಚಾರ ಮಾಡುವ ದೃಶ್ಯ ಕಂಡುಬಂದಿದೆ.
ಕಿಮ್, ಈ ರೆಸಾರ್ಟ್ ಅನ್ನು ದೇಶದ “ವರ್ಷದ ಶ್ರೇಷ್ಠ ಸಾಧನೆಗಳಲ್ಲಿ ಒಂದು” ಎಂದು ವರ್ಣಿಸಿ, ತಮ್ಮ ಪುತ್ರಿ ಕಿಮ್ ಜು-ಎ ಮತ್ತು ಪತ್ನಿ ರಿ ಸೋಲ್-ಜು ಅವರೊಂದಿಗೆ ಕುಳಿತು ಉದ್ಘಾಟನಾ ಆಚರಣೆಗಳನ್ನು ವೀಕ್ಷಿಸಿದರು. ತನ್ನ ಚಿರಪರಿಚಿತ ಮಾವೋ ಶೈಲಿಯ ವಸ್ತ್ರಧಾರಣೆಯಿಂದ ದೂರ ಉಳಿದು ಈ ವೇಳೆ ಕಪ್ಪು ಬಣ್ಣದ ಸೂಟ್, ಬಿಳಿ ಶರ್ಟ್ ಮತ್ತು ಟೈ ಧರಿಸಿದ್ದರು.
ರೆಸಾರ್ಟ್ ವೈಶಿಷ್ಟ್ಯಗಳು
ಕಲ್ಮಾ ಪರ್ಯಾಯ ದ್ವೀಪದಲ್ಲಿ ಮೂರು ಮೈಲು (ಸುಮಾರು 5 ಕಿಮೀ) ವಿಸ್ತಾರದಲ್ಲಿ ಹರಡಿರುವ ಈ ರೆಸಾರ್ಟ್, 54 ಹೋಟೆಲ್‌ಗಳು, ವಿಶಾಲ ಒಳಾಂಗಣ ಮತ್ತು ಹೊರಾಂಗಣ ವಾಟರ್‌ಪಾರ್ಕ್, ಮಿನಿ-ಗಾಲ್ಫ್ ಮೈದಾನ, ಸಿನಿಮಾ ಮಂದಿರ, ಹಲವಾರು ಶಾಪಿಂಗ್ ಮಾಲ್‌ಗಳು, ಡಜನ್‌ಗಟ್ಟಲೆ ಉಪಹಾರಮಂದಿರಗಳು, ರೆಸ್ಟೋರೆಂಟ್‌ಗಳು, ಐದು ಬಿಯರ್ ಪಬ್‌ಗಳು ಮತ್ತು ಎರಡು ವಿಡಿಯೋ ಗೇಮ್ ಆರ್ಕೇಡ್ , ವಾಟರ್ ಪಾರ್ಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವ ಈ ರೆಸಾರ್ಟ್, ಸುಮಾರು 20,000 ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಿದೆ ಎಂದು ಉತ್ತರ ಕೊರಿಯಾದ ಮಾಧ್ಯಮಗಳು ತಿಳಿಸಿವೆ. ಆದರೆ ಈ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.
ದೇಶಿಯ ಪ್ರವಾಸಿಗರಿಗೆ ಮಾತ್ರ ಸದ್ಯಕ್ಕೆ ಅನುಮತಿ ಇದ್ದು, ವಿದೇಶಿ ಪ್ರವಾಸಿಗರ ಪ್ರವೇಶದ ವೇಳಾಪಟ್ಟಿ ಇನ್ನೂ ಘೋಷಿತವಾಗಿಲ್ಲ. ಪೂರ್ವ ಕರಾವಳಿಯಲ್ಲಿ ನಾಲ್ಕು ಕಿಲೋಮೀಟರ್ ವಿಸ್ತಾರದಲ್ಲಿ ನಿರ್ಮಾಣಗೊಂಡಿರುವ ಈ ಕರಾವಳಿ ಸಂಕೀರ್ಣವನ್ನು ಮೊದಲಿಗೆ 2019ರಲ್ಲಿ ತೆರೆಯುವ ಯೋಜನೆ ಇತ್ತು. 2018ರ ಆರಂಭದಲ್ಲಿ ಪ್ರಾರಂಭವಾದ ಯೋಜನೆ, ಹಲವಾರು ತಾಂತ್ರಿಕ ಹಿನ್ನಡೆಗಳು ಮತ್ತು COVID-19 ಸಾಂಕ್ರಾಮಿಕದ ಪರಿಣಾಮವಾಗಿ ವಿಳಂಬಗೊಂಡಿತ್ತು. ರೆಸಾರ್ಟ್ ಅನ್ನು ಜುಲೈ 1ರಿಂದ ದೇಶೀಯ ಪ್ರವಾಸಿಗರಿಗೆ ತೆರೆದಿಡಲಾಗುತ್ತಿದೆ. ಕೋವಿಡ್‌ನ ಹಿನ್ನಲೆಗಾಗಿ ವಿದೇಶಿ ಪ್ರವಾಸಿಗರ ಪ್ರವೇಶ ಇನ್ನೂ ನಿಷಿದ್ಧವಾಗಿದ್ದರೂ, ರಷ್ಯಾದ ವೋಸ್ಟಾಕ್ ಇಂಟೂರ್ ಪ್ರವಾಸ ಸಂಸ್ಥೆ ಜುಲೈ 7ರಿಂದ ವಾರಪೂರ್ತಿ ಪ್ರವಾಸ ಯೋಜನೆ ರೂಪಿಸಿದೆ ಎಂದು ರೆಸಾರ್ಟ್‌ನ ವೆಬ್‌ಸೈಟ್ ಮಾಹಿತಿ ನೀಡಿದೆ. ರಷ್ಯಾ ಪ್ರವಾಸಿಗಳಿಗಾಗಿ ಯೋಜಿಸಲಾಗಿರುವ ಪ್ಯಾಕೇಜ್‌ನಲ್ಲಿ, ಜುಲೈ 8 ರಂದು ಪ್ಯೊಂಗ್ಯಾಂಗ್‌ನಿಂದ ವೊನ್ಸಾನ್‌ಗೆ ವಿಮಾನ ಪ್ರಯಾಣ, ಬೀಚ್ ರೆಸಾರ್ಟ್‌ನಲ್ಲಿ ನಾಲ್ಕು ರಾತ್ರಿಗಳ ವಾಸ್ತವ್ಯ, ಹತ್ತಿರದ ಮಾಸಿಕ್ರಿಯಾಂಗ್ ಸ್ಕೀ ರೆಸಾರ್ಟ್‌ನಲ್ಲಿ ಒಂದು ರಾತ್ರಿಯ ವಾಸ್ತವ್ಯ ಮತ್ತು ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಒಂದು ದಿನದ ದೃಶ್ಯವೀಕ್ಷಣೆಯ ಪ್ರವಾಸ ಸೇರಿದೆ.
ಕಿಮ್ ಜಾಂಗ್ ಉನ್ ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ವೊನ್ಸಾನ್‌ನಲ್ಲಿ ಕಳೆದವರು. ಇದೇ ಕಾರಣದಿಂದ ಈ ಪ್ರದೇಶವನ್ನು ಐಷಾರಾಮಿ ಮತ್ತು ಅಭಿವೃದ್ಧಿಯ ಪ್ರತೀಕವನ್ನಾಗಿ ಪರಿವರ್ತಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜೂನ್ 24ರಂದು ನಡೆದ ರೆಸಾರ್ಟ್ ಮುಕ್ತಾಯ ಸಮಾರಂಭದಲ್ಲಿ ಕಿಮ್ ತಮ್ಮ ಮಗಳು ಕಿಮ್ ಜು-ಏ ಮತ್ತು ಪತ್ನಿ ರಿ ಸೋಲ್-ಜು ಅವರೊಂದಿಗೆ ಭಾಗವಹಿಸಿದ್ದರು. ಅವರು ಹೊಸ ವರ್ಷದ ದಿನದ ಕಾರ್ಯಕ್ರಮದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ರಷ್ಯಾದ ರಾಯಭಾರಿ ಅಲೆಕ್ಸಾಂಡರ್ ಮಟ್ಸೆಗೊರಾ ಮತ್ತು ಇತರ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. KCNA ಈ ಉದ್ಘಾಟನೆಯನ್ನು “ಇಡೀ ದೇಶದ ಶ್ರೇಷ್ಠ, ಶುಭ ಘಟನೆಯೆಂದು” ಹಾಗೂ ಉತ್ತರ ಕೊರಿಯಾದ ಪ್ರವಾಸೋದ್ಯಮ ಕ್ಷೇತ್ರಕ್ಕೆ “ಹೊಸ ಯುಗಕ್ಕೆ ಮುನ್ನುಡಿ” ಎಂದು ವರ್ಣಿಸಿದೆ.
ವಿಶ್ವದ ಅತ್ಯಂತ ಪ್ರತ್ಯೇಕ ಮತ್ತು ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಒಂದಾಗಿರುವ ಉತ್ತರ ಕೊರಿಯಾದಿಗೆ ಪ್ರವಾಸೋದ್ಯಮವು ವಿದೇಶಿ ಆದಾಯವನ್ನು ಗಳಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಹೆಚ್ಚಿನ ಪ್ರವಾಸಿಕರು ಚೀನಾ ಮತ್ತು ರಷ್ಯಾದಿಂದ ಬರುತ್ತಾರೆ ಎಂಬುದನ್ನು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಪಾಶ್ಚಾತ್ಯ ಪ್ರವಾಸಿಕರು ತಾಂತ್ರಿಕವಾಗಿ ಪ್ರವೇಶಕ್ಕೆ ಅರ್ಹರಾದರೂ, ದೇಶದೊಳಗಿನ ಪ್ರವಾಸ ಕಠಿಣವಾಗಿ ನಿಯಂತ್ರಿತವಾಗಿದ್ದು, ಶ್ರದ್ಧೆಯಿಂದ ಆಯ್ದ ಗುಂಪುಗಳ ಮೂಲಕ ಮಾತ್ರ ನಡೆಯುತ್ತದೆ. “ಇದು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ವಿಭಿನ್ನ ಬಾಗಿಲು ತೆರೆದು ಕೊಡುವುದೇನೋ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ತಾತ್ಕಾಲಿಕವಾಗಿ ಅದ್ಭುತ ಪ್ರಮಾಣದಲ್ಲಿ ಹೀಗಾಗುತ್ತಿರುವುದಾಗಿ ತೋರುವುದಿಲ್ಲ” ಎಂದು ಯಂಗ್ ಪಯೋನಿಯರ್ ಟೂರ್ಸ್‌ನ ಸಹ-ಸಂಸ್ಥಾಪಕ ರೋವನ್ ಬಿಯರ್ಡ್ ಬಿಬಿಸಿಗೆ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಯೋಜನೆಗಳ ಕಾರಣಗಳಿಂದ ಅಮ್ಲಪೂರ್ಣವಾದ ನಿರ್ಬಂಧಗಳು ಇನ್ನೂ ಮುಂದುವರಿದಿರುವುದರಿಂದ ವೊನ್ಸಾನ್ ಯೋಜನೆಗೆ ಮಹತ್ವದ ವಿದೇಶಿ ಹೂಡಿಕೆದಾರರ ಕೊರತೆ ಕಾಣಿಸಿಕೊಂಡಿದೆ.2020ರಲ್ಲಿ ಸಾಂಕ್ರಾಮಿಕ ಆರಂಭವಾದಾಗ ಉತ್ತರ ಕೊರಿಯಾ ತನ್ನ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿದರೂ, 2023ರಿಂದ ಕ್ರಮೇಣ ನಿರ್ಬಂಧ ಸಡಿಲಿಸುತ್ತಿದೆ. ರಷ್ಯಾದ ಪ್ರವಾಸಿಗರಿಗೆ ಪ್ರವೇಶ ನೀಡಿದರೂ, ಪ್ಯೊಂಗ್ಯಾಂಗ್ ಸೇರಿದಂತೆ ಹಲವಾರು ಪ್ರದೇಶಗಳು ಸಾಮಾನ್ಯ ಪ್ರವಾಸೋದ್ಯಮಕ್ಕೆ ಇನ್ನೂ ಸೀಮಿತವಾಗಿವೆ. ಆದರೂ, ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮ್ಯಾರಥಾನ್ ಕಾರ್ಯಕ್ರಮವನ್ನು ಉತ್ತರ ಕೊರಿಯಾ ಆಯೋಜಿಸಿತ್ತು.
ರೆಸಾರ್ಟ್ ಉದ್ಘಾಟನೆಯ ಸಮಯವು ಉತ್ತರ ಕೊರಿಯಾ ಮತ್ತು ರಷ್ಯಾ ನಡುವೆ ಬಲಗೊಳ್ಳುತ್ತಿರುವ ಸಂಬಂಧಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಐದು ವರ್ಷಗಳ ಸ್ಥಗಿತದ ನಂತರ ಇತ್ತೀಚೆಗೆ ಎರಡೂ ರಾಷ್ಟ್ರಗಳು ತಮ್ಮ ರಾಜಧಾನಿಗಳ ನಡುವೆ ನೇರ ಪ್ರಯಾಣಿಕ ರೈಲು ಮಾರ್ಗವನ್ನು ಪುನಃ ಆರಂಭಿಸಿವೆ. ಮಾಸ್ಕೋ ಮತ್ತು ಪ್ಯೊಂಗ್ಯಾಂಗ್ ನಡುವಿನ ಸಹಕಾರ ಬಲವರ್ಧನೆಯಾಗುತ್ತಿರುವ ಹಿನ್ನೆಲೆಯಲ್ಲಿ ವೊನ್ಸಾನ್‌ಗೆ ಭೇಟಿ ನೀಡುವ ಮೊದಲ ವಿದೇಶಿ ಪ್ರವಾಸಿಕರಲ್ಲಿ ರಷ್ಯಾದವರು ಇರಬಹುದು ಎಂದು ವಿಶ್ಲೇಷಕರು ಊಹಿಸುತ್ತಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ನೆರವಾಗಲು ಉತ್ತರ ಕೊರಿಯಾ ತನ್ನ ಸೇನೆಯನ್ನು ಕಳುಹಿಸುತ್ತಿದೆ ಎಂಬ ವರದಿಗಳು, ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ-ಯುದ್ಧ ಸಹಕಾರವನ್ನು ಮತ್ತಷ್ಟು ಉಲ್ಲೇಖಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

