ಇಂಟರ್ಮಿಟೆಂಟ್ ಫಾಸ್ಟಿಂಗ್ ತೂಕ ಇಳಿಕೆ ಮತ್ತು ಮೆಟಾಬಾಲಿಕ್ ಆರೋಗ್ಯಕ್ಕೆ ಲಾಭದಾಯಕ. ಆದರೆ ಹೊಸ ಅಧ್ಯಯನಗಳು ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡುವುದರಿಂದಲೂ ಇದೇ ರೀತಿಯ ಲಾಭಗಳು ದೊರೆಯಬಹುದು ಎಂದು ಸೂಚಿಸುತ್ತವೆ.
ಇಂಟರ್ಮಿಟೆಂಟ್ ಫಾಸ್ಟಿಂಗ್ (ಮಧ್ಯಂತರ ಉಪವಾಸ) ತೂಕ ಇಳಿಕೆ ಮೇಲೆ ಮಾತ್ರವಲ್ಲ, ದೈಹಿಕ ಆರೋಗ್ಯಕ್ಕೂ ಹಲವಾರು ಲಾಭಗಳನ್ನು ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆದರೆ ಹಲವರಿಗೆ ಈ ಪದ್ಧತಿಯನ್ನು ಅನುಸರಿಸುವುದು ಕಷ್ಟವಾಗಬಹುದು. ವಿಶೇಷವಾಗಿ ವಾರಕ್ಕೆ ಎರಡು ದಿನಗಳ ಕಾಲ ತೀವ್ರ ಕ್ಯಾಲೊರಿ ನಿಯಂತ್ರಣ ಇರುವ 5:2 ಮಾದರಿ. ಆದರೆ ಇತ್ತೀಚಿನ ಅಧ್ಯಯನವು ತೋರಿಸಿರುವ ಪ್ರಕಾರ, ನೀವು ಕಡ್ಡಾಯವಾಗಿ ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕೆಂದಿಲ್ಲ. ವಾರದಲ್ಲಿ ಎರಡು ದಿನ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಿದರೂ ಸಹ, ನಿಮ್ಮ ಮೆಟಾಬಾಲಿಕ್ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.
ಇಂಟರ್ಮಿಟೆಂಟ್ ಫಾಸ್ಟಿಂಗ್‌ನಿಂದ ಹೇಗೆ ಲಾಭವಾಗುತ್ತದೆ?
ಇಂಟರ್ಮಿಟೆಂಟ್ ಫಾಸ್ಟಿಂಗ್ ಆರೋಗ್ಯಕ್ಕೆ ಲಾಭದಾಯಕವಾಗಿರುವುದು ದೇಹದ ಮೆಟಾಬಾಲಿಸಂ ಬದಲಾಗುವ ರೀತಿಯಿಂದಾಗುತ್ತದೆ. ಭೋಜನದ ನಂತರ, ನಮ್ಮ ದೇಹ 'ಪೋಸ್ಟ್‌ಪ್ರಾಂಡಿಯಲ್' ಸ್ಥಿತಿಗೆ ಪ್ರವೇಶಿಸುತ್ತದೆ. ಈ ಸಮಯದಲ್ಲಿ, ದೇಹ ಕಾರ್ಬೋಹೈಡ್ರೇಟ್‌ಗಳನ್ನು ತ್ವರಿತ ಶಕ್ತಿಗಾಗಿ ಬಳಸುತ್ತದೆ ಮತ್ತು ಉಳಿದ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಸಂಗ್ರಹಿಸುತ್ತದೆ. ಆದರೆ ಹಲವಾರು ಗಂಟೆಗಳ ಉಪವಾಸದ ನಂತರ, ದೇಹ 'ಫಾಸ್ಟೆಡ್' ಸ್ಥಿತಿಗೆ ಪ್ರವೇಶಿಸಿ, ಸಂಗ್ರಹಿತ ಕೊಬ್ಬನ್ನು ಶಕ್ತಿಗಾಗಿ ಬಳಸಲು ಆರಂಭಿಸುತ್ತದೆ. ಈ ರೀತಿ, ಇಂಟರ್ಮಿಟೆಂಟ್ ಫಾಸ್ಟಿಂಗ್ ದೇಹದ ಇಂಧನ ಬಳಕೆಯಲ್ಲಿನ ಸಮತೋಲನವನ್ನು ಸುಧಾರಿಸುತ್ತದೆ. ಇದು ಉತ್ತಮ ಮೆಟಾಬಾಲಿಕ್ ಫ್ಲೆಕ್ಸಿಬಿಲಿಟಿಗೆ ಕಾರಣವಾಗುತ್ತದೆ, ಇದು ಹೃದಯ ಸಂಬಂಧಿತ ಕಾಯಿಲೆ, ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಶುಗರ್‌ಗೆ ಕಡಿಮೆ ಅಪಾಯವನ್ನು ಸೂಚಿಸುತ್ತದೆ.
ಆದರೆ ಇತ್ತೀಚಿನ ಅಧ್ಯಯನಗಳಲ್ಲಿ, ಇಂಟರ್ಮಿಟೆಂಟ್ ಫಾಸ್ಟಿಂಗ್ ಅನುಸರಿಸಿದ ಗುಂಪು ಮತ್ತು ಕ್ಯಾಲೊರಿ ನಿಯಂತ್ರಿತ ಆಹಾರ ಸೇವಿಸಿದ ಗುಂಪು ಇಬ್ಬರೂ ತೂಕ ಇಳಿಕೆಗೊಳಪಟ್ಟರೂ, ಫಾಸ್ಟಿಂಗ್ ಗುಂಪಿಗೆ ಹೆಚ್ಚು ಮೆಟಾಬಾಲಿಕ್ ಲಾಭಗಳು ದೊರೆಯುತ್ತಿದ್ದವು. ವಿಷಯವೇನೆಂದರೆ, 5:2 ಇಂಟರ್ಮಿಟೆಂಟ್ ಫಾಸ್ಟಿಂಗ್ ನಲ್ಲಿ ಸ್ವಾಭಾವಿಕವಾಗಿ ಕ್ಯಾಲೊರಿ ಸೇವನೆ ಕಡಿಮೆಯಾಗಿರುತ್ತದೆ. ದಿನಕ್ಕೆ ಕೆಲ ನೂರೇ ಕ್ಯಾಲೊರಿಗಳು. ಈ ಕಾರಣದಿಂದಾಗಿ, ಕಾರ್ಬೋಹೈಡ್ರೇಟ್ ಸೇವನೆಯೂ ಬಹಳ ಕಡಿಮೆಯಾಗುತ್ತದೆ. ಹೀಗಾಗಿ, ಇವುಗಳಲ್ಲಿ ಎದ್ದು ಬರುವ ಪ್ರಶ್ನೆ ಎಂದರೆ ಮೆಟಾಬಾಲಿಕ್ ಲಾಭಕ್ಕೆ ಕಾರಣವೇನು? ಕ್ಯಾಲೊರಿ ಕಡಿಮೆ ಮಾಡಿದುದೆ ಅಥವಾ ಕಾರ್ಬೋಹೈಡ್ರೇಟ್?.
ಅಧ್ಯಯನದಲ್ಲಿ 12 ಜನ ಅಧಿಕ ತೂಕದ ಮತ್ತು ಬೊಜ್ಜಿರುವ ಜನರನ್ನು ಸೇರಿಸಿಕೊಂಡಾಗ ಒಂದು ದಿನ ಅವರಿಗೆ ತೀವ್ರ ಕಾರ್ಬೋಹೈಡ್ರೇಟ್ ಕಡಿತ ಆಹಾರ ನೀಡಲಾಯಿತು. ಮತ್ತೊಂದು ದಿನ, ತೀವ್ರ ಕ್ಯಾಲೊರಿ ಕಡಿತ (75% ಕಡಿಮೆ) ಆಹಾರ ನೀಡಲಾಯಿತು. ನಂತರ, ಇಬ್ಬರಿಗೂ ಹೆಚ್ಚು ಕೊಬ್ಬು ಮತ್ತು ಸಕ್ಕರೆ ಒಳಗೊಂಡ ಬ್ರೆಕ್ಫಾಸ್ಟ್ ನೀಡಲಾಗಿತ್ತು. ಕೊನೆಯಲ್ಲಿ ದೇಹದ ಪ್ರತಿಕ್ರಿಯೆ ಪರಿಶೀಲಿಸಲಾಯಿತು.
ಹೀಗಿತ್ತು ಫಲಿತಾಂಶ...
ಬಂದ ಫಲಿತಾಂಶವೇನೆಂದರೆ ದೇಹದ ಕೊಬ್ಬು ಬಳಕೆಯಲ್ಲಿ ಉಂಟಾದ ಬದಲಾವಣೆ ಎರಡೂ ದಿನಗಳ ಬಳಿಕ ಒಂದೇ ರೀತಿಯಾಗಿ ಕಂಡುಬಂದಿತು. ಅಂದರೆ, ಕಾರ್ಬೋಹೈಡ್ರೇಟ್ ಕಡಿತವೂ ಉಪವಾಸದಂತೆ ಲಾಭಕರವಾಗಿರಬಹುದು. ಇದರ ಮೇಲೆ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಅಧ್ಯಯನಗಳನ್ನು ನಡೆಸುವುದು ಅಗತ್ಯವಾಗಿದೆ. ಹೀಗಿರುವಾಗ, ಈ ಪದ್ದತಿಗಳು ಕೆಲವು ಜನರಿಗೆ ಉಪಯುಕ್ತವಾದರೂ, ಎಲ್ಲರಿಗೂ ಅನ್ವಯವಾಗುವುದಿಲ್ಲ. ತೀವ್ರ ಕ್ಯಾಲೊರಿ ಕಡಿತದಿಂದ ಪೌಷ್ಟಿಕಾಂಶ ಕೊರತೆ ಅಥವಾ ಈಟಿಂಗ್ ಡಿಸಾರ್ಡರ್‌ಗಳ ಭೀತಿ ಉಂಟಾಗಬಹುದು. ತೀವ್ರ ಕಾರ್ಬೋಹೈಡ್ರೇಟ್ ಕಡಿತವೂ ದೀರ್ಘಕಾಲ ಅನುಸರಿಸಲು ಕಷ್ಟವಾಗಬಹುದು.
ಈಗ ಹೊಸ ರೀತಿಯ 5:2 ಡಯೆಟ್ ಪರೀಕ್ಷಿಸಲಾಗಿದೆ. ಇದರಲ್ಲಿ ಕ್ಯಾಲೊರಿ ಕಡಿತದ ಬದಲಾಗಿ ವಾರಕ್ಕೆ ಎರಡು ದಿನ ಕಾರ್ಬೋಹೈಡ್ರೇಟ್ ಸೇವನೆ ಮಾತ್ರ ಕಡಿಮೆ ಮಾಡಲಾಗುತ್ತದೆ. ಇದು ಯಶಸ್ವಿಯಾಗಿದ್ರೆ, ಇಂಟರ್ಮಿಟೆಂಟ್ ಫಾಸ್ಟಿಂಗ್‌ನ ಲಾಭಗಳನ್ನು ಕ್ಯಾಲೊರಿ ಕಡಿತವಿಲ್ಲದೇ ಪಡೆಯಲು ಸಾಧ್ಯವಾಗಬಹುದು.


