ಖ್ಯಾತ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ (Dr Devi Prasad Shetty) ಅವರು, ತಮ್ಮಂತಹ ಬಹುತೇಕ ಹೃದಯ ತಜ್ಞರು ಒಂದು ದೈವಿಕ ಶಕ್ತಿಯನ್ನು ಏಕೆ ನಂಬುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆಗಳ ನಂತರವೂ ರೋಗಿಗಳ ಬದುಕುಳಿಯುವಿಕೆಯನ್ನು ನಿರ್ಧರಿಸುವ ಶಕ್ತಿ ಯಾವುದು?
ಡಾ.ದೇವಿಪ್ರಸಾದ ಶೆಟ್ಟಿ ಅವರು ಯಾರಿಗೆ ತಾನೆ ಗೊತ್ತಿಲ್ಲ? ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಮಾಡಿದ ಮಹಾನ್ ಸಮಾಜಸೇವಾ ಕರ್ಮಿ. 23 ವರ್ಷಗಳ ಹಿಂದೆ ಇವರು ಸ್ಥಾಪಿಸಿದ ನಾರಾಯಣ ಹೃದಯಾಲಯ ಇವತ್ತು ದೇಶ ವಿದೇಶಗಳಲ್ಲಿ 47 ಆಸ್ಪತ್ರೆಗಳಾಗಿ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ ಆಲಯಗಳಾಗಿವೆ. ಹೃದಯಸ್ತಂಭನವಾಗಿ ಉಸಿರೇ ನಿಂತುಹೋಗುವ ಸ್ಥಿತಿಯಲ್ಲಿದ್ದ ಅನೇಕರಿಗೆ ಜೀವ ಉಳಿಸಿದ್ದಾರೆ ದೇವಿ ಶೆಟ್ಟಿ. ಜನಸಾಮಾನ್ಯರು ದೇವಿ ಶೆಟ್ಟಿಯನ್ನು ದೇವರ ಸ್ವರೂಪದಲ್ಲಿ ಕಾಣುವುದುಂಟು. ಆದರೆ, ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಸ್ವತಃ ದೇವಿ ಶೆಟ್ಟಿಯವರೇ ಹೇಳಿದ ಪ್ರಕಾರ, ಅವರು ದೇವರನ್ನು ನಂಬುತ್ತಾರೆ. ಅವರು ಮಾತ್ರವಲ್ಲ. ಬಹುತೇಕ ಹೃದಯ ತಜ್ಞರು, ಕಾರ್ಡಿಯಾಲಜಿಸ್ಟ್‌ಗಳು ದೇವರಲ್ಲಿ ನಂಬಿಕೆ ಇಟ್ಟಿದ್ದಾರೆ. ಅದ್ಯಾಕೆ?
ನಿರ್ಧರಿಸೋ ಶಕ್ತಿ ಯಾವುದದು?
"ಹೆಚ್ಚಿನ ಹೃದಯತಜ್ಞರು ದೇವರನ್ನು ನಂಬುತ್ತಾರೆ. ನನ್ನ ಅನುಭವದಲ್ಲಿ ದೊಡ್ಡ ವೈದ್ಯರು ಆಧ್ಯಾತ್ಮಿಕ ವ್ಯಕ್ತಿಗಳು ಕೂಡ. ಎಲ್ಲರೂ ಒಂದಲ್ಲ ಒಂದು ಕಾಸ್ಮಿಕ್ ಶಕ್ತಿಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ಯಾವ ಕಾರ್ಡಿಯಾಲಜಿಸ್ಟ್ ಕೂಡ ತಾನು ಮಾಡಿದ ಯಶಸ್ವೀ ಶಸ್ತ್ರಚಿಕಿತ್ಸೆಯ ಸಂಪೂರ್ಣ ಯಶಸ್ಸು ತನ್ನ ಕೌಶಲ್ಯ ಪರಿಣಾಮ ಎಂದು ಹೇಳಿಕೊಂಡರೆ, ಆತ ತನ್ನನ್ನೇ ಫೂಲ್ ಮಾಡಿಕೊಳ್ತಾನೆ ಅಷ್ಟೆ. ನಾನು ಸಾಕಷ್ಟು ಸಂಕೀರ್ಣ ಆಪರೇಶನ್‌ಗಳನ್ನು ಮಾಡಿದೇನೆ. ಕೆಲವರು ಬದುಕಿದ್ದಾರೆ, ಕೆಲವರು ಸತ್ತಿದ್ದಾರೆ. ಕೆಲವು ರೋಗಿಗಳು, ಉಳಿಯುವ ಯಾವುದೇ ಚಾನ್ಸ್ ಇಲ್ಲದವರು, ಆಪರೇಶನ್ ಮಾಡಿದ ಏಳೇ ದಿನದಲ್ಲಿ ಮನೆಗೆ ಹೋಗಿ ಆರಾಮಾಗಿ ಬದುಕಿದ್ದಾರೆ. ಇನ್ನು ಕೆಲವರು ಪೇಷೆಂಟ್‌ಗಳಿಗೆ ಆಪರೇಶನ್ ಬಹು ಯಶಸ್ವಿಯಾಗಿ ನಡೆಯುತ್ತೆ. ಆದರೆ ಅವರು ಬದುಕುಳಿಯುವುದಿಲ್ಲ. ಯಾರು ಬದುಕ್ಬೇಕು, ಯಾರು ಬದುಕಲ್ಲ ಅಂತ ನಿರ್ಧರಿಸೋರು ಯಾರು? ನಾನಲ್ಲ" ಅಂತಾರೆ ದೇವಿಪ್ರಸಾದ್ ಶೆಟ್ಟಿ.
ಅವರು ಹೇಳೋದೂ ನಿಜ ತಾನೆ? ಸೂರತ್‌ನಲ್ಲಿ ಇತ್ತೀಚೆಗೆ ಸಾವಿರಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದ ಸರ್ಜನ್ ಒಬ್ಬರು ಹೃದಯಸ್ತಂಭನದಿಂದಲೇ ಮೃತಪಟ್ಟರು. ಕೊನೆಯ ಕ್ಷಣದವರೆಗೂ ಅವರು ತಮಗೆ ಆ ಸಮಸ್ಯೆ ಇರಬಹುದೆಂದು ಶಂಕಿಸಿರಲೂ ಇಲ್ಲ. ಇದು ಹೇಗಾಯ್ತು? ಇನ್ನು ಕೆಲವು ರೋಗಿಗಳಿಗೆ, ನಿಮ್ಮ ರಕ್ತನಾಳಗಳಲ್ಲಿ ಹಲವು ಕ್ಲಾಟ್‌ಗಳಿವೆ, ಈಗಲೇ ಆಪರೇಶನ್ ಮಾಡಿಸಿದರೆ ಉತ್ತಮ ಎಂದು ವೈದ್ಯರು ಹೇಳಿರುತ್ತಾರೆ. ಆದರೆ ಆ ವ್ಯಕ್ತಿಗಳು ಯಾವುದೇ ಚಿಕಿತ್ಸೆ ಮಾಡಿಸಿಕೊಳ್ಳದೆ, ಆರೋಗ್ಯವಾಗಿ ಬಹಳ ಕಾಲ ಬದುಕಿದ ನಿದರ್ಶನಗಳಿವೆ. ಇದನ್ನೆಲ್ಲ ನೋಡಿದರೆ ದೇವಿ ಶೆಟ್ಟಿ ಹೇಳುವುದು ನಿಜ ಅನಿಸುತ್ತದೆ.
ಡಾ. ದೇವಿಪ್ರಸಾದ್ ಶೆಟ್ಟಿ (Dr Devi Prasad Shetty) ನಾರಾಯಣ ಹೃದಯಾಲಯ ಸ್ಥಾಪಿಸಲು ಕಾರಣವಾಗಿದ್ದು ಮದರ್ ಥೆರೆಸಾ. ಬಡಬಗ್ಗರಿಗೂ ಕೈಗೆಟುವಂತೆ ವೈದ್ಯಕೀಯ ಸೇವೆ ಒದಗಿಸಬೇಕೆನ್ನುವ ತುಡಿತಕ್ಕೆ ಬೀಳಲು ಮತ್ತು ನಾರಾಯಣ ಹೃದಯಾಲಯ ನಿರ್ಮಿಸಲು ಮದರ್ ಥೆರೇಸಾ ಸ್ಫೂರ್ತಿ ಎಂದು ಹಲವು ಬಾರಿ ದೇವಿ ಶೆಟ್ಟಿ ಹೇಳಿಕೊಂಡಿದ್ದಿದೆ. ಕ್ರೈಸ್ತ ಮಿಷನರಿಯಾಗಿದ್ದ ಮದರ್ ಥೆರೆಸಾ ಭಾರತದಲ್ಲಿ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆ ಸೌಲಭ್ಯ ಒದಗಿಸಿ ಬಹಳ ದೊಡ್ಡ ಮಾನವೀಯತೆಗೆ ಆದರ್ಶಪ್ರಾಯವಾಗಿದ್ದ ಜೀವ. ಈ ಆದರ್ಶದಿಂದಾಗಿ ಇಂದು ಬಡವರು, ಕೆಳಮಧ್ಯಮ ವರ್ಗದ ಜನರೂ ನಾರಾಯಣ ಹೃದಯಾಯಕ್ಕೆ ಹೋಗಿ ಹೆಚ್ಚು ವೆಚ್ಚವಿಲ್ಲದೇ ಚಿಕಿತ್ಸೆ ಪಡೆಯಲು ಸಾಧ್ಯ.
ಡಾ. ದೇವಿಪ್ರಸಾದ್ ಶೆಟ್ಟಿ ಕೇವಲ ನಾರಾಯಣ ಹೃದಯಾಲಯ ಆಸ್ಪತ್ರೆ ಮಾತ್ರ ನೋಡಿಕೊಳ್ಳುತ್ತಿಲ್ಲ, ಅವರು ನಾನಾ ರೀತಿಯ ಸಮಾಜಸೇವೆ ಕೈಗೊಳ್ಳುತ್ತಾರೆ. ಸರ್ಕಾರದ ವಿವಿಧ ಕಾರ್ಯಸಮಿತಿಗಳಲ್ಲಿ ಅವರಿರುತ್ತಾರೆ. ಸರ್ಕಾರದ ಜನಪ್ರಿಯ ಯಶಸ್ವಿನಿ ಆರೋಗ್ಯ ಇನ್ಷೂರೆನ್ಸ್ ಸ್ಕೀಮ್ ಹಿಂದೆ ಡಾ. ಶೆಟ್ಟಿ ಶ್ರಮ ಇದೆ. ಮಂಗಳೂರಿನ ಕಿನ್ನಿಗೋಳಿಯಲ್ಲಿ ಹುಟ್ಟಿದ ಡಾ. ದೇವಿ ಶೆಟ್ಟಿ ಚಿಕ್ಕಂದಿನಿಂದಲೇ ಹಾರ್ಟ್ ಸರ್ಜನ್ ಆಗಬೇಕೆಂದು ನಿರ್ಧಾರ ಮಾಡಿದ್ದವರು. ಚಿಕ್ಕವನಿದ್ದಾಗ ವಿಶ್ವದ ಮೊದಲ ಹಾರ್ಟ್ ಟ್ರಾನ್ಸ್ಪ್ಲಾಂಟ್ ಸರ್ಜರಿ ಬಗ್ಗೆ ಸುದ್ದಿ ಓದಿ ಸರ್ಜನ್ ಆಗಬೇಕೆಂದು ಸಂಕಲ್ಪ ತೊಟ್ಟು ಅದನ್ನು ಸಾಕಾರಗೊಳಿಸಿದ ಛಲಗಾರ. ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಓದಿ ಬ್ರಿಟನ್, ಅಮೆರಿಕದಲ್ಲಿ ಸರ್ಜನ್ ಆಗಿ ಕೆಲಸ ಮಾಡಿ ನಂತರ ಭಾರತಕ್ಕೆ ಬಂದು ಇಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿದವರು. ದೇವಿ ಶೆಟ್ಟಿ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಟೈಮ್ ಮ್ಯಾಗಝೀನ್ನಲ್ಲಿ ಆರೋಗ್ಯ ಕ್ಷೇತ್ರದ 50 ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ದೇವಿಶೆಟ್ಟಿ ಹೆಸರು ಬಂದಿದೆ.


