ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ, ಪಂದ್ಯದ ವೇಳೆ ಭಾರತೀಯ ಆಟಗಾರರು ಕೈಕುಲುಕದಿದ್ದರೆ ಅದನ್ನು ನಿರ್ಲಕ್ಷಿಸಿ, ಕೇವಲ ಆಟದ ಮೇಲೆ ಗಮನಹರಿಸುವಂತೆ ಪಿಎಚ್ಎಫ್ ತನ್ನ ಆಟಗಾರರಿಗೆ ಸಲಹೆ ನೀಡಿದೆ.
ಇಸ್ಲಾಮಾಬಾದ್: ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಆಟಗಾರರ ನಡುವೆ ಆರಂಭವಾಗಿದ್ದ ನೋ ಹ್ಯಾಂಡ್ ಶೇಕ್ ನಿಯಮ ಇದೀಗ ಹಾಕಿಗೂ ವಿಸ್ತರಿಸುವ ಸಂಭವ ದಟ್ಟವಾಗಿದೆ. ಈ ಹಿನ್ನೆಲೆ ಭಾರತೀಯ ಆಟಗಾರರು ಕೈಕುಲುಕದಿದ್ದರೆ ಅದನ್ನು ನಿರ್ಲಕ್ಷಿಸಿ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್ಎಫ್) ತನ್ನ ರಾಷ್ಟ್ರೀಯ ತಂಡದ ಆಟಗಾರರಿಗೆ ಸಲಹೆ ನೀಡಿದೆ.
ಮಲೇಷ್ಯಾದಲ್ಲಿಂದು ಭಾರತ-ಪಾಕಿಸ್ತಾನ ಮುಖಾಮುಖಿ
ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಮಂಗಳವಾರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಹಿನ್ನೆಲೆ ಪಿಎಚ್ಎಫ್ ತನ್ನ ಆಟಗಾರರಿಗೆ ಕೆಲವು ಸಲಹೆ ನೀಡಿದೆ. ಈ ಬಗ್ಗೆ ಪಿಎಚ್ಎಫ್ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ' ಪಂದ್ಯದ ಮೊದಲು ಅಥವಾ ಕೊನೆಯಲ್ಲಿ ಭಾರತೀಯ ಆಟಗಾರರು ಕೈ ಕುಲುಕದಿದ್ದರೆ, ಆ ಸನ್ನೆಯನ್ನು ನಿರ್ಲಕ್ಷಿಸಿ ಮುಂದುವರೆಯಿರಿ. ಆಟದ ಸಮಯದಲ್ಲಿ ಯಾವುದೇ ಭಾವನಾತ್ಮಕ ಜಗಳ ಅಥವಾ ಸನ್ನೆಗಳನ್ನು ತಪ್ಪಿಸಿ ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಕೇವಲ ಆಟದ ಕಡೆಗಷ್ಟೇ ಗಮನ ಹರಿಸುವಂತೆ ಪಿಎಚ್ಎಫ್ ತನ್ನ ಆಟಗಾರರಿಗೆ ಸಲಹೆ ನೀಡಿದೆ.
ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಸುತ್ತು: ಭಾರತಕ್ಕಿಂದು ಸಿಂಗಾಪುರ ವಿರುದ್ಧ ಡು ಆರ್ ಡೈ ಪಂದ್ಯ
ಗೋವಾ: 2027ರ ಎಎಫ್ಸಿ ಏಷ್ಯನ್ ಕಪ್ಗೆ ಅರ್ಹತೆ ಪಡೆಯುವ ಭಾರತ ಫುಟ್ಬಾಲ್ ತಂಡದ ಕನಸು ಜೀವಂತವಾಗಿರಬೇಕಿದ್ದರೆ, ಮಂಗಳವಾರ ಇಲ್ಲಿ ನಡೆಯಲಿರುವ ಸಿಂಗಾಪುರ ವಿರುದ್ಧ ದ್ವಿತೀಯ ಚರಣದ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಿದೆ.
ಅ.9ರಂದು ಸಿಂಗಾಪುರದಲ್ಲಿ ನಡೆದಿದ್ದ ಆ ದೇಶದ ವಿರುದ್ಧದ ಮೊದಲ ಚರಣದ ಪಂದ್ಯವನ್ನು ಭಾರತ 1-1 ಗೋಲುಗಳಲ್ಲಿ ಡ್ರಾ ಮಾಡಿಕೊಂಡಿತ್ತು. 90ನೇ ನಿಮಿಷದಲ್ಲಿ ರಹೀಂ ಅಲಿ ಬಾರಿಸಿದ ಗೋಲು ಭಾರತ ಟೂರ್ನಿಯಿಂದ ಹೊರಬೀಳುವುದನ್ನು ತಪ್ಪಿಸಿತ್ತು. ಭಾರತ ಏಷ್ಯನ್ ಕಪ್ಗೆ ಅರ್ಹತೆ ಪಡೆಯಲು ಬಾಕಿ ಇರುವ ಮೂರೂ ಪಂದ್ಯಗಳನ್ನು ಗೆಲ್ಲಬೇಕು. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಪ್ರಧಾನ ಟೂರ್ನಿಗೆ ಅರ್ಹತೆ ಪಡೆಯಲಿದ್ದು, ಸದ್ಯ ಮೊದಲ ಸ್ಥಾನದಲ್ಲಿರುವ ಹಾಂಕಾಂಗ್ ಇನ್ನು 4ಕ್ಕಿಂತ ಹೆಚ್ಚು ಅಂಕ ಗಳಿಸಬಾರದು. ಆಗಷ್ಟೇ ಭಾರತಕ್ಕೆ ಪ್ರಧಾನ ಟೂರ್ನಿಗೇರಲು ಅವಕಾಶ ಸಿಗಲಿದೆ.
ತಂಡದ ಸದ್ಯದ ಲಯ ನೋಡಿದಾಗ ಅರ್ಹತೆ ಪಡೆಯುವುದು ಅಷ್ಟು ಸುಲಭವಲ್ಲ ಎನ್ನುವುದು ಸ್ಪಷ್ಟ. ಆದರೂ, ಕೋಚ್ ಖಾಲಿದ್ ಜಮೀಲ್ ಮಾರ್ಗದರ್ಶನದ ತಂಡ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದೆ.
ಇಂದಿನಿಂದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್
ಒಡೆನ್ಸ್: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಆರಂಭವಾಗಲಿದ್ದು, ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ - ಚಿರಾಗ್ ಶೆಟ್ಟಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ. ಉಳಿದಂತೆ ಕನ್ನಡಿಗ ಆಯುಶ್ ಶೆಟ್ಟಿ, ಲಕ್ಷ್ಯ ಸೇನ್, ಅನ್ಮೋಲ್ ಖಾರ್ಬ್ ಸೇರಿದಂತೆ ಭಾರತದ ಪಮುಖ ಶಟ್ಲರ್ಗಳು ಕಣದಲ್ಲಿದ್ದಾರೆ.


