ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಬಸ್ ಅಪಘಾತ, ಕಂದಕಕ್ಕೆ ಉರುಳಿ 9 ಸಾವು, ಇನ್ನುಳಿದ 28 ಮಂದಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಘಾಟಿ ರಸ್ತೆಯಲ್ಲಿ ನಡೆದ ಆ ಅಪಘಾತಕ್ಕೆ ಕಾರಣವೇನು?
ವಿಜಯವಾಡ (ಡಿ.12) ಭದ್ರಾಚಲಂ ದೇವಸ್ಥಾನ ದರ್ಶನ ಪಡೆದು ಬಳಿಕ ಅಣ್ಣಾವರಂನತ್ತ ಹೊರಟಿದ್ದ ಭಕ್ತರ ಬಸ್ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮರೇಡುಮಿಲ್ಲಿ ಘಾಟಿ ರಸ್ತೆಯಲ್ಲಿ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 37 ಮಂದಿ ಪ್ರಯಾಣಿಕರ ಬೈಕಿ 9 ಮಂದಿ ಮೃತಪಟ್ಟರೆ, ಇನ್ನುಳಿದ 28 ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು, ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ಸಿಪಿ ರಾಧಕೃಷ್ಣನ್ ಸೇರಿದಂತೆ ಹಲವು ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ರಾತ್ರಿಯಲ್ಲಿ ದಾರಿ ಸ್ಪಷ್ಟವಾಗದೆ ದುರ್ಘಟನೆ
ಡಿಸೆಂಬರ್ ತಿಂಗಳಲ್ಲಿ ಬಹುತೇಕ ಬೆಟ್ಟ, ಘಾಟಿ ರಸ್ತೆಗಳು ಹಿಮದಿಂದ ಕೂಡಿರುತ್ತದೆ. ಇತ್ತ ಮರೇಡುಮಿಲ್ಲಿ ಘಾಟಿಯಲ್ಲಿ ಭಾರಿ ಹಿಮ ತುಂಬಿಕೊಂಡಿತ್ತು. ಇತ್ತ ಅಣ್ಣಾವರಂ ದೇವಸ್ಥಾನಕ್ಕೆ ತೆರಳುವ ದಾರಿ ಬಗ್ಗೆ ಚಾಲಕನಿಗೆ ಸ್ಪಷ್ಟತೆ ಇರಲಿಲ್ಲ. ಭಾರಿ ತಿರುವಿನಲ್ಲಿ ಅಂದಾಜು ಮಾಡಲು ಚಾಲಕ ಎಡವಿದ್ದಾನೆ. ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ತಡೆ ಗೋಡೆಗೆ ಡಿಕ್ಕಿ ಹೊಡೆದು ಕಂದಕ್ಕೆ ಉರುಳಿದೆ. ಈ ಘಾಟಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಇಲ್ಲದ ಕಾರಣ ಅಪಘಾತ ಮಾಹಿತಿ ಹತ್ತಿರದ ಮೊತುಗುಂಟಾ ಅಧಿಕಾರಿಗಳಿಗೆ ಸಿಗಲು ವಿಳಂಬವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು, ಪೊಲೀಸರು ಧಾವಿಸಿ ರಕ್ಷಣ ಕಾರ್ಯ ನಡೆಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ
ಘಟನೆಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮೃತರ ಕುಟುಂಬದ ಜೊತೆ ಸರ್ಕಾರ ನಿಲ್ಲಲಿದೆ ಎಂದಿದ್ದಾರೆ. ಇದೇ ವೇಳೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇತ್ತ ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅಘಾತ ವ್ಯಕ್ತಪಡಿಸಿದ್ದಾರೆ. ಆಪಘಾತ ಮಾಹಿತಿ ತಿಳಿದು ನೋವಾಗಿದೆ. ನನ್ನ ಪ್ರಾರ್ಥನೆ ಈ ಅಪಘಾತದಲ್ಲಿ ಸಂಕಷ್ಟಕ್ಕೆ ಸಿಲುಕಿದವರು, ಕುಟುಂಬದ ಜೊತೆ ಇರಲಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಇದೇ ರೀತಿ ಘಟನೆ
ಅರುಣಾಚಲ ಪ್ರದೇಶದಲ್ಲಿ ಡಿಸೆಂಬರ್ 8 ರಂದು ಕಾರ್ಮಿಕರ ಹೊತ್ತಿ ಸಾಗಿದ್ದ ಟ್ರಕ್ ಕಂದಕ್ಕೆ ಉರುಳಿತ್ತು. ಭಾರತ ಹಾಗೂ ಚೀನಾ ಗಡಿ ಪ್ರದೇಶದಿಂದ 45 ಕಿಲೋಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿತ್ತು. ಚಾಗ್ಲಾಗಾಮ್ ಪರ್ವತ ಪ್ರದೇಶದ ಬಾರ್ಡರ್ ರಸ್ತೆಯಲ್ಲಿ ಟ್ರಕ್ 10,000 ಅಡಿ ಕಂದಕಕ್ಕೆ ಉರುಳಿತ್ತು. ದುರಂತ ಅಂದರೆ ಡಿಸೆಂಬರ್ 8 ರಂದು ಅಪಘಾತ ನಡೆದಿತ್ತು. ಆದರೆ ಡಿಸೆಂಬರ್ 11ರಂದು ಬೆಳಕಿಗೆ ಬಂದಿತ್ತು. ಘಟನೆಯಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದರು. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ತೆವಳಿಕೊಂಡು ಮೇಲೆ ಬಂದು ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಹೀಗಾಗಿ ಈ ಅಪಘಾತ ಘಟನೆ ಬೆಳೆಕಿಗೆ ಬಂದಿತ್ತು.


