ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣದಲ್ಲಿ, ED ಸುಮಾರು 3,034 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ಮುಂಬೈನ ಫ್ಲ್ಯಾಟ್, ಖಂಡಾಲದ ಫಾರ್ಮ್‌ಹೌಸ್ ಮತ್ತು ಷೇರುಗಳು ಸೇರಿದಂತೆ ಈ ಕ್ರಮದಿಂದ, ಜಪ್ತಿಯಾದ ಒಟ್ಟು ಆಸ್ತಿ ಮೌಲ್ಯ 19,344 ಕೋಟಿ ರೂ.ಗೆ ಏರಿದೆ.

ಮುಂಬೈ (ಏ.28): ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ (RAAG) ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ED) ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದೆ. ಈ ಬಾರಿ ಸುಮಾರು 3,034 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡುವ ಮೂಲಕ ಉದ್ಯಮಿ ಅನಿಲ್ ಅಂಬಾನಿಗೆ ಭಾರಿ ಪೆಟ್ಟು ನೀಡಿದೆ. ಈ ಕ್ರಮದೊಂದಿಗೆ, ಈವರೆಗೆ ಸಮೂಹದ ಜಪ್ತಿಯಾದ ಒಟ್ಟು ಆಸ್ತಿಯ ಮೌಲ್ಯ 19,344 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಜಪ್ತಿಯಾದ ಪ್ರಮುಖ ಆಸ್ತಿಗಳು ಯಾವುವು?

ಪಿಎಂಎಲ್‌ಎ (PMLA) ಕಾಯ್ದೆಯ ಅಡಿಯಲ್ಲಿ ಇಡಿ ಅಧಿಕಾರಿಗಳು ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ (R-Infra) ಸಂಸ್ಥೆಗಳಿಗೆ ಸಂಬಂಧಿಸಿದ ಈ ಕೆಳಗಿನ ಬೆಲೆಬಾಳುವ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬೈನಲ್ಲಿರುವ ಐಷಾರಾಮಿ ಫ್ಲ್ಯಾಟ್ ಮತ್ತು ಪ್ರವಾಸಿ ತಾಣ ಖಂಡಾಲದಲ್ಲಿರುವ ಬೃಹತ್ ಫಾರ್ಮ್‌ಹೌಸ್. ಅಹಮದಾಬಾದ್ ಸಮೀಪದ ಸಾನಂದ್‌ನಲ್ಲಿರುವ ದೊಡ್ಡ ವಿಸ್ತೀರ್ಣದ ಜಮೀನು. ರೈಸ್ ಇ (RiseE) ಟ್ರಸ್ಟ್ ಅಡಿಯಲ್ಲಿ ಇರಿಸಲಾಗಿದ್ದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ 7.71 ಕೋಟಿ ರೂಪಾಯಿ ಮೌಲ್ಯದ ಷೇರುಗಳು ವಶಪಡಿಸಿಕೊಳ್ಳಲಾಗಿದೆ.

ತನಿಖೆಯ ಹಿನ್ನೆಲೆ ಏನು?

ಬ್ಯಾಂಕುಗಳಿಗೆ ವಂಚನೆ ಮತ್ತು ಹಣದ ದುರುಪಯೋಗ (Diversion of Funds) ಮಾಡಿರುವ ಗಂಭೀರ ಆರೋಪ ಅನಿಲ್ ಅಂಬಾನಿ ಸಮೂಹದ ಮೇಲಿದೆ. ಬ್ಯಾಂಕುಗಳಿಂದ ಯಾವ ಉದ್ದೇಶಕ್ಕಾಗಿ ಸಾಲ ಪಡೆಯಲಾಗಿತ್ತೋ, ಆ ಉದ್ದೇಶಕ್ಕೆ ಹಣ ಬಳಸುವ ಬದಲು ಬೇರೆಡೆಗೆ ವರ್ಗಾಯಿಸಿ ಅಕ್ರಮ ಹಣ ವರ್ಗಾವಣೆ (Money Laundering) ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ದೀರ್ಘಕಾಲದಿಂದ ಈ ಕಂಪನಿಗಳ ಆರ್ಥಿಕ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದ ಇಡಿ, ಈಗ ಈ ಆಸ್ತಿಗಳನ್ನು ತಾತ್ಕಾಲಿಕವಾಗಿ (Provisionally Attached) ಜಪ್ತಿ ಮಾಡಿ ತನಿಖೆಯನ್ನು ಚುರುಕುಗೊಳಿಸಿದೆ.

ಉದ್ಯಮ ಲೋಕದಲ್ಲಿ ಸಂಚಲನ

ಒಂದರ ಮೇಲೆ ಒಂದರಂತೆ ಕಾನೂನು ಸಂಕಷ್ಟಗಳಲ್ಲಿ ಸಿಲುಕುತ್ತಿರುವ ಅನಿಲ್ ಅಂಬಾನಿ, ಈ 19,000 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಆಸ್ತಿ ಜಪ್ತಿ ಪ್ರಕರಣದಿಂದ ಹೇಗೆ ಹೊರಬರುತ್ತಾರೆ ಎಂಬುದು ಈಗ ಕಾರ್ಪೊರೇಟ್ ಜಗತ್ತಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹೂಡಿಕೆದಾರರು ಕೂಡ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.