ಅಜೆಂಡಾ ಆಜ್ ತಕ್ 2025 ರ ವೇದಿಕೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿಗಳು ರಾಜ್ಯದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ತಮ್ಮ ಪ್ರಮುಖ ಯೋಜನೆಗಳನ್ನು ವಿವರಿಸಿದರು. ಒಂಬತ್ತನೇ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 300,000 ಕ್ಕೂ ಹೆಚ್ಚು ಬೈಸಿಕಲ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ. 

ನವದೆಹಲಿ (ಡಿ.11): ಅಜೆಂಡಾ ಆಜ್ ತಕ್ 2025 ರ ವೇದಿಕೆಯಲ್ಲಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿ ಮತದಾನದ ಮಾದರಿಗಳು ಯೋಜನೆಗಳು ಅಥವಾ ಸರ್ಕಾರಿ ಸವಲತ್ತುಗಳನ್ನು ಆಧರಿಸಿಲ್ಲ, ಬದಲಾಗಿ ಸಿದ್ಧಾಂತವನ್ನು ಆಧರಿಸಿವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸರ್ಕಾರ ಎಷ್ಟೇ ಆರ್ಥಿಕ ನೆರವು ನೀಡಿದರೂ, ರಾಜ್ಯದ ಒಂದು ದೊಡ್ಡ ವರ್ಗ, ವಿಶೇಷವಾಗಿ ಮುಸ್ಲಿಂ ಸಮುದಾಯ, ಅವರಿಗೆ ಮತ ಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ನಿತೀಶ್‌ ಕುಮಾರ್‌ ಮಹಿಳೆಯರಿಗೆ 10 ಸಾವಿರ ರೂಪಾಯಿ ನೀಡುವ ಯೋಜನೆ ಅದ್ಭುತವಾಗಿ ಸಾಬೀತಾಗಿದೆ. ನಿಮ್ಮ ಬಳಿ ಅದೇ ರೀತಿಯ ಬೇರೆ ಯಾವುದೇ ಯೋಜನೆಗಳಿವೆಯೇ ಎಂದು ಹಿಮಾಂತ ಬಿಸ್ವಾ ಶರ್ಮ ಅವರಿಗೆ ಕೇಳಲಾಯಿತು. ಅದಕ್ಕೆ ಉತ್ತರ ನೀಡಿದ ಅವರು, "ನಾವು ಈಗಾಗಲೇ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ 10,000 ರೂಪಾಯಿಗಳನ್ನು ನೀಡುತ್ತೇವೆ. ಆದರೆ 10,000 ರೂಪಾಯಿಗಳು ಚುನಾವಣೆಗಳನ್ನು ಗೆಲ್ಲುವ ಏಕೈಕ ಮಾರ್ಗವಾಗಿದ್ದರೆ, ಮುಸ್ಲಿಮರು ಸಹ ನಮಗೆ ಮತ ಹಾಕುತ್ತಿದ್ದರು. ತೇಜಸ್ವಿ ಯಾದವ್ ಗೆಲ್ಲುತ್ತಿದ್ದರು. ನಿತೀಶ್ ಕುಮಾರ್ ಅವರ ಉತ್ತಮ ಆಡಳಿತ ಮತ್ತು ಮೋದಿ ನಾಯಕತ್ವದಿಂದಾಗಿ ಚುನಾವಣೆಗಳನ್ನು ಗೆಲ್ಲಲಾಗಿದೆ" ಎಂದು ಅಸ್ಸಾಂ ಸಿಎಂ ಹೇಳಿದರು.

10 ಸಾವಿರ ರೂಪಾಯಿ ಇದರ ಒಂದು ಭಾಗವಾಗಿರಬಹುದು. ಆದರೆ, ಮತ ಹಾಕಿದ ಎಲ್ಲರಿಗೂ 10 ಸಾವಿರ ರೂಪಾಯಿ ಹೋಗಿಲ್ಲವಲ್ಲ ಎಂದು ಹೇಳಿದರು. ನಾವು ಬಿಹಾರದಲ್ಲಿ ಎರಡು ಪಟ್ಟು ಹೆಚ್ಚಿನ ಮತ ಪಡೆದುಕೊಂಡಿದ್ದೇವೆ. ಹಾಗಾದರೆ ಉಳಿದ ಜನರು ನಮಗೆ ಮತ ಹಾಕಿದ್ದು ಏಕೆ? ಅವರ ಮೇಲೆ ಪರಿಣಾಮ ಬೀರಿದ ಅಂಶವೇನು? ಇದನ್ನು ಸರಳವಾಗಿ ಹೇಳಬಹುದಾದರೆ, ಜನರು ಕೇವಲ 10 ಸಾವಿರ ರೂಪಾಯಿ ಮುಖ ನೋಡಿಕೊಂಡು ಮತ ಹಾಕಿಲ್ಲ. ಅದೊಂದೇ ನಿಜವಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ನಾನು 1 ಲಕ್ಷ ಹಣ ನೀಡಿದರೂ ಮುಸ್ಲಿಮರು ನನಗೆ ವೋಟು ಹಾಕೋದಿಲ್ಲ

"ನಾನು ಈಗ ಒಂದು ಲಕ್ಷ ರೂಪಾಯಿ ನೀಡಿದರೂ, ಅಸ್ಸಾಂನ ಜನಸಂಖ್ಯೆಯ ಹೆಚ್ಚಿನ ಭಾಗವು ನನಗೆ ಮತ ಹಾಕುವುದಿಲ್ಲ. ಅವರು ಯಾರೆಂದರೆ ಮುಸ್ಲಿಂ ಜನರು. ನಾನು ಒಂದು ಲಕ್ಷ ರೂಪಾಯಿ ನೀಡಿದರೂ ಮತ್ತು ಅವರು ಸಿಎಂ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದರೂ, ಅವರು ನನಗೆ ಮತ ಹಾಕುವುದಿಲ್ಲ. ಒಬ್ಬ ವ್ಯಕ್ತಿ ನೇರವಾಗಿಯೇ ನನಗೆ ಹೇಳಿದ್ದ. ನೀವು ತುಂಬಾ ಸಹಾಯ ಮಾಡಿದ್ದೀರಿ. ಅಗತ್ಯವಿದ್ದರೆ ನಾನು ನನ್ನ ಕಿಡ್ನಿ ಬೇಕಾದರೂ ನಿಮಗೆ ನೀಡುತ್ತೇವೆ. ಆದರೆ, ವೋಟ್‌ ಮಾತ್ರ ಹಾಕೋದಿಲ್ಲ ಎಂದಿದ್ದರು.

ಇದಕ್ಕಾಗಿಯೇ ಮತಗಳನ್ನು ಕೇವಲ ಒಂದು ಯೋಜನೆ ಅಥವಾ ಸರ್ಕಾರಿ ನೆರವಿನ ಆಧಾರದ ಮೇಲೆ ಚಲಾಯಿಸಲಾಗುವುದಿಲ್ಲ, ಬದಲಾಗಿ ಸಿದ್ಧಾಂತದ ಮೇಲೆ ಚಲಾಯಿಸಲಾಗುತ್ತದೆ ಎಂದು ಅವರು ಹೇಳಿದರು. ಮತಗಳನ್ನು ಒಂದು ಸಿದ್ಧಾಂತಕ್ಕಾಗಿ ಚಲಾಯಿಸಲಾಗುತ್ತದೆ. ನಾನು ಯಾರನ್ನೂ ದೂಷಿಸುವುದಿಲ್ಲ. ಯೋಜನೆಗಳನ್ನು ಒದಗಿಸುವುದರಿಂದ ಮತಗಳು ಸಿಗುತ್ತವೆ ಎಂದು ಭಾವಿಸುವುದು ತುಂಬಾ ಸರಳ. ನೀವು ಸರ್ಕಾರದಲ್ಲಿದ್ದರೆ, ಸಾರ್ವಜನಿಕರಿಗಾಗಿ ಯೋಜನೆಗಳನ್ನು ಜಾರಿಗೆ ತರುವುದು ಮುಖ್ಯ, ಆದರೆ ಇದು ಮಾತ್ರ ಮತಗಳನ್ನು ಗಳಿಸುತ್ತದೆ ಎಂದು ಭಾವಿಸುವುದು ತಪ್ಪು ಲೆಕ್ಕಾಚಾರ ಎಂದು ಹೇಳಿದ್ದಾರೆ.

Scroll to load tweet…

ನಾನು ಕಾಂಗ್ರೆಸ್‌ನವನು ಅನ್ನೋದನ್ನ ಮರೆತು ಬಿಡಿ

ಇತ್ತೀಚಿನ ಚಿನಗಳಲ್ಲಿ ಹಿಮಾಂತ ಬಿಸ್ವಾ ಶರ್ಮ ಹಿಂದೊಮ್ಮೆ ಕಾಂಗ್ರೆಸ್‌ ನಾಯಕರಾಗಿದ್ದರು ಅನ್ನೋದನ್ನು ನಂಬಲೂ ಕೂಡ ಕಷ್ಟವಾಗುವಂತೆ ಮಾತನಾಡುತ್ತಿದ್ದೀರಿ ಅನ್ನೋ ಪ್ರಶ್ನೆಗೆ, 'ನಾನೂ ಕೂಡ ಮರೆತಿದ್ದೇನೆ. ನೀವು ಕೂಡ ಮರೆತುಬಿಡಿ. ಬಹುಶಃ ಎಲ್ಲರೂ ಕೂಡ ಕಾಂಗ್ರೆಸ್‌ಅನ್ನು ಮರೆತರೆ ಒಳ್ಳೆಯದು' ಎಂದು ಹೇಳಿದರು.