ಆಪರೇಷನ್ ಸಿಂದೂರ್ ನಂತರ ಭಾರತ ವಿಶ್ವದಲ್ಲಿ ಏಕಾಂಗಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಟೀಕಿಸಿದ್ದಾರೆ. ಪಾಕಿಸ್ತಾನದ ನಡವಳಿಕೆ ಸುಧಾರಿಸಿದರೆ ಮಾತ್ರ ಉತ್ತಮ ಸಂಬಂಧ ಸಾಧ್ಯ ಎಂದಿದ್ದಾರೆ. ಐಎಂಎಫ್ ನೆರವು ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಹೋರಾಡಲು ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ನವದೆಹಲಿ (ಜುಲೈ.26): 'ಆಪರೇಷನ್ ಸಿಂದೂರ್' ನಂತರ ವಿಶ್ವದ ಯಾವುದೇ ದೇಶ ಭಾರತದ ಜೊತೆಗೆ ಇಲ್ಲ' ಎಂದು ಕೇಂದ್ರ ಸರ್ಕಾರದದ ವಿದೇಶಾಂಗ ಸಂಬಂಧಗಳ ಬಗ್ಗೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ತೀಕ್ಷ್ಣವಾದ ಟೀಕೆ ಮಾಡಿದ್ದಾರೆ.
ಸತ್ಯ ಹೇಳುವುದು ರಾಷ್ಟ್ರವಿರೋಧಿಯೇ?
ದೆಹಲಿಯಲ್ಲಿ ಐಎಎನ್‌ಎಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಉದಿತ್ ರಾಜ್, ಸತ್ಯ ಹೇಳುವುದು ರಾಷ್ಟ್ರವಿರೋಧಿಯೇ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಮುಂದುವರಿದು, ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಭಾರತ ಬಯಸುತ್ತೇವೆ. ಆದರೆ ಪಾಕಿಸ್ತಾನದ ನಡವಳಿಕೆ ಸುಧಾರಿಸಿದಾಗ ಮಾತ್ರ ಇದು ಸಾಧ್ಯ. ಭಯೋತ್ಪಾದನೆ ಮತ್ತು ಉತ್ತಮ ಸಂಬಂಧಗಳು ಒಟ್ಟಿಗೆ ಸಾಧ್ಯವಿಲ್ಲ ಎಂದರು.
ಆಪರೇಷನ್ ಸಿಂದೂರ್ ಬಳಿಕ ಭಾರತ ಏಕಾಂಗಿ:
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 'ಆಪರೇಷನ್ ಸಿಂದೂರ್' ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕಾರ್ಯಾಚರಣೆಗೆ ಮೊದಲು ಪಾಕಿಸ್ತಾನದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಲಾಗುತ್ತಿತ್ತು. ಆದರೆ ಇದೀಗ ಅವರನ್ನು ಅಪಹಾಸ್ಯ ಮಾಡಲಾಗುತ್ತಿದೆ. 26/11 ದಾಳಿಯ ನಂತರ ಪಾಕಿಸ್ತಾನ ಜಗತ್ತಿನಲ್ಲಿ ಪ್ರತ್ಯೇಕವಾಗಿತ್ತು, ಆದರೆ ಇಂದು ಭಾರತ ಏಕಾಂಗಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತದೊಂದಿಗೆ ಹೋರಾಡಲು ಐಎಂಎಫ್ ಉತ್ತೇಜನ:
ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಆರ್ಥಿಕ ನೆರವು ಸಿಗುತ್ತಿರುವುದನ್ನು ಉಲ್ಲೇಖಿಸಿದ ಉದಿತ್ ರಾಜ್, ಭಾರತದೊಂದಿಗೆ ಹೋರಾಡಲು ಪಾಕಿಸ್ತಾನಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.


