ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭಯೋತ್ಪಾದಕ ದಾಳಿಯು ರಾಜಕೀಯ ತಿರುವು ಪಡೆದುಕೊಂಡಿದೆ. ಈ ನಡುವೆ, ಕಾಂಗ್ರೆಸ್ ವಕ್ಆರೆ ನಜ್ಮಾ ನಜೀರ್ ಅವರು 'ನೋಂದಾವಣಿ ಇಲ್ಲದ ಉಗ್ರ ಸಂಘಟನೆ' ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಈ ಹೇಳಿಕೆಯು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದೆಹಲಿಯ ಕೆಂಪುಕೋಟೆಯಲ್ಲಿ ಮೊನ್ನೆ ನಡೆದಿರುವ ಭಯೋತ್ಪಾದನಾ ಕೃತ್ಯ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ವೈದ್ಯರ ವೇಷದಲ್ಲಿದ್ದ ಉಗ್ರರು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದಾರೆ. ಕೆಲವು ಸಂಘಟನೆಗಳು ಈ ಬಗ್ಗೆ ಮೌನವಾಗಿದ್ದರೂ, ಹಲವೆಡೆ ತೀವ್ರ ಪ್ರತಿರೋಧ ಬರುತ್ತಿವೆ. ಆಪರೇಷನ್​ ಸಿಂದೂರ್​ನಿಂದಲೂ ಬುದ್ಧಿ ಕಲಿಯದ ಪಾಕಿಸ್ತಾನವು ಮತ್ತದೇ ತನ್ನ ಚಾಳಿಯನ್ನು ಮುಂದುವರೆಸಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಉಗ್ರರ ಬಗ್ಗೆ ಒಂದು ರೀತಿಯ ಮಾತನಾಡುತ್ತಿದ್ದರೆ, ಬಿಹಾರದ ಚುನಾವಣೆಯ ಬೆನ್ನಲ್ಲೇ ಈ ಸ್ಫೋಟ ಆಗಿರುವುದಕ್ಕೆ ಬಿಜೆಪಿಯೇ ಇದನ್ನು ಮಾಡಿಸಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಕಾಂಗ್ರೆಸ್​ ಒಂದು ಸಮುದಾಯವನ್ನು ರಕ್ಷಿಸಲು ಪಣ ತೊಟ್ಟಂತಿದೆ ಎಂದು ಬಿಜೆಪಿಗಳು ತಿರುಗೇಟು ನೀಡುತ್ತಿದ್ದಾರೆ.

ರಾಜಕೀಯ ತಿರುವು

ಹೀಗೆ ಅಮಾಯಕರನ್ನು ಜೀವ ಪಡೆದ ಉಗ್ರರ ಈ ಕೃತ್ಯ ರಾಜಕೀಯದ ತಿರುವು ಪಡೆದುಕೊಂಡಿದೆ. ಈ ನಡುವೆಯೇ, ಕಾಂಗ್ರೆಸ್​ ಕಾರ್ಯಕರ್ತೆ ನಜ್ಮಾ ನಜೀರ್​ ಚಿಕ್ಕನೇರಳೆ ಅವರು ಫೇಸ್​ಬುಕ್​ನಲ್ಲಿ ಒಂದು ಪೋಸ್ಟ್​ ಹಾಕಿದ್ದು, ಇದೀಗ ಭಾರಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅಂದಹಾಗೆ, ಜೆಡಿಎಸ್​ ಜೊತೆ ಗುರುತಿಸಿಕೊಂಡಿದ್ದ ನಜ್ಮಾ ಅವರು, ಬಿಜೆಪಿ ಜೊತೆ ಜೆಡಿಎಸ್​ ಮೈತ್ರಿಮಾಡಿಕೊಂಡಿದ್ದ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷವನ್ನು ಸೇರಿದ್ದಾರೆ. ಧರ್ಮಸ್ಥಳದ ಪ್ರಕರಣದಲ್ಲಿ, ಎಐ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದ ಯುಟ್ಯೂಬರ್​ ಸಮೀರ್​ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ, ಇದೇ ನಜ್ಮಾ ಜೊತೆ ಕಾಣಿಸಿಕೊಂಡಿದ್ದರು. ಅವರು ಎಲ್ಲಿಯೂ ತಲೆಮರೆಸಿಕೊಂಡಿಲ್ಲ, ಅಪಪ್ರಚಾರ ಮಾಡಬೇಡಿ ಎಂದವರು ನಜ್ಮಾ. ಈ ಮೂಲಕ ಭಾರಿ ಜನಪ್ರಿಯತೆ ಪಡೆದಿದ್ದರು.

ನಜ್ಮಾ ಮಾತು

ಇದೀಗ ದೆಹಲಿ ಬಾಂಬ್​ ಬ್ಲಾಸ್ಟ್​ ಪ್ರಕರಣದಲ್ಲಿ, ನಜ್ಮಾ ಅವರು ಹೇಳಿದ್ದು ಏನೆಂದರೆ, ಅವರದ್ದೇ ಮಾತಿನಲ್ಲಿ ಹೇಳುವುದಾದರೆ, ನಿನ್ನೆ ದೆಹಲಿಯಲ್ಲಿ ಬಾಂಬ್ ದಾಳಿ ನಡೆಸಿದ ನೋಂದಾವಣಿ ಇಲ್ಲದ ಉಗ್ರ ಸಂಘಟನೆಗೆ ನನ್ನ ಧಿಕ್ಕಾರವಿದೆ. ಕೊಂದು-ಉಳಿಸಿಕೊಳ್ಳುವ ಧರ್ಮ ಯಾವುದು ಇಲ್ಲ. ಈ ಸಮಾಜಘಾತುಕ ಉಗ್ರ ಸಂಘಟನೆಗಳು ದೇಶದ ಒಳಗೆ ನುಸುಳಿ ಬರುತ್ತಿವೆ ಎಂದರೆ ಕೇಂದ್ರ ಸರ್ಕಾರ ಮತ್ತು ಗೃಹ ಇಲಾಖೆಯ ವೈಫ಼ಲ್ಯವೇ ಕಾರಣ. 2500kg RDX ದೇಶದ ಒಳಗೆ ಬಂದಿದೆ ಎಂದರೆ ಗೃಹ ಇಲಾಖೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ ಎಂದು ಅರಿವಿಗೆ ಬರುತ್ತಿದೆ. ದೇಶದ ಜನರಿಗೆ ಭದ್ರತೆ ನೀಡಲಾಗದ ಗೃಹ ಸಚಿವರಾದ Amit Shah ರಾಜಿನಾಮೆ ನೀಡಲಿ ಎಂದಿದ್ದಾರೆ.

ನೆಟ್ಟಿಗರ ಪ್ರಶ್ನೆ

ಉಗ್ರರ ವಿರುದ್ಧ ನಜ್ಮಾ ದನಿ ಎತ್ತಿರುವುದಕ್ಕೆ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕ ಮಂದಿ ಒಂದೇ ಒಂದು ಪ್ರಶ್ನೆಯನ್ನು ಇವರಿಗೆ ಕೇಳಿದ್ದಾರೆ. ಏನೆಂದರೆ ನೋಂದಾವಣಿ ಆಗದೇ ಇರುವ ಉಗ್ರ ಸಂಘಟನೆ ಎಂದರೆ, ನೋಂದಾವಣಿ ಆಗಿರುವ ಉಗ್ರ ಸಂಘಟನೆಗಳು ಎಷ್ಟಿವೆ ಎಂದು ಪ್ರಶ್ನಿಸಿದ್ದಾರೆ. ನೋಂದಣಿಯಾಗಿರುವ ಉಗ್ರ ಸಂಘಟನೆಗಳು ಈ ರೀತಿ ಬ್ಲಾಸ್ಟ್​ ಮಾಡಿದ್ದರೆ, ನೀವು ವಿರೋಧ ಮಾಡುತ್ತಿರಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಮಾತೇ ಎಲ್ಲವೂ ಹೇಳುತ್ತದೆ ಎಂದು ಟ್ರೋಲ್​ ಮಾಡುತ್ತಿದ್ದಾರೆ. ಕೊಂದು-ಉಳಿಸಿಕೊಳ್ಳುವ ಧರ್ಮ ಯಾವುದು ಇಲ್ಲ ಎನ್ನುವುದು ಇದಾಗಲೇ ಪದೇ ಪದೇ ಸಾಬೀತು ಆಗುತ್ತಿದೆ. ಈಗ ನಿಮ್ಮ ಮಾತಿನಲ್ಲಿಯೂ ಅದು ಸ್ಪಷ್ಟವಾಗಿದೆ ಎಂದಿದ್ದಾರೆ.

ನಜ್ಮಾ ಅವರ ಫೇಸ್​ಬುಕ್​ ಪೋಸ್ಟ್​ ಇಲ್ಲಿದೆ ನೋಡಿ: