ಗೋವಾದ ಸಂತ ಕ್ಸೇವಿಯರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಲಪಂಥೀಯ ವಾಗ್ಮಿ ಗೌತಮ್ ಕಟ್ಟರ್ ಅವರನ್ನು ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ. ಗೋವಾ ಪೊಲೀಸರ ಹುಡುಕಾಟದ ನಂತರ, ಕ್ರೈಂ ಬ್ರಾಂಚ್ ಅವರನ್ನು ವಶಕ್ಕೆ ಪಡೆದಿದೆ.

ಬಲಪಂಥೀಯ ಭಾಷಣಕಾರ, ವಾಗ್ಮಿ ಗೌತಮ್ ಕಟ್ಟರ್ ಬಂಧನ

ಪಣಜಿ: ಗೋವಾದ ಪ್ರಸಿದ್ಧ ಕ್ರೈಸ್ತ ಧರ್ಮಗುರು ಸಂತ ಕ್ಸೇವಿಯರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಬಲಪಂಥೀಯ ಭಾಷಣಕಾರ, ವಾಗ್ಮಿ ಗೌತಮ್ ಕಟ್ಟರ್ ಅವರನ್ನು ಹಿಮಾಚಲ ಪ್ರದೇಶದಲ್ಲಿ ಬಂಧಿಸಲಾಗಿದೆ. ಹಿಮಾಚಲ ಪ್ರದೇಶ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಏಪ್ರಿಲ್ 18ರಿಂದಲೂ ಗೋವಾ ಪೊಲೀಸರು ಗೌತಮ್ ಕಟ್ಟರ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪಣಜಿಯಲ್ಲಿ ಪ್ರಕರಣ ದಾಖಲಾಗಿತ್ತು.

ಗೌತಮ್ ಕಟ್ಟರ್ ಅವರು ಸನಾತನ ಮಹಾಸಭಾ ಎಂಬ ಸಂಘಟನೆಯೊಂದನ್ನು ಸ್ಥಾಪಿಸಿದ್ದು, ಹಿಮಾಚಲ ಪ್ರದೇಶದ ಬೆಟ್ಟದ ರಾಜ್ಯ ಎನಿಸಿದ ಕುಲು ಎಂಬಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಕ್ರೈಂ ಬ್ರಾಂಚ್‌ ಎಸ್‌ಪಿ ರಾಹುಲ್ ಗುಪ್ತ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬಲಪಂಥೀಯ ನಾಯಕನಾಗಿರುವ ಅವರನ್ನು ಕೂಡಲೇ ಕ್ರೈಂ ಬ್ರಾಂಚ್ ವಶಕ್ಕೆ ಪಡೆಯಲಿದೆ ಎಂದು ಎಸ್‌ಪಿ ಹೇಳಿದ್ದಾರೆ.

ಕ್ರೈಸ್ತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಆರೋಪ

ಗೋವಾ ಪೊಲೀಸರು ನೀಡಿದ ಸುಳಿವು ಆಧರಿಸಿ ಹಿಮಾಚಲ ಪ್ರದೇಶ ಪೊಲೀಸರು ಹಿಮಾಚಲದ ಕುಲುವಿನಲ್ಲಿ ಅವರನ್ನು ಬಂಧಿಸಲಾಗಿದೆ. ಗೋವಾ ಅಪರಾಧ ದಳ ಕೂಡಲೇ ಅವರನ್ನು ವಶಕ್ಕೆ ಪಡೆದು ಗೋವಾಗೆ ಕರೆದುಕೊಂಡು ಬರಲಿದೆ ಎಂದು ಎಸ್‌ಪಿ ಹೇಳಿದರು.

ಗೋವಾ ಕೋರ್ಟ್‌ ಈ ಹಿಂದೆ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಗೋವಾದ ಕ್ರಿಶ್ಚಿಯನ್ ಧರ್ಮಗುರು ಸಂತ ಕ್ಸೇವಿಯರ್ ವಿರುದ್ಧ ಅವರು ಮಾಡಿದ ಭಾಷಣ ಕಳೆದ ವಾರ ವಿವಾದಕ್ಕೆ ಕಾರಣವಾದ ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಅವರ ಸೋದರ ಮಾಧವ್ ಎಂಬುವವರನ್ನು ಉತ್ತರಾಖಂಡ್‌ನಲ್ಲಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ವರ್ಷದೊಳಗೆ 3ನೇ ಬಾರಿ ಟ್ರಂಪ್ ಹತ್ಯೆ ಯತ್ನ: ಶಂಕಿತನ ಫೋಟೋ ಬಿಡುಗಡೆ ಮಾಡಿದ ಟ್ರಂಪ್

ಹಳೆ ಗೋವಾದ ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್‌ನಲ್ಲಿ ಸಂರಕ್ಷಿಸಲಾಗಿರುವ ಸಂತ ಕ್ಸೇವಿಯರ್ ಬಗ್ಗೆ ಗೌತಮ್ ಖಟ್ಟರ್ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಶನಿವಾರ ಸಂಜೆ ಧಾರ್ಮಿಕ ಗುರು ಸ್ವಾಮಿ ಬ್ರಹ್ಮೇಶಾನಂದ್, ಗೋವಾ ಸಾರಿಗೆ ಸಚಿವ ಮೌವಿನ್ ಗೋಡಿನ್ಹೋ ಮತ್ತು ಬಿಜೆಪಿ ಶಾಸಕರಾದ ಸಂಕುಲಪ್ ಅಮೋಂಕರ್ ಮತ್ತು ದಾಜಿ (ಕೃಷ್ಣ) ಸಲ್ಕರ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಘಟನೆಯ ಬಳಿಕ ಖಟ್ಟರ್ ಅವರನ್ನು ಎರಡು ದಿನಗಳಲ್ಲಿ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಭರವಸೆ ನೀಡಿದಂತೆ, ಪ್ರಕರಣದಲ್ಲಿ ಸರ್ಕಾರವು ತ್ವರಿತ ಕ್ರಮ ಕೈಗೊಂಡಿದೆ ಎಂದು ಎಸ್ಪಿ ಗುಪ್ತಾ ಹೇಳಿದರು.

ಇದನ್ನೂ ಓದಿ: ಸಾಲಬಾಧೆ: ಮುದ್ದಿನ ಶ್ವಾನಕ್ಕೆ ವಿಷನೀಡಿ ತಾನು ಸಾವಿಗೆ ಶರಣಾದ 33 ವರ್ಷದ ಪ್ರಾಪರ್ಟಿ ಡೀಲರ್