ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಕಚ್ಚಿದ ಘಟನೆ ನಡೆದಿದೆ. ಗಾಯಾಳು ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ವಿಮಾನ ನಿಲ್ದಾಣದಂತಹ ಹೆಚ್ಚಿನ ಭದ್ರತಾ ವಲಯದಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಮಾನ ನಿಲ್ದಾಣದಲ್ಲೇ ಮಹಿಳೆಗೆ ಕಚ್ಚಿದ ಬೀದಿನಾಯಿ

ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ಪ್ರಯಾಣಿಕರಿಗೆ ಕುಳಿತುಕೊಳ್ಳುವುದಕ್ಕೆಂದು ಇರಿಸಿದ ಕಬ್ಬಿಣದ ಚೇರುಗಳ ಮೇಲೆ ಮಲಗಿ ಗಾಢ ನಿದ್ದೆಗೆ ಜಾರಿದ ವೀಡಿಯೋವೊಂದು ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಬೀದಿನಾಯಿಯೊಂದು ಮಹಿಳೆಗೆ ಕಚ್ಚಿದ ಘಟನೆ ನಡೆದಿದೆ. ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ರಲ್ಲಿಈ ಘಟನೆ ನಡೆದಿದೆ.

ನಾಯಿಯೊಂದು ಕಚ್ಚಿದ್ದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಂದು ಮಧ್ಯಾಹ್ನ 2:20 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಾಯಿ ದಾಳಿಗೊಳಗಾದ ಮಹಿಳೆ ದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಬಂದಿದ್ದು, ಏರ್‌ಪೋರ್ಟ್‌ನಿಂದ ನಿರ್ಗಮಿಸುವ ದ್ವಾರದ ಸಮೀಪವೇ ನಾಯಿ ಅವರಿಗೆ ಕಚ್ಚಿದೆ. . ನಾಯಿಗೆ ಈಗಾಗಲೇ ಲಸಿಕೆ ಹಾಕಲಾಗಿದ್ದು, ಆದ್ದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿದ್ದಾರೆ.

ಇದನ್ನೂ ಓದಿ: ಬೀದಿಯಲ್ಲಿ ಕಸ ಎಸೆಯುವವರಿಗೆ 'ಹಾಲ್ ಆಫ್ ಶೇಮ್': ವೀಡಿಯೋ ಮಾಡಿ ಎಲ್‌ಇಡಿ ಸ್ಕ್ರೀನ್ ಮೇಲೆ ಪ್ರಸಾರ

ವಿಮಾನ ನಿಲ್ದಾಣದಲ್ಲಿ ಹಾಜರಿದ್ದ ಪ್ರತ್ಯಕ್ಷದರ್ಶಿಗಳು, ಟರ್ಮಿನಲ್ -2 ಪ್ರದೇಶದಲ್ಲಿ ನಾಯಿ ಇದ್ದಕ್ಕಿದ್ದಂತೆ ಮಹಿಳೆಯ ಮೇಲೆ ದಾಳಿ ಮಾಡಿ ಆಕೆಯ ಕಾಲನ್ನು ಕಚ್ಚಿತು ಹತ್ತಿರದಲ್ಲಿದ್ದ ಜನರು ತಕ್ಷಣ ಆಕೆಗೆ ಸಹಾಯ ಮಾಡಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಮಾನ ನಿಲ್ದಾಣದ ಆಡಳಿತ ಮಂಡಳಿಯವರು ಗಾಯಗೊಂಡ ಪ್ರಯಾಣಿಕಳನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು. ಪ್ರಥಮ ಚಿಕಿತ್ಸೆ ನೀಡಿಸಿದ್ದಾರೆ. ಪ್ರಸ್ತುತ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ವಿಮಾನ ನಿಲ್ದಾಣದಲ್ಲಿ ನಾಯಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಪ್ರಯಾಣಿಕರು ಮತ್ತು ಸಾರ್ವಜನಿಕರ ಮೇಲೆ ನಾಯಿಗಳು ದಾಳಿ ಮಾಡಿರುವ ಇದೇ ರೀತಿಯ ಘಟನೆಗಳು ಈ ಹಿಂದೆಯೂ ವರದಿಯಾಗಿವೆ. ಇದರ ಹೊರತಾಗಿಯೂ, ವಿಮಾನ ನಿಲ್ದಾಣದ ಆವರಣದಲ್ಲಿ ಬೀದಿ ನಾಯಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ. ಭಾರತದ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ, ನಾಯಿಗಳನ್ನು ಹಿಡಿದು, ಸಂತಾನಹರಣ ಚಿಕಿತ್ಸೆ ಮಾಡಿ, ನಂತರ ಅವುಗಳನ್ನು ಸೆರೆಹಿಡಿದ ಅದೇ ಸ್ಥಳದಲ್ಲಿ ಬಿಡಬೇಕು.

ಇದನ್ನೂ ಓದಿ: ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇಟ್ಟಿದ್ದ ದಂಪತಿಗೆ ಆಘಾತ: 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆ

ಆದರೆ ಜೈಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಆವರಣಕ್ಕೆ ಬೇಲಿ ಹಾಕಿದ್ದಾರೆ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಇರುವ ನಾಯಿಗಳನ್ನು ಹಿಡಿದು ಲಸಿಕೆ ಹಾಕಲಾಗುತ್ತಿದೆ. ಆದರೂ, ವಿಮಾನ ನಿಲ್ದಾಣದಂತಹ ಹೆಚ್ಚಿನ ಭದ್ರತಾ ವಲಯದಲ್ಲಿ ಬೀದಿ ನಾಯಿಗಳ ಉಪಸ್ಥಿತಿಯು ಈಗ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.