Who is DSP Kalpana Verma?: ಛತ್ತೀಸ್‌ಗಢದ ಡಿಎಸ್‌ಪಿ ಕಲ್ಪನಾ ವರ್ಮಾ ಅವರ ಮೇಲೆ ರಾಯ್‌ಪುರದ ಉದ್ಯಮಿ ದೀಪಕ್ ಟಂಡನ್ ಲವ್‌ ಟ್ರ್ಯಾಪ್‌ ಮೂಲಕ 2.5 ಕೋಟಿ ರೂ. ಸುಲಿಗೆ ಮಾಡಿದ ಆರೋಪ ಹೊರಿಸಿದ್ದಾರೆ. ಈ ಆರೋಪಗಳನ್ನು ಕಲ್ಪನಾ ರಾಜಕೀಯ ಪಿತೂರಿ ಎಂದು ತಳ್ಳಿಹಾಕಿದ್ದಾರೆ.

ರಾಯ್‌ಪುರ (ಡಿ.10): ಕಳೆದ ಕೆಲವು ದಿನಗಳಿಂದ ಕಲ್ಪನಾ ವರ್ಮಾ ಎಂಬ ಯುವ ಪೊಲೀಸ್ ಅಧಿಕಾರಿ ಸುದ್ದಿಯಲ್ಲಿದ್ದಾರೆ. ರಾಯ್‌ಪುರದ ಉದ್ಯಮಿ ದೀಪಕ್ ಟಂಡನ್ ಆಕೆಯ ವಿರುದ್ಧ ಲವ್‌ ಟ್ರ್ಯಾಪ್‌ ಆರೋಪ ಮಾಡಿದ್ದು, ಅಂದಾಜು 2.5 ಕೋಟಿ ರೂಪಾಯಿ, ಒಂದು ಕಾರು, ವಜ್ರದ ಉಂಗುರ ಹಾಗೂ ಲಕ್ಷಾಂತರ ಮೌಲ್ಯದ ಆಭರಣವನ್ನು ಸುಲಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ಎಷ್ಟು ಗಂಭೀರವಾಗಿದೆಯೆಂದರೆ, ಖಾಕಿ ಸಮವಸ್ತ್ರದ ಬಗ್ಗೆಯೇ ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಇನ್ನೊಂದೆಡೆ ಕಲ್ಪನಾ ವರ್ಮ ತಮ್ಮ ಮೇಲಿನ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ಆಧಾರರಹಿತ ಹಾಗೂ ರಾಜಕೀಯ ಪಿತೂರಿ ಎಂದು ಕರೆದಿದ್ದಾರೆ. ಇದೆಲ್ಲದರ ನಡುವೆ ಆಕೆಯ ವಾಟ್ಸಾಪ್‌ ಚಾಟ್‌ಗಳು ಲೀಕ್‌ ಆಗಿವೆ.

ಕಲ್ಪನಾ ವರ್ಮಾ ಡಿಎಸ್‌ಪಿ ಆಗಿದ್ದು ಯಾವಾಗ?

ಕಲ್ಪನಾ ಛತ್ತೀಸ್‌ಗಢ ಪೊಲೀಸ್‌ಅಲ್ಲಿ ಯುವ ಮಹಿಳಾ ಅಧಿಕಾರಿ. ಅವರ ಪೂರ್ಣ ಹೆಸರು ಕಲ್ಪನಾ ವರ್ಮಾ, ಅವರು 2016-17 ಬ್ಯಾಚ್ ಅಧಿಕಾರಿ. 2016-17ರ ವರ್ಷದಲ್ಲೇ ಛತ್ತೀಸ್‌ಗಢ ಪೊಲೀಸರಿಗೆ ಸೇರಿದರು. ಅವರ ಆರಂಭಿಕ ದಿನಗಳಲ್ಲಿ, ಅವರು ರಾಯ್‌ಪುರದ ಮಾನಾ ಪೊಲೀಸ್ ಠಾಣೆಯಲ್ಲಿ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದಲ್ಲಿ ಸಿಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ನಂತರ, ಅವರನ್ನು ವಿವಿಧ ಸ್ಥಳಗಳಲ್ಲಿ ಡಿಎಸ್‌ಪಿ (ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಆಗಿ ನೇಮಿಸಲಾಯಿತು. ಪ್ರಸ್ತುತ, ಅವರನ್ನು ಛತ್ತೀಸ್‌ಗಢದ ಸೂಕ್ಷ್ಮ ಜಿಲ್ಲೆಯಾದ ದಂತೇವಾಡದಲ್ಲಿ ಡಿಎಸ್‌ಪಿಯಾಗಿ ನೇಮಿಸಲಾಗಿದೆ. ನಕ್ಸಲ್ ಪೀಡಿತ ಸ್ಥಿತಿಯಿಂದಾಗಿ ಈ ಪ್ರದೇಶವು ಯಾವಾಗಲೂ ಹೈಪ್ರೊಫೈಲ್ ಆಗಿರುತ್ತದೆ. ಪ್ರಸ್ತುತ ಅವರು ಹಿಡಿಯ ಮಹಿಳಾ ಡಿಎಸ್‌ಪಿ ಆಗಿದ್ದು, ಅವರ ಆರಂಭಿಕ ಜೀವನ, ಜನ್ಮದಿನಾಂಕ, ಬಾಲ್ಯದ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ.

ಈ ಹಿಂದೆಯೂ ಸುದ್ದಿಯಲ್ಲಿದ್ದ ಕಲ್ಪನಾ

ಕಲ್ಪನಾ ವರ್ಮಾ ಈ ಹಿಂದೆಯೂ ಸುದ್ದಿಯಲ್ಲಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪ್ರಸ್ತುತ ಗೃಹ ಸಚಿವ ವಿಜಯ್ ಶರ್ಮಾ ಮತ್ತು ಕೆಲವು ಹಿರಿಯ ಬಿಜೆಪಿ ನಾಯಕರು ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾಪನಾ ಪತ್ರವನ್ನು ಸಲ್ಲಿಸಲು ಹೋಗಿದ್ದ ಫೋಟೋ ವೈರಲ್ ಆಗಿತ್ತು, ಆದರೆ ಕಲ್ಪನಾ ವರ್ಮಾ ತಮ್ಮ ಮೊಬೈಲ್ ಫೋನ್ ನೋಡುವುದರಲ್ಲಿ ಮಗ್ನರಾಗಿದ್ದರು. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. 2017ರ ಬ್ಯಾಚ್‌ನ ಅಧಿಕಾರಿಯಾಗಿದ್ದರೂ ರಾಯ್‌ಪುರದಿಂದ ದಾಂತೇವಾಡದವರೆಗೆ ಎಲ್ಲೇ ಪೋಸ್ಟ್‌ ಆದರೂ ಅವರು ಸುದ್ದಿಯಲ್ಲಿ ಇರುತ್ತಿದ್ದರು.

ಲವ್‌ಟ್ರ್ಯಾಪ್‌ ಮಾಡಿ 2.5 ಕೋಟಿ ರೂಪಾಯಿ ಸುಲಿಗೆ

ರಾಯ್‌ಪುರದ ಉದ್ಯಮಿ ದೀಪಕ್ ಟಂಡನ್ ಖಮರ್ದಿಹ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 2021 ರಲ್ಲಿ, ಸ್ನೇಹಿತನ ಮೂಲಕ ಕಲ್ಪನಾ ವರ್ಮಾ ಅವರನ್ನು ತಾನು ಭೇಟಿಯಾಗಿದ್ದೆ ಎಂದಿದ್ದಾರೆ. ನಂತರ, ಕಲ್ಪನಾ ಅವರಿಗೆ ಆಗಾಗ್ಗೆ ಕರೆ ಮಾಡಲು ಪ್ರಾರಂಭಿಸಿದರು, ಹೋಟೆಲ್‌ಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರು ಮತ್ತು ತಡರಾತ್ರಿ ವೀಡಿಯೊ ಕಾಲ್‌ ಮಾಡಿ ಮಾತನಾಡುತ್ತಿದ್ದರು. ಕ್ರಮೇಣ, ಅವರ ಆತ್ಮೀಯತೆ ಬೆಳೆಯಿತು. ದೀಪಕ್ ಕೂಡ ಆಕೆಯ ಪ್ರೀತಿಯಲ್ಲಿ ಬಿದ್ದಿದ್ದರು.

ಪ್ರೀತಿ ಬೆಳೆದ ಬಳಿಕ ಕಲ್ಪನಾ ವಿವಿಧ ಕಾರಣಗಳನ್ನು ನೀಡಿ ಹಣ ಹಾಗೂ ಆಭರಣಗಳ ಬೇಡಿಕೆ ಇಡಲು ಆರಂಭಿಸಿದ್ದಳು. ದೀಪಕ್‌ ಕೂಡ ಆತ್ಮೀಯತೆ ಇದ್ದ ಕಾರಣಕ್ಕೆ ಆಕೆ ಕೇಳಿದ್ದನ್ನು ಕೊಡಿಸುತ್ತಾ ಹೋಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕಲ್ಪನಾ 2 ಕೋಟಿ ರೂಪಾಯಿ ಹಣ, ಒಂದು ಐಷಾರಾಮಿ ಕಾರು, 12 ಲಕ್ಷ ಮೌಲ್ಯದ ವಜ್ರದ ಉಂಗುರ, 5 ಲಕ್ಷ ಮೌಲ್ಯದ ಚಿನ್ನದ ಆಭರಣ, 1 ಲಕ್ಷ ಮೌಲ್ಯದ ಬಳೆ ಮತ್ತು ಹೋಟೆಲ್‌ ಒಂದರ ಮಾಲೀಕತ್ವವನ್ನು ಸಂಪಾದನೆ ಮಾಡಿದ್ದಾನೆ. ಇದರಿಂದ ದೀಪಕ್‌ ಅವರಿಗೆ ಆಗಿರುವ ಒಟ್ಟು ವಂಚನೆಯ ಮೊತ್ತ 2.5 ಕೋಟಿ ರೂಪಾಯಿ ಎನ್ನಲಾಗಿದೆ.

ಸಹೋದರನ ಹೋಟೆಲ್‌ಗಾಗಿ ಹಣ ಸುಲಿಗೆ ಮಾಡಿದ ಕಲ್ಪನಾ

ತನ್ನ ಸಹೋದರನಿಗೆ ಹೋಟೆಲ್ ತೆರೆಯಲು ಸಹಾಯ ಮಾಡುವ ಹೆಸರಿನಲ್ಲಿ ಕಲ್ಪನಾ ತನ್ನಿಂದ ಕೋಟ್ಯಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾಳೆ ಎಂದು ದೀಪಕ್ ಹೇಳಿಕೊಂಡಿದ್ದಾರೆ. ಪತ್ನಿಗೆ ಡೈವೋರ್ಸ್‌ ನೀಡುವಂತೆ ಕಲ್ಪನಾ ಒತ್ತಡ ಹೇರಿದ್ದಳು ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ದೀಪಕ್‌ ನಿರಾಕರಿಸಿ ತಾನು ನೀಡಿದ್ದ ಹಣ ಮತ್ತು ವಸ್ತುಗಳನ್ನು ವಾಪಾಸ್‌ ನೀಡುವಂತೆ ಹೇಳಿದ್ದಾರೆ. ಈ ವೇಳೆ ತಮ್ಮ ಪೊಲೀಸ್‌ ಅಧಿಕಾರ ಬಳಸಿಕೊಂಡು ಆಕೆ ಬೆದರಿಕೆ ಹಾಕಲು ಆರಂಭಿಸಿದ್ದಾಳೆ. ಆಕೆಯ ವಾಟ್ಸಾಪ್‌ ಚಾಟ್‌ಗಳನ್ನು ಸಾಕ್ಷಿಯಾಗಿ ನೀಡಲಾಗಿದೆ. ಆಕೆ ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದು, ಅವರಿನಿಂದ ನನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ದೀಪಕ್‌ ಆರೋಪಿಸಿದ್ದಾರೆ.