ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ , ತಂದೆ ಮಗಳ ಮೇಲಿನ ಪ್ರೀತಿ ಕುರಿತು ವಿಡಿಯೋ ಒಂದು ಇದೀಗ ಹಲವರನ್ನನು ಭಾವುಕರನ್ನಾಗಿ ಮಾಡಿದೆ. ಏನಿದು ವಿಡಿಯೋ
ನವದೆಹಲಿ (ಡಿ.08) ಪೋಷಕರಿಗೆ ಮಕ್ಕಳ ಮೇಲಿಟ್ಟಿರುವ ಅತೀವ ಪ್ರೀತಿ, ಬಾಂಧವ್ಯ ಹಲವು ಬಾರಿ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಮಕ್ಕಳು ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕಾಗಿ ಅಥವಾ ಇನ್ಯಾವುದೇ ಕಾರಣಕ್ಕಾಗಿ ದೂರದ ಊರಿಗೆ ತೆರಳಿದಾಗ ಪೋಷಕರ ಮನ ಮಿಡಿಯುತ್ತದೆ. ಬಹುತೇಕ ಸಂದರ್ಭದಲ್ಲಿ ಪೋಷಕರು ಹೇಳಿಕೊಳ್ಳುವುದಿಲ್ಲ. ದೂರದಲ್ಲಿರುವ ಮಕ್ಕಳು ಮನೆಗೆ ಬರಲು ಕಾಯುತ್ತಿರುತ್ತಾರೆ. ಅಥವಾ ಅವರ ಭೇಟಿಗಾಗಿ ಪೋಷಕರು ಹಾತೊರೆಯುತ್ತಾರೆ. ಹೀಗೆ ರೈಲಿನಲ್ಲಿ ಕೆಲಸದ ನಿಮಿತ್ತ ಪ್ರಯಾಣಿಸುತ್ತಿದ್ದ ಮಗಳನ್ನು ನೋಡಲು ತಂದೆ ರಾತ್ರಿ 11 ಗಂಟೆಗೆ ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ರೈಲು ಕೇವಲ 2 ನಿಮಿಷ ಮಾತ್ರ ನಿಲುಗಡೆ ಇದ್ದರೂ ಮಗಳನ್ನು ನೋಡಲು ತಂದೆ ಬಂದ ಘಟನೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ.
ದೆಹಲಿಯಿಂದ ಜೋಧಪುರಕ್ಕೆ ಪ್ರಯಾಣ
ನೋಯ್ಡಾದ ಯುವತಿ ಗರಿಮಾ ಲೂಥರ್ ದೆಹಲಿಯಿಂದ ಜೋಧಪುರಕ್ಕೆ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದಾಳೆ. ರಾತ್ರಿ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾಳೆ. ಪೋಷಕರು ಮಗಳ ಭೇಟಿಯಾಗದೇ ಕೆಲ ದಿನಗಳಾಗಿತ್ತು. ನವದೆಹಲಿಯಿಂದ ಹೊರಟ ಜೋಧಪುರ ರೈಲು ತಮ್ಮದೇ ಊರಿನ ಮೂಲಕ ಸಾಗಲಿದೆ ಎಂದು ತಿಳಿದಾಗ ಗರೀಮಾ ಲೂಥರ್ ತಂದೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಎಕ್ಸ್ಪ್ರೆಸ್ ರೈಲು ತಮ್ಮ ಊರಿನಲ್ಲಿ ಕೇವಲ 2 ನಿಮಿಷ ಮಾತ್ರ ನಿಲುಗಡೆಯಾಗಲಿದೆ. ಈ ಎರಡು ನಿಮಿಷ ಮಗಳ ಭೇಟಿ ಮಾಡಲು ತಂದೆ ನಿರ್ಧರಿಸಿದ್ದಾರೆ.
ರಾತ್ರಿ 11 ಗಂಟೆಗೆ ರೈಲು ನಿಲ್ದಾಣಕ್ಕೆ ಆಗಮಿಸಿದ ತಂದ
ಗರೀಮಾ ಲೂಥರ್ ಪೋಷಕರ ಜೊತೆ ಮಾತನಾಡಿದ ಬೆನ್ನಲ್ಲೇ ತಂದೆ ತಾನು ಭೇಟಿಯಾಗಲು ರೈಲು ನಿಲ್ದಾಣಕ್ಕೆ ಬರುವುದಾಗಿ ಹೇಳಿದ್ದಾರೆ. ಆರಂಭದಲ್ಲಿ ಈ ರಾತ್ರಿ ವಾಹನ ಚಲಾಯಿಸಿಕೊಂಡು ರೈಲು ನಿಲ್ದಾಣಕ್ಕೆ ಬರುವುದು ಬೇಡ ಎಂದಿದ್ದಾಳೆ. ವಿಪರೀತ ಚಳಿ, ತಡ ರಾತ್ರಿ ಆಗಿದ್ದ ಕಾರಣ ಈ ಮಾತನ್ನು ಹೇಳಿದ್ದಾಳೆ. ಆದರೆ ತಂದೆ ಅದೆಲ್ಲಾ ಪರ್ವಾಗಿಲ್ಲ, ರೈಲು ನಿಲ್ದಾಣಕ್ಕೆ ಬರುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಆಗಮಿಸುವ ಕೆಲ ಆಹಾರ ತಿನಿಸುಗಳನ್ನು ತುರುವುದಾಗಿ ತಂದೆ ಹೇಳಿದ್ದಾರೆ.
ಮಗಳ ರೈಲು ತಮ್ಮ ಊರಿಗೆ ಆಗಮಿಸುವ ಮೊದಲೇ ಗರೀಮಾ ಲೂಥರ್ ತಂದೆ ರೈಲು ನಿಲ್ದಾಣದಲ್ಲಿ ಹಾಜರಿದ್ದರು. ಇದಕ್ಕೂ ಮೊದಲು ವಿಡಿಯೋ ಮಾಡಿದ ಗರೀಮಾ, ನನ್ನ ತಂದೆ ನನ್ನ ಭೇಟಿಯಾಗಲು ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಕೇವಲ ಪೋಷಕರು ಮಾತ್ರ ಈ ರೀತಿ ಪ್ರೀತಿ ತೋರಲು ಸಾಧ್ಯ. ಕೇವಲ 2 ನಿಮಿಷ ಮಾತ್ರ ನಮ್ಮ ಊರಿನಲ್ಲಿ ನಿಲುಗಡೆ ಇದೆ. ಜೊತೆಗೆ ನನಗೆ ತಿಂಡಿಗಳನ್ನು ತರುತ್ತಿದ್ದಾರೆ ಎಂದು ಗರೀಮಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಇತ್ತ ರೈಲು ಊರಿನಲ್ಲಿ ನಿಲುಗಡೆಯಾಗುತ್ತಿದ್ದಂತೆ ತಂದೆ ಆಹಾರ ತಿನಿಸುಗಳ ಬ್ಯಾಗ್ ಹಿಡಿದು ನಿಂತಿದ್ದರು. ಬ್ಯಾಗ್ ಮಗಳಿಗೆ ನೀಡಿ ಕೈ ಕುಲುಕಿ, ಬೀಳ್ಕೊಟ್ಟಿದ್ದಾರೆ. 2 ನಿಮಿಷಕ್ಕಾಗಿ ತಂದೆ ರಾತ್ರಿ 11 ಗಂಟೆಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂದು ಗರೀಮಾ ಹೇಳಿಕೊಂಡಿದ್ದಾಳೆ. ತಂದೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ.


