ಬಿರಿಯಾನಿ ಬಳಿಕ ಕಲ್ಲಂಗಡಿ ಹಣ್ಣು ತಿಂದ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು, ಊಟದ ಬಳಿಕ ಸಂಬಂಧಿಕರ ಜೊತೆ ಮಾತನಾಡುತ್ತಾ ಕಾಲ ಕಳೆದ ಕುಟುಂಬ ಮಲಗುವ ಮುನ್ನ ಕಲ್ಲಂಗಡಿ ತಿಂದಿದ್ದಾರೆ. 

ಮುಂಬೈ (ಏ.27) ರಾತ್ರಿ ಊಟದ ಬಳಿಕ ಹಣ್ಣು ತಿನ್ನುವುದು ಸಾಮಾನ್ಯ. ಉತ್ತಮ ಆರೋಗ್ಯ, ಪೌಷ್ಠಿಕಾಂಶಗಳಿಗಾಗಿ ಬಹುತೇಕರು ಆಹಾರ ಸೇವಿಸಿದ ಬಳಿಕ ಹಣ್ಣು ತಿನ್ನುತ್ತಾರೆ. ಸಂಬಂಧಿಕರ ಮನೆಗೆ ಆಗಮಿಸಿದ ಕಾರಣ ಬಿರಿಯಾನಿ ಮಾಡಲಾಗಿದೆ. ಬಿರಿಯಾನಿ ತಿಂದು ಸಂಬಂಧಿಕರ ಜೊತೆ ಹರಟೆ ಹೊಡೆದ ಕುಟುಂಬ ಮಲಗುವ ಮುನ್ನ ಕಲ್ಲಂಗಡಿ ಹಣ್ಣು ತಿಂದಿದ್ದಾರೆ. ಮರುದಿನ ದುರಂತವೇ ನಡೆದು ಹೋಗಿದೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ದುರಂತ ಅಂತ್ಯಕಂಡ ಘಟನೆ ಮುಂಬೈನ ಪೈದುನಿ ಬಳಿ ನಡೆದಿದೆ.

ಒಂದೇ ಕುಟುಂಬದ ನಾಲ್ವರು ಸಾವು

ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್ ದೋಕಾಡಿಯಾ (35) ಇಬ್ಬರು ಮಕ್ಕಳಾದ ಆಯೇಷಾ (16), ಜೈನಾಬ್ (13) ಗುರುತಿಸಲಾಗಿದೆ. ಬಿರಿಯಾನಿ ಹಾಗೂ ಕಲ್ಲಂಗಡಿ ಹಣ್ಣು ತಿಂದು ದುರಂತ ಅಂತ್ಯ ಕಂಡ ಘಟನೆ ಇದೀಗ ಹಲವರನ್ನು ಬೆಚ್ಚಿ ಬೀಳಿಸಿದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಹೆಚ್ಚಾಗಿ ಲಭ್ಯವಿದೆ. ಇನ್ನು ಬಿರಿಯಾನಿ ಇದೀಗ ಬಹುತೇಕರ ಪ್ರತಿ ದಿನದ ಆಹಾರವಾಗಿದೆ. ಹೀಗಾಗಿ ಹಲವರು ಈ ಘಟನೆಯಿಂದ ಆತಂಕಗೊಂಡಿದ್ದಾರೆ.

ನಡೆದಿದ್ದೇನು?

ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಪ್ರವೀಣ್ ಮುಂಡೆ ಘಟನೆ ಕುರಿತು ವಿವರಣೆ ನಡೆದಿದೆ. ಅಬ್ದುಲ್ಲಾ ದೋಕಾಡಿಯಾ ಹತ್ತಿರದಲ್ಲೇ ಇದ್ದ ಸಂಬಂಧಿಕರನ್ನು ಊಟಕ್ಕೆ ಆಹ್ವಾನಿಸಿದ್ದಾರೆ. ಹೀಗಾಗಿ ಸಂಬಂಧಿಕರು ಆಗಮಿಸುತ್ತಿರುವ ಕಾರಣ ಬಿರಿಯಾನಿ ಮಾಡಲಾಗಿದೆ. ಸಂಬಂಧಿಕರ ಜೊತೆ ಎಲ್ಲರೂ ಸೇರಿ ಬಿರಿಯಾನಿ ಸವಿದಿದ್ದಾರೆ. ಕೆಲ ಹೊತ್ತು ಹರಟೆ ಹೊಡೆಯುತ್ತಾ ಕಾಲ ಕಳೆದಿದ್ದಾರೆ. ತಡ ರಾತ್ರಿಯಾಗುತ್ತಿದ್ದಂತೆ ಸಂಬಂಧಿಕರು ತೆರಳಿದ್ದಾರೆ. ಬಳಿಕ ಕುಟುಂಬ ಕೆಲ ಹೊತ್ತು ಮಾತನಾಡುತ್ತಾ ಕಾಲ ಕಳೆದಿದ್ದಾರೆ. ತಡ ರಾತ್ರಿಯಾಗಿದ್ದ ಕಾರಣ ಕಲ್ಲಂಗಡಿ ಹಣ್ಣು ಕತ್ತರಿಸಿ ಎಲ್ಲರೂ ತಿಂದು ಮಲಗಿದ್ದಾರೆ ಎಂದು ಪೊಲೀಸ್ ಕಮಿಷನರ್ ನಡೆದ ಘಟನೆಯನ್ನು ಹೇಳಿದ್ದಾರೆ.

ಮರುದಿನ ಬೆಳಗ್ಗೆ 5 ರಿಂದ 6 ಗಂಟೆ ಸುಮಾರಿಗೆ ಕುಟುಂಬ ಒಬ್ಬೊಬ್ಬ ಸದಸ್ಯರಿಗೆ ವಾಂತಿ ಬೇದಿ ಕಾಣಿಸಿಕೊಂಡಿದೆ. ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದರ ಬೆನ್ನಲ್ಲೇ ಪೋಷಕರು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಸಂಬಂಧಿಕರು ಆಗಮಿಸಿ ನಾಲ್ವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಜೆಜೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ. ತೀವ್ರ ಅಸ್ವಸ್ಥಗೊಂಡ ಕುಟುಂಬದ ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇತ್ತ ಮರಣೋತ್ತರ ಪರೀಕ್ಷೆಯಲ್ಲಿ ಆಹಾರದ ಮಾದರಿ ಸೇರಿದಂತೆ ಇತರ ವಸ್ತುಗಳನ್ನು ಪರಿಗಣಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.