ಕೆಲವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತರಾದ್ರೆ, ಒಂದಿಷ್ಟು ದಟ್ಟವಾದ ಹೊಗೆಯಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೇ ಉಸಿರುಗಟ್ಟಿ ಮೃತರಾಗಿದ್ದಾರೆ. ಕ್ಲಬ್ನ ಕೆಳಮಹಡಿಯಲ್ಲಿ ಈ ಸ್ಪೋಟ ಸಂಭವಿಸಿದೆ
ಪಣಜಿ: ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ನೈಟ್ಕ್ಲಬ್ನಲ್ಲಿ ಶನಿವಾರ (ಡಿಸೆಂಬರ್ 6, 2025) ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 23 ಮಂದಿ ಸಾವನ್ನಪ್ಪಿದ್ದಾರೆ. ಬಾಗಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ಎಂಬ ಕ್ಲಬ್ನಲ್ಲಿ ಕಿಚನ್ನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅವಘಡ ಸಂಭವಿಸಿದೆ ಎಂದು ಗೋವಾ ಪೊಲೀಸ್ ಮುಖ್ಯಸ್ಥ ಅಲೋಕ್ ಕುಮಾರ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಮೃತರೆಲ್ಲರೂ ಕ್ಲಬ್ ಸಿಬ್ಬಂದಿ ಎಂದು ತಿಳಿದು ಬಂದಿದ್ದು ಎಲ್ಲಾ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಕೆಲವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತರಾದ್ರೆ, ಒಂದಿಷ್ಟು ದಟ್ಟವಾದ ಹೊಗೆಯಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೇ ಉಸಿರುಗಟ್ಟಿ ಮೃತರಾಗಿದ್ದಾರೆ. ಕ್ಲಬ್ನ ಕೆಳಮಹಡಿಯಲ್ಲಿ ಈ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ. ಗ್ಯಾಸ್ ಸ್ಫೋಟ ಸಂಭವಿಸಿದ ವೇಳೆ ಕ್ಲಬ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಸಿಎಂ ಪ್ರಮೋದ್ ಸಾವಂತ್ ಭೇಟಿ
ಘಟನಾ ಸ್ಥಳಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಶಾಸಕ ಮೈಕೆಲ್ ಲೋಬೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಪ್ರಮೋದ್ ಸಾವಂತ್, ಇದೊಂದು ದುರಂತ ಘಟನೆ. ಅಗ್ನಿಅವಘಡಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಿ ಸುರಕ್ಷತಾ ಮಾನದಂಡಗಳಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೃತರಲ್ಲಿ ಮೂವರು ಪ್ರವಾಸಿಗರು ಸೇರಿದ್ದು ಅವರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನೈಟ್ಕ್ಲಬ್ಗಳಲ್ಲಿ ವಿಶೇಷ ಅಗ್ನಿ ಸುರಕ್ಷತೆ ಕುರಿತ ಪರಿಶೀಲನೆ
ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸ್ ತಂಡಗಳು ಆಗಮಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ದಟ್ಟವಾದ ಬೆಂಕಿ ಮತ್ತು ಹೊಗೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿತ್ತು. ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡಬೇಕಾಯ್ತು. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಎಲ್ಲಾ ನೈಟ್ಕ್ಲಬ್ಗಳಲ್ಲಿ ವಿಶೇಷ ಅಗ್ನಿ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಾಗುವುದ ಎಂದು ಸ್ಥಳೀಯ ಶಾಸಕ ಮೈಕೆಲ್ ಲೋಬೊ ಹೇಳಿದ್ದಾರೆ.
ಇತ್ತೀಚಿಗೆ ಹೈದರಾಬಾದ್ನಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ 17 ಜನರು ಸಾವನ್ನಪ್ಪಿದರು, ಕೋಲ್ಕತ್ತಾದ ಹೋಟೆಲ್ನಲ್ಲಿ ಸಂಭವಿಸಿದ ಬೆಂಕಿಯಲ್ಲಿ 15 ಜನರು ಸಾವನ್ನಪ್ಪಿದರು. ಗುಜರಾತ್ನ ಮನೋರಂಜನಾ ಉದ್ಯಾನವನದಲ್ಲಿ ಸಂಭವಿಸಿದ ಬೆಂಕಿಯಲ್ಲಿ 24 ಜನರು ಸಾವನ್ನಪ್ಪಿದರು. ಭಾರತದಲ್ಲಿ ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿವೆ.


