ಪಹಲ್ಗಾಂ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿಮಾನಗಳಿಗೆ ನ್ಯಾವಿಗೇಷನ್ ಸಿಸ್ಟಂ ಬಳಸಲಾಗದಂತೆ ಮಾಡಿದೆ. ಭಾರತವು ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಆಕಾಶದಲ್ಲಿ ಹಾರುವ ವಿಮಾನಗಳಿಗೆ ಮಾರ್ಗ ತಿಳಿಯಲು ಬಳಸುವ ನ್ಯಾವಿಗೇಷನ್ ಸಿಸ್ಟಂಗೆ ಸ್ಯಾಟಲೈಟ್ ಸೇವೆಗಳು ಅತೀ ಅಗತ್ಯ. ಆದರೆ ಈಗ ಪಹಲ್ಗಾಂ ದಾಳಿಯ ನಂತರ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾಗಿರುವ ಭಾರತ ಆ ದೇಶದ ವಿರುದ್ಧ ಹಲವು ನಿರ್ಬಂಧಗಳನ್ನು ಹೇರಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಕೂಡ ತನ್ನ ವಾಯು ಪ್ರದೇಶದಲ್ಲಿ ಭಾರತದ ವಿಮಾನ ಹಾರಾದಂತೆ ನಿರ್ಬಂಧ ಹೇರಿತ್ತು. ಈಗ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ನ್ಯಾವಿಗೇಷನ್ ಸಿಸ್ಟಂ ಬಳಸಲು ಸಾಧ್ಯವಾಗದಂತೆ ತನ್ನ ವಾಯುವ್ಯಾಪ್ತಿಯಲ್ಲಿ ಜಾಮರ್ ಅಳವಡಿಸಿದೆ ಎಂದು ವರದಿಯಾಗಿದೆ. ಭಾರತೀಯ ಜಾಮಿಂಗ್ ವ್ಯವಸ್ಥೆಗಳು ಅಮೆರಿಕಾದ ಜಿಪಿಎಸ್ ರಷ್ಯಾದ ಗ್ಲೋನಾಸ್ ಹಾಗೂ ಚೀನಾದ ಬೀಡೌ ಸೇರಿದಂತೆ ಬಹು ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಯೊಂದಿಗೆ ಹಸ್ತಕ್ಷೇಪ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಜಿಪಿಎಸ್, ಗ್ಲೋನಾಸ್, ಹಾಗೂ ಬೀಡೌ ಮುಂತಾದ ನ್ಯಾವಿಗೇಷನ್ ಸಿಸ್ಟಂಗಳನ್ನು ಪಾಕಿಸ್ತಾನದ ವಿಮಾನಗಳು ಹಾಗೂ ಪಾಕಿಸ್ತಾನವ ಮಿಲಿಟರಿ ಯುದ್ಧ ವಿಮಾನಗಳು ಬಳಸುತ್ತವೆ ಎಂದು ವರದಿಯಾಗಿದೆ.
ಪಾಕಿಸ್ತಾನಿ ಮಿಲಿಟರಿ ವಿಮಾನಗಳು ಬಳಸುವ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS)ಸಿಗ್ನಲ್‌ಗಳನ್ನು ಅಡ್ಡಿಪಡಿಸಲು ಭಾರತ ತನ್ನ ಪಶ್ಚಿಮದ ಗಡಿಯಲ್ಲಿ ಸುಧಾರಿತ ಜಾಮಿಂಗ್ ವ್ಯವಸ್ಥೆಗಳನ್ನು ನಿಯೋಜಿಸಿದೆ. ಇದು ಪಾಕಿಸ್ತಾನದ ವಿಮಾನಗಳ ನ್ಯಾವಿಗೇಷನ್ ಮತ್ತು ಸ್ಟ್ರೈಕ್ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಕುಗ್ಗಿಸುತ್ತದೆ ಎಂದು ವರದಿಯಾಗಿದೆ. ಏಪ್ರಿಲ್ 30 ರಿಂದ ಮೇ 23 ರವರೆಗೆ ಜಾರಿಗೆ ಬರುವಂತೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಗಳಿಗೆ ಭಾರತ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಯಾವುದೇ ಸಂಭಾವ್ಯ ಸಂಘರ್ಷ ಅಥವಾ ದಾಳಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಪರಿಸ್ಥಿತಿಯ ಅರಿವು, ಗುರಿ ನಿಖರತೆ ಮತ್ತು ನಿಖರ ನಿರ್ದೇಶಿತ ಯುದ್ಧ ಸಾಮಗ್ರಿಗಳ ಪರಿಣಾಮವನ್ನು ದುರ್ಬಲಗೊಳಿಸಲು ಈ ನಿಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ದಾಳಿಯ ನಂತರ ಭಾರತವು ಏಪ್ರಿಲ್ 30 ರಿಂದ ಮೇ 23 ರವರೆಗೆ ಜಾರಿಗೆ ಬರುವಂತೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸುವ ನೋಟಾಮ್ (ವಾಯುಪಡೆಗೆ ಸೂಚನೆ) ಅನ್ನು ಹೊರಡಿಸಿತು. ಇದು ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನದಿಂದ ನೋಂದಾಯಿಸಲ್ಪಟ್ಟ, ನಿರ್ವಹಿಸಲ್ಪಡುವ ಅಥವಾ ಗುತ್ತಿಗೆ ಪಡೆದ ಎಲ್ಲಾ ವಿಮಾನಗಳಿಗೆ ಅನ್ವಯಿಸುತ್ತದೆ ಎಂದು ವರದಿಯಾಗಿದೆ.
ಪಹಲ್ಗಾಮ್ ದಾಳಿಗೆ ಭಾರತದ ಪ್ರತೀಕಾರದ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶವನ್ನು ತಪ್ಪಿಸಿ ತಮ್ಮ ಮಾರ್ಗ ಬದಲಾಯಿಸಲು ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲೇ ಈ ನೋಟಮ್ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಬಂಧವನ್ನು ಈಗ ಅಧಿಕೃತಗೊಳಿಸಿರುವುದರಿಂದ, ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳು ಕೌಲಾಲಂಪುರದಂತಹ ಆಗ್ನೇಯ ಏಷ್ಯಾದ ನಗರಗಳಿಗೆ ತೆರಳಲು ಚೀನಾ ಅಥವಾ ಶ್ರೀಲಂಕಾದ ವಾಯುಪ್ರದೇಶದ ಮೂಲಕ ದೀರ್ಘ ಮತ್ತು ದುಬಾರಿ ಮಾರ್ಗದ ಮೂಲಕ ಸಾಗಬೇಕಾಗುತ್ತದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ತೆಗೆದುಕೊಂಡ ಪ್ರತೀಕಾರದ ಕ್ರಮಗಳ ಭಾಗವಾಗಿ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಭಾರತವು ಈಗಾಗಲೇ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದು, ಜೊತೆಗೆ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್‌ಲೈನ್ಸ್ 32 ವಿಮಾನಗಳ ಸಮೂಹವನ್ನು ಹೊಂದಿದೆ. ಭಾರತದ ಈ ನಿರ್ಧಾರದಿಂದ ಪಾಕಿಸ್ತಾನದ ವಿಮಾನಗಳು ಬಾಂಗ್ಲಾದೇಶ, ಆಗ್ನೇಯ ಏಷ್ಯಾಗೆ ಪ್ರಯಾಣಿಸಲು ಮತ್ತಷ್ಟು ಧೀರ್ಘಕಾಲ ಪ್ರಯಾಣ ಮಾಡಬೇಕಾಗುತ್ತದೆ.
32 ವಿಮಾನಗಳ ಸಮೂಹವನ್ನು ಹೊಂದಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA) ಮೇಲೆ ಇದು ವಿಶೇಷವಾಗಿ ಪರಿಣಾಮ ಬೀರುವ ನಿರೀಕ್ಷೆಯಿದೆ. ಆಗ್ನೇಯ ಏಷ್ಯಾ ಮತ್ತು ದೂರ ಪೂರ್ವಕ್ಕೆ ಪಾಕಿಸ್ತಾನದ ಅನೇಕ ವಿಮಾನಗಳ ಹಾರಾಟವನ್ನು ಈಗ ಒಂದರಿಂದ ಎರಡು ಗಂಟೆಗಳವರೆಗೆ ವಿಸ್ತರಿಸಲಾಗುವುದು. ಈ ಮಾರ್ಗ ಬದಲಾವಣೆಗಳಿಗೆ ಹೆಚ್ಚಿನ ಇಂಧನ ಬೇಕಾಗುತ್ತದೆ, ಸಿಬ್ಬಂದಿ ಕರ್ತವ್ಯದ ಸಮಯವನ್ನು ಹೆಚ್ಚಿಸುತ್ತದೆ ಇತ್ತ ಭಾರತದ ಇಂಡಿಗೋ ಏರ್‌ಲೈನ್ಸ್ 370 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತದೆ. ಹಾಗೆಯೇ, ಆದರೆ ಏರ್ ಇಂಡಿಯಾ 200 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಹೊಂದಿದೆ.


