ಕಳೆದ ವರ್ಷ ವಾಹನ ಕಾನೂನು ಉಲ್ಲಂಘನೆಗೆ ₹12,000 ಕೋಟಿ ದಂಡ ವಿಧಿಸಲಾಗಿದ್ದು, ವಸೂಲಿಯಾದ ದಂಡ ಎಷ್ಟು ನೋಡಿ

ನವದೆಹಲಿ: ಕಳೆದ ವರ್ಷ ದೇಶದಲ್ಲಿ ವಾಹನ ಕಾನೂನು ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 12,000 ಕೋಟಿ ರು. ಮೊತ್ತದ ದಂಡ ಹಾಕಲಾಗಿದ್ದು, ಈ ಪೈಕಿ ಕೇವಲ 3,000 ಕೋಟಿ ರು. ಮೌಲ್ಯದ ದಂಡ ಮಾತ್ರ ಪಾವತಿಯಾಗಿದೆ. ಇನ್ನು 9 ಸಾವಿರ ಕೋಟಿ ರು. ಮೌಲ್ಯದ ದಂಡ ಬಾಕಿ ಉಳಿದಿದೆ ಎಂದು ವರದಿಯೊಂದು ಹೇಳಿದೆ.ಕಾರ್ಸ್‌ 24 ಹೊರತಂದ ಚಲನ್‌ ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ. 

2024ರಲ್ಲಿ ಒಟ್ಟು 8 ಕೋಟಿ ಚಲನ್‌ಗಳು (ರಸೀದಿಗಳು) ವಿತರಣೆಯಾಗಿದ್ದು, ಇದರಲ್ಲಿ ಶೇ.55ರಷ್ಟು 4 ವಾಹನಗಳಿಗೆ ಶೇ.45ರಷ್ಟು ದ್ವಿಚಕ್ರ ವಾಹನಗಳಿಗೆ ದಂಡ ಹೇರಲಾಗಿದೆ. ಇನ್ನು ಗುರುಗ್ರಾಮ ಒಂದೇ ಕಡೆ ದಿನಕ್ಕೆ 10 ಲಕ್ಷ ರು. ದಂಡ ಸಂಗ್ರಹವಾಗುತ್ತಿದೆ. ಜೊತೆಗೆ ಬೆಂಗಳೂರಿನ ದ್ವಿಚಕ್ರ ವಾಹನವೊಂದರ ಮೇಲೆ 2.91 ಲಕ್ಷ ರು. ದಂಡ ಇದ್ದಿದ್ದನ್ನು ಸಹ ಅದು ಉಲ್ಲೇಖಿಸಿದೆ.

ಚೆನ್ನೈ ಸೇರಿ ತಮಿಳುನಾಡಿನ ಹಲವೆಡೆ ವರುಣನ ಆರ್ಭಟ

ಚೆನ್ನೈ: ಚೆನ್ನೈ ಮತ್ತು ಉಪನಗರಗಳು ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ.ಬಂಗಾಳಕೊಲ್ಲಿ ಮೇಲಿನ ವಾಯುಪ್ರಸರಣವು ತಮಿಳುನಾಡು ಕರಾವಳಿಯ ಕಡೆಗೆ ಚಲಿಸಿದ್ದರಿಂದ ಚೆನ್ನೈ, ತಿರುವಲ್ಲೂರು, ಕಾಂಚಿಪುರಂ, ಚೆಂಗಲ್ಪಟ್ಟು, ಉಲುಂಥೂರ್‌ಪೇಟೆ, ಮೈಲಾಡುತುರೈ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಡೀ ಮಳೆಯಾಗಿದ್ದು, ತಾಪಮಾನ ಕುಸಿದಿದೆ.

ಮುಂದಿನ 2-3 ದಿನಗಳಲ್ಲಿ ದಕ್ಷಿಣ ಅರಬ್ಬೀ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಕೆಲವು ಭಾಗಗಳು, ದಕ್ಷಿಣ ಬಂಗಾಳ ಕೊಲ್ಲಿ, ಮಧ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಅನುಕೂಲಕರ ಪರಿಸ್ಥಿತಿಗಳಿವೆ.ಹಾಗಾಗಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಮಳೆಯುಂಟಾಗಲಿದೆ’ ಎಂದು ಚೆನ್ನೈ ಹವಾಮಾನ ಕೇಂದ್ರದ ಮುಖ್ಯಸ್ಥೆ ಬಿ. ಅಮುಧಾ ಹೇಳಿದ್ದಾರೆ.

ಸಮರ ಟ್ಯಾಂಕರ್‌ನಿಂದಲೂ ಪಾಕ್‌ಗೆ ಏಟು ನೀಡಿದ್ದ ಭಾರತ 

ನವದೆಹಲಿ: ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯ ಕುರಿತು ಒಂದೊಂದೇ ಅಚ್ಚರಿಯ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಭಾರತದ ಟ್ಯಾಂಕರ್‌ಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿಂತು ದಾಳಿ ಮಾಡಿದ್ದವು ಎಂದು ಭಾರತೀಯ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಡಿಟಿವಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಟಿ-72 ಟ್ಯಾಂಕ್‌ಗಳನ್ನು ಎಲ್‌ಒಸಿಯಲ್ಲಿ ನಿಲ್ಲಿಸಲಾಗಿತ್ತು. ಅವುಗಳ ಕಾರ್ಯ, ಉಗ್ರರು ಭಾರತದೊಳಗೆ ನುಸುಳುವ ಮಾರ್ಗಗಳು ಮತ್ತು ನುಸುಳುಕೋರರಿಗೆ ನೆರವಾಗುವ ಪಾಕ್ ಪೋಸ್ಟ್‌ಗಳನ್ನು ಧ್ವಂಸ ಮಾಡುವುದು, ಅವುಗಳಿಗೆ 125 ಎಂ.ಎಂ. ಗನ್ ಗಳು ಮತ್ತು 4000 ಮೀ. ರೇಂಜ್‌ನ ಕ್ಷಿಪಣಿಗಳನ್ನು ಅಳವಡಿಸಲಾಗಿತ್ತು ಎಂದಿದ್ದಾರೆ. ಕದನವಿರಾಮ ಉಲ್ಲಂಘನೆಗೆ ತಿರುಗೇಟು ನೀಡಲು ಕೆಲ ಆಸ್ತ್ರಗಳನ್ನು ಮಾತ್ರ ಬಳಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ. 

ಮತ್ತಿಬ್ಬರು ಐಎಸ್‌ಐ ಏಜೆಂಟರ ಬಂಧನ 
ರಾಂಪುರ/ಪಾಣಿಪತ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಏಜೆಂಟರನ್ನು ಉತ್ತರ ಪ್ರದೇಶದ ರಾಂಪುರ ಮತ್ತು ಹರ್ಯಾಣದ ನೂಡ್ನನಲ್ಲಿ ಬಂಧಿಸಲಾಗಿದೆ. ಹರ್ಯಾಣದ ಪಾಣಿಪತ್‌ನಲ್ಲಿ ಬಂಧನಕ್ಕೊಳಗಾದ ಆರೋಪಿ ನೌಮನ್ ಇಲಾಹಿ (24) ಐಎಸ್‌ಐನೊಂದಿಗೆ ಸಂಪರ್ಕದಲ್ಲಿದ್ದ. ಇನ್ನು ಉತ್ತರ ಪ್ರದೇಶದ ರಾಂಪುರದ ತಾಂಡಾ ಪಟ್ಟಣದಲ್ಲಿ ಬಂಧಿತನಾದ ಆರೋಪಿ ಶಹಜಾದ್ ಐಎಸ್‌ಐ ಪರವಾಗಿ ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.