ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಅಂತ್ಯವಾಗಿದ್ದು, 7-8 ತಿಂಗಳಲ್ಲಿ ಇದು ಜಾರಿಗೆ ಬರಲಿದೆ. ವಿಶೇಷವೆಂದರೆ, ಇದು ಭಾರತದ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಮೊದಲ ವ್ಯಾಪಾರ ಒಪ್ಪಂದವಾಗಿದೆ.
ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಅಂತ್ಯವಾಗಿದ್ದು, 7-8 ತಿಂಗಳಲ್ಲಿ ಇದು ಜಾರಿಗೆ ಬರಲಿದೆ. ವಿಶೇಷವೆಂದರೆ, ಇದು ಭಾರತದ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಮೊದಲ ವ್ಯಾಪಾರ ಒಪ್ಪಂದವಾಗಿದೆ. ಇದು ಈ ವರ್ಷ ವಿದೇಶಗಳ ಜೊತೆ ಭಾರತ ಮಾಡಿಕೊಂಡ 3ನೇ ಒಪ್ಪಂದವಾಗಿದೆ. ಇದಕ್ಕೂ ಮೊದಲು ಬ್ರಿಟನ್ ಮತ್ತು ಒಮಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ದೂರವಾಣಿ ಮೂಲಕ ಸಂಭಾಷಿಸಿದ ಬಳಿಕ ಈ ಘೋಷಣೆ ಮಾಡಿದ್ದಾರೆ. ಅಮೆರಿಕದ ತೆರಿಗೆ ದಾಳಿಯಿಂದ ಬೇಸತ್ತಿರುವ ಎರಡೂ ದೇಶಗಳಿಗೆ ಈ ಒಪ್ಪಂದ ಲಾಭದಾಯಕವಾಗುವ ನಿರೀಕ್ಷೆಯಿದೆ. ಇದರ ಮಾತುಕತೆ ಇದೇ ವರ್ಷದ ಮಾರ್ಚ್ನಲ್ಲಿ ಆರಂಭವಾಗಿತ್ತು.
ಮಹಿಳಾ ಮುಂದಾಳತ್ವ :
‘ನ್ಯೂಜಿಲೆಂಡ್ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ ಸಂಧಾನಕಾರರಾಗಿದ್ದ ಎಲ್ಲಾ ಅಧಿಕಾರಿಗಳು ಮಹಿಳೆಯರು. ಪೆಟಲ್ ಧಿಲ್ಲೋನ್ ಅವರು ಭಾರತದ ಮುಖ್ಯ ಸಂಧಾನಗಾರ್ತಿಯಾಗಿದ್ದರು. ಇದು ಮಹಿಳೆಯರ ನೇತೃತ್ವದಲ್ಲಿ ನಡೆದ ಮೊದಲ ಎಫ್ಟಿಎ ಒಪ್ಪಂದವಾಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ವಿದೇಶಾಂಗ ಸಚಿವ ಅಪಸ್ವರ:
ಭಾರತದೊಂದಿಗೆ ಏರ್ಪಟ್ಟಿರುವ ವ್ಯಾಪಾರ ಒಪ್ಪಂದಕ್ಕೆ ನ್ಯೂಜಿಲೆಂಡ್ನ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ ಅಪಸ್ವರ ಎತ್ತಿದ್ದು, ‘ಇದು ಅತಿ ಕೆಟ್ಟ ಒಪ್ಪಂದ. ಇದರಿಂದ ಭಾರತಕ್ಕೆ ಲಾಭವಾಗಲಿದೆಯೇ ಹೊರಟು ನ್ಯೂಜಿಲೆಂಡ್ಗೆ ಅಲ್ಲ’ ಎಂದಿದ್ದಾರೆ.
ಒಪ್ಪಂದದಲ್ಲಿ ಏನಿದೆ?:
- 5 ವರ್ಷಗಳಲ್ಲಿ ಉಭಯ ದೇಶಗಳ ವ್ಯಾಪಾರ ದುಪ್ಪಟ್ಟು. 44000 ಕೋಟಿ ರು.ಗೆ
- ನ್ಯೂಜಿಲೆಂಡ್ನಿಂದ ಭಾರತಕ್ಕೆ 20 ವರ್ಷಗಳಲ್ಲಿ 1.7 ಲಕ್ಷ ಕೋಟಿ ರು. ಹೂಡಿಕೆ
- ಭಾರತದ ಕುರಿ ಮಾಂಸ, ಉಣ್ಣೆ, ಇದ್ದಿಲು, ಅರಣ್ಯ ಉತ್ಪನ್ನ, ಪೀಠೋಪಕರಣಗಳಿಗೆ ತೆರಿಗೆ ಇಲ್ಲ
- ನ್ಯೂಜಿಲೆಂಡ್ನಿಂದ ಆಮದಾಗುವ ಕಿವಿ, ಬೆಣ್ಣೆ ಹಣ್ಣು, ವೈನ್, ಶಿಶು ಆಹಾರ, ಸಮುದ್ರದ ಆಹಾರ, ಜೇನು ಸೇರಿದಂತೆ ಶೇ.54.11ರಷ್ಟು ವಸ್ತುಗಳ ಮೇಲೆಯೂ ಶೂನ್ಯ ತೆರಿಗೆ
- ನ್ಯೂಜಿಲೆಂಡ್ನ ಡೈರಿ ಉತ್ಪನ್ನ, ತರಕಾರಿ, ಶಸ್ತ್ರಾಸ್ತ್ರ, ಆಭರಣಗಳಿಗೆ ತೆರಿಗೆ ವಿನಾಯ್ತಿ ಇಲ್ಲ
-ಕೌಶಲ್ಯ ಬೇಡುವ ವೃತ್ತಿಯಲ್ಲಿರುವ 5000 ಭಾರತೀಯರಿಗೆ ಪ್ರತೀ ವರ್ಷ ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ
-ಐಟಿ ಉದ್ಯೋಗಿಗಳು, ನಿರ್ಮಾಣ ಕಾರ್ಮಿಕರು, ಯೋಗ ಶಿಕ್ಷಕರು, ಆಯುಷ್ ವೈದ್ಯರು, ಅಡುಗೆಯವರು ಮತ್ತು ಸಂಗೀತ ಶಿಕ್ಷಕರಿಗೆ 3 ವರ್ಷ ಅಲ್ಲಿ ನೆಲೆಸಲು ಅವಕಾಶ


