ಡಾಲರ್ ಎದುರು ಭಾರತೀಯ ರೂಪಾಯಿ ಐತಿಹಾಸಿಕ ಕುಸಿತ ಕಂಡರೂ, ದೇಶದ ಆರ್ಥಿಕತೆ 8.2%ರಷ್ಟು ಪ್ರಬಲ ಬೆಳವಣಿಗೆ ಸಾಧಿಸಿದೆ. ಈ ಲೇಖನವು, ಡಾಲರ್ ಬೇಡಿಕೆ, ವಿದೇಶಿ ಹೂಡಿಕೆ ಹಿಂತೆಗೆತದಂತಹ ರೂಪಾಯಿ ಕುಸಿತದ ಕಾರಣ ಮತ್ತು ಆಂತರಿಕ ಉತ್ಪಾದನೆ ಜಿಡಿಪಿ ಹೇಗೆ ಹೆಚ್ಚಿಸುತ್ತದೆಂದು ವಿವರಿಸುತ್ತದೆ.
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಡಿಸೆಂಬರ್ 16ರಂದು ಭಾರತೀಯ ರೂಪಾಯಿ ಡಾಲರ್ ಎದುರು 91 ರೂಪಾಯಿ ಮೌಲ್ಯಕ್ಕೆ ಕುಸಿದಿತ್ತು. ಇದೊಂದು ಐತಿಹಾಸಿಕ ಕನಿಷ್ಠ ಮೌಲ್ಯವಾಗಿದ್ದು, ಎಲ್ಲರನ್ನೂ ಆತಂಕಕ್ಕೆ ಗುರಿ ಮಾಡಿದೆ. ನಿರಂತರ ನಾಲ್ಕು ದಿನಗಳ ಕಾಲ ನಮ್ಮ ರೂಪಾಯಿ ಪ್ರತಿದಿನವೂ ಕುಸಿತ ಕಾಣುತ್ತಾ ಸಾಗಿದ್ದು, ಪ್ರತಿಯೊಂದು ಡಾಲರ್ ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚು ದುಬಾರಿಯಾಗುತ್ತಿದೆ. ಇಷ್ಟಾದರೂ ಒಂದು ಒಗಟಿನಂತಹ ಪ್ರಶ್ನೆ ಕಾಡುತ್ತಲೇ ಇದೆ: ರೂಪಾಯಿ ಹೀಗೆ ದಿನೇ ದಿನೇ ಕುಸಿಯುತ್ತಿದ್ದರೂ, ಭಾರತದ ಆರ್ಥಿಕತೆ ಮಾತ್ರ ಕಳೆದ ತ್ರೈಮಾಸಿಕದಲ್ಲಿ 8.2% ಪ್ರಬಲ ಬೆಳವಣಿಗೆ ಸಾಧಿಸಿದೆ. ಇದು ಭಾರತವನ್ನು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯನ್ನಾಗಿಸಿದೆ. ಈ ಎರಡೂ ಬೆಳವಣಿಗೆಗಳು ಒಂದೇ ಸಮಯದಲ್ಲಿ ಉಂಟಾಗಲು ಹೇಗೆ ಸಾಧ್ಯ? ಈಗ ತಜ್ಞರಲ್ಲೂ ಗೊಂದಲ ಮೂಡಿಸಿರುವ ಈ ವೈರುಧ್ಯವನ್ನು ಅರ್ಥ ಮಾಡಿಕೊಳ್ಳಲು ನಾವು ಪ್ರಯತ್ನ ನಡೆಸೋಣ.
ರೂಪಾಯಿಯನ್ನು ಭಾರತೀಯ ರೂಪಾಯಿಗೆ ಇಟ್ಟಿರುವ ದರ ಪಟ್ಟಿ ಎಂದು ಭಾವಿಸೋಣ. ರೂಪಾಯಿ ಮೌಲ್ಯ 91ಕ್ಕೆ ಕುಸಿದಿದೆ ಎಂದರೆ, ಒಂದು ಡಾಲರ್ ಅನ್ನು ಖರೀದಿಸಲು ಹಿಂದೆ 85 ಅಥವಾ 86 ರೂಪಾಯಿ ನೀಡಬೇಕಿತ್ತು. ಈಗ ಒಂದು ಡಾಲರ್‌ಗೆ 91 ರೂಪಾಯಿ ನೀಡಬೇಕು. ಡಾಲರ್‌ಗೆ ಬೇಡಿಕೆ ಹೆಚ್ಚಾಗಿರುವುದರಿಂದಲೇ ಈ ಬೆಳವಣಿಗೆ ಉಂಟಾಗಿದೆ. ಭಾರತೀಯ ಆಮದುದಾರರು, ವಿದೇಶಗಳಿಂದ ಉತ್ಪನ್ನಗಳನ್ನು ಖರೀದಿಸುವ ಉದ್ಯಮಗಳು ಈಗಾಗಲೇ ತಮ್ಮ ಡಾಲರ್ ಸಂಗ್ರಹವನ್ನು ಹೆಚ್ಚಿಸುತ್ತಿವೆ. ಈ ಪ್ರಕ್ರಿಯೆಯನ್ನು ʼಹೆಡ್ಜಿಂಗ್ʼ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿ ಮಾನ್ಸೂನ್ ಆರಂಭಗೊಳ್ಳುವ ಮುನ್ನ ಕೊಡೆಗಳನ್ನು ಖರೀದಿಸಿ ಇಡುವಂತಹ ಪ್ರಕ್ರಿಯೆ. ರೂಪಾಯಿ ಮೌಲ್ಯ ಇನ್ನಷ್ಟು ಕುಸಿತಗೊಳ್ಳುವ ಆತಂಕ ಅವರಿಗಿದೆ. ಆದ್ದರಿಂದಲೇ ಆಮದುದಾರರು, ಉದ್ಯಮಿಗಳು ಇಂದೇ ಹೆಚ್ಚು ಡಾಲರ್ ಸಂಗ್ರಹಿಸಿಟ್ಟು, ನಾಳೆ ಇನ್ನೂ ಹೆಚ್ಚು ಹಣ ನೀಡುವುದನ್ನು ತಪ್ಪಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ. ಡಾಲರ್ ಖರೀದಿಗೆ ಇಂದು ಉಂಟಾಗಿರುವ ಅವಸರವೇ ರೂಪಾಯಿ ಮೌಲ್ಯವನ್ನು ಇನ್ನಷ್ಟು ಕೆಳಗೆ ತಳ್ಳುತ್ತಿದೆ.
ಇನ್ನು ವಿದೇಶೀ ಹೂಡಿಕೆದಾರರೂ ಈ ವರ್ಷ ಭಾರತೀಯ ಮಾರುಕಟ್ಟೆಗಳಿಂದ 18 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೊತ್ತವನ್ನು ಹಿಂಪಡೆದಿದ್ದು, ಇದು ಭಾರತ ಇತಿಹಾಸದಲ್ಲಿ ಕಂಡ ಅತ್ಯಧಿಕ ಹೊರ ಹರಿವಾಗಿದೆ. ಈ ಹೂಡಿಕೆದಾರರು ತಮ್ಮ ಭಾರತೀಯ ಷೇರುಗಳನ್ನು ಮಾರಾಟ ಮಾಡಿ, ಆ ಹಣವನ್ನು ತಮ್ಮ ದೇಶಕ್ಕೆ ಒಯ್ಯುತ್ತಿದ್ದಾರೆ. ಅಲ್ಲಿ ಅವರು ರೂಪಾಯಿಯನ್ನು ಡಾಲರ್ ಆಗಿ ಪರಿವರ್ತಿಸುತ್ತಾರೆ. ಹೆಚ್ಚಿನ ಜನರು ಡಾಲರ್ ಹೊಂದಲು ಬಯಸುತ್ತಿದ್ದಾರೆ ಎಂದರೆ, ಡಾಲರ್ ಹೆಚ್ಚು ದುಬಾರಿಯಾಗಿ, ರೂಪಾಯಿ ಅಗ್ಗವಾಗುತ್ತದೆ. ಈ ಒತ್ತಡದ ಮೇಲೆ ಅಮೆರಿಕ ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಿರುವ ಹೆಚ್ಚುವರಿ 50% ಸುಂಕವೂ ಸೇರಿಕೊಂಡಿದೆ. ಇದು ಅಮೆರಿಕನ್ ಗ್ರಾಹಕರಿಗೆ ನಮ್ಮ ರಫ್ತು ಉತ್ಪನ್ನಗಳನ್ನು ದುಬಾರಿಯಾಗಿಸಿದೆ. ಇದರಿಂದ ನಾವು ಕಡಿಮೆ ಮಾರಾಟ ನಡೆಸಿ, ನಮ್ಮ ಡಾಲರ್ ಆದಾಯವೂ ಕಡಿಮೆಯಾಗಿದೆ. ಆದರೆ ನಮಗೆ ತೈಲ, ಇಲೆಕ್ಟ್ರಾನಿಕ್ಸ್ ಮತ್ತು ರಸಗೊಬ್ಬರಗಳ ಆಮದಿಗೆ ಡಾಲರ್ ಬೇಕೇ ಬೇಕು. ಎಲ್ಲರಿಗೂ ಬೇಕಾದ ವಸ್ತು ಅಪರೂಪವಾದಾಗ ಸಹಜವಾಗಿಯೇ ಅದರ ಬೆಲೆ ಹೆಚ್ಚಾಗುತ್ತದೆ.
ಭಾರತದ ಕೇಂದ್ರೀಯ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ತನ್ನ ವಿದೇಶೀ ವಿನಿಮಯ ಸಂಗ್ರಹದಲ್ಲಿರುವ ಡಾಲರ್‌ಗಳನ್ನು ಮಾರಾಟ ಮಾಡುವ ಮೂಲಕ ರೂಪಾಯಿಗೆ ಬೆಂಬಲ ನೀಡಿದೆ. ಯಾವಾಗ ಆರ್‌ಬಿಐ ಮಾರುಕಟ್ಟೆಗೆ ಡಾಲರ್‌ಗಳನ್ನು ಬಿಡುಗಡೆಗೊಳಿಸುತ್ತದೋ, ಆಗ ಪೂರೈಕೆ ಹೆಚ್ಚಾಗಿ, ಡಾಲರ್ ಬೆಲೆ ಕಡಿಮೆಯಾಗುತ್ತದೆ. ಇದರಿಂದ ರೂಪಾಯಿಗೆ ಬೆಂಬಲ ಲಭಿಸುತ್ತದೆ. ರಿಸರ್ವ್ ಬ್ಯಾಂಕ್ ಈ ಕ್ರಮವನ್ನು ಫೆಬ್ರವರಿ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಕೈಗೊಂಡಿತ್ತು. ವರದಿಗಳ ಪ್ರಕಾರ, ಆರ್‌ಬಿಐ ಈಗಲೂ ಮತ್ತೊಮ್ಮೆ ಈ ಕ್ರಮಕ್ಕೆ ಮುಂದಾಗಿದೆ. ಆದರೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಡಾಲರ್ ಬಿಡುಗಡೆಗೊಳಿಸುವುದರಿಂದ ರೂಪಾಯಿಯ ಕುಸಿತವನ್ನು ತಡೆಯಲು ಸಾಧ್ಯವಾಗಿಲ್ಲ. ವ್ಯಾಪಾರಿಗಳು ಆರ್‌ಬಿಐ ದೊಡ್ಡ ಮಟ್ಟದಲ್ಲಿ ಮಧ್ಯಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಿದ್ದಾರೆ. ಆದರೆ ಇಲ್ಲಿ ಒಂದು ಗಮನಿಸಬೇಕಾದ ಅಂಶವಿದೆ. ಪ್ರತಿ ಬಾರಿ ಆರ್‌ಬಿಐ ಡಾಲರ್‌ಗಳನ್ನು ಮಾರಾಟ ಮಾಡಿದಾಗಲೂ, ನಮ್ಮ ವಿದೇಶೀ ವಿನಿಮಯ ಸಂಗ್ರಹ ಕಡಿಮೆಯಾಗುತ್ತದೆ. ಆದ್ದರಿಂದ ಆರ್‌ಬಿಐ ರೂಪಾಯಿಯ ರಕ್ಷಣೆ ಮತ್ತು ವಿದೇಶೀ ವಿನಿಮಯ ಸಂಗ್ರಹಗಳ ನಡುವೆ ಸಮತೋಲನ ಸಾಧಿಸಬೇಕು.
ಇಲ್ಲಿ ಒಂದು ಆಸಕ್ತಿಕರ ಅಂಶವಿದೆ. ಇಷ್ಟೆಲ್ಲ ರೂಪಾಯಿ ಮೌಲ್ಯ ಕುಸಿತದ ಹೊರತಾಗಿಯೂ, ಭಾರತದ ಜಿಡಿಪಿ ಕಳೆದ ತ್ರೈಮಾಸಿಕದಲ್ಲಿ 8.2% ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ ಜಾಗತಿಕ ಪ್ರಗತಿ ಕೇವಲ 3.2% ಇತ್ತು. ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಒಂದು ಮೃತ ಆರ್ಥಿಕತೆ ಎಂದು ಟೀಕಿಸಿದ್ದಕ್ಕೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈಗ ತಿರುಗೇಟು ನೀಡಿದ್ದಾರೆ. ಒಂದು ಮೃತ ಆರ್ಥಿಕತೆ ಇಷ್ಟು ವೇಗವಾಗಿ ಪ್ರಗತಿ ಸಾಧಿಸಿ, ಕ್ರೆಡಿಟ್ ರೇಟಿಂಗ್ ಮೇಲ್ದರ್ಜೆ ಹೊಂದಲು ಸಾಧ್ಯವೇ? ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ. ಜಿಡಿಪಿ ನಿಜಕ್ಕೂ ಏನನ್ನು ಅಳೆಯುತ್ತದೆ ಎನ್ನುವುದರಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ಜಿಡಿಪಿ ಭಾರತದ ಒಳಗೆ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಅಳೆಯುತ್ತದೆ. ಇದು ಉತ್ಪಾದನೆ, ಕೃಷಿ, ಸೇವೆ ಮತ್ತು ನಿರ್ಮಾಣದಂತಹ ಹಲವಾರು ಕ್ಷೇತ್ರಗಳನ್ನು ಒಳಗೊಂಡಿದೆ. ಜಾಗತಿಕ ವಿನಿಮಯ ಮಾರುಕಟ್ಟೆಗಳಲ್ಲಿ ರೂಪಾಯಿಗೆ ಏನೇ ಆದರೂ, ಈ ಆಂತರಿಕ ಉತ್ಪಾದನೆಯ ಇಂಜಿನ್ ಮಾತ್ರ ನಿರಂತರವಾಗಿ ಚಲಿಸುತ್ತಿರುತ್ತದೆ.
ಇದನ್ನು ಬೇರೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ: ಒಂದು ಸ್ಥಳೀಯ ಚಹಾ ಅಂಗಡಿ, ಬೆಂಗಳೂರಿನಲ್ಲೊಂದು ಸಾಫ್ಟ್‌ವೇರ್ ಕಂಪನಿ, ಪಂಜಾಬಿನಲ್ಲೊಂದು ಅಕ್ಕಿಯ ಮಿಲ್, ಮತ್ತು ಇತರ ಲಕ್ಷಾಂತರ ಉದ್ಯಮಗಳು ದೇಶದೊಳಗೇ ತಮ್ಮ ಉತ್ಪಾದನೆ ಮತ್ತು ಮಾರಾಟ ನಡೆಸುತ್ತಿವೆ ಎಂದುಕೊಳ್ಳೋಣ. ನೀವು ಸ್ಥಳೀಯ ಚಹಾ ಅಂಗಡಿಯಿಂದ ಚಹಾ ಕೊಂಡಾಗ, ಅಥವಾ ನಿಮ್ಮ ಪೋಷಕರು ಒಂದು ಭಾರತದಲ್ಲೇ ನಿರ್ಮಾಣವಾದ ಹೊಸ ಫೋನ್ ಕೊಂಡಾಗ, ಅಥವಾ ದೇಶದೊಳಗೇ ಒಂದು ಪ್ರವಾಸ ಯೋಜಿಸಿದಾಗ, ಇವೆಲ್ಲ ಹಣವೂ ಜಿಡಿಪಿಗೆ ಕೊಡುಗೆ ನೀಡುತ್ತವೆ. ಡಾಲರ್ ಎದುರು ರೂಪಾಯಿ ಮೌಲ್ಯ ಈ ಆಂತರಿಕ ಆರ್ಥಿಕ ಚಟುವಟಿಕೆಗಳನ್ನು ನೇರವಾಗಿ ತಡೆಗಟ್ಟುವುದಿಲ್ಲ. ಭಾರತದ ಯುವ ಜನತೆ ನಿರಂತರವಾಗಿ ಖರೀದಿ ಮಾಡುತ್ತಿದ್ದಾರೆ, ಉದ್ಯಮಗಳು ಹೂಡಿಕೆ ಮಾಡುತ್ತಿವೆ, ಮತ್ತು ಸರ್ಕಾರವೂ ಮೂಲಭೂತ ಸೌಕರ್ಯಗಳಿಗಾಗಿ ವೆಚ್ಚ ಮಾಡುತ್ತಿದೆ. ಇವೆಲ್ಲವೂ ಅಭಿವೃದ್ಧಿಗೆ ಚಾಲನೆ ನೀಡುತ್ತವೆ.
ಹಾಗೆಂದು ದುರ್ಬಲ ರೂಪಾಯಿಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲವೆನ್ನಲು ಸಾಧ್ಯವಿಲ್ಲ. ಆಮದು ಉತ್ಪನ್ನಗಳ ಬೆಲೆ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಪೆಟ್ರೋಲ್ ಬೆಲೆಯಿಂದ, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್ ಫೋನ್ ತನಕ ಎಲ್ಲದರ ಬೆಲೆ ಹೆಚ್ಚಳವಾಗುತ್ತದೆ. ನೀವೇನಾದರೂ ವಿದೇಶದಲ್ಲಿ ವ್ಯಾಸಂಗ ನಡೆಸಲು ಉದ್ದೇಶಿಸಿದ್ದರೆ, ಅಲ್ಲಿನ ಶುಲ್ಕ ಹೆಚ್ಚಾಗುತ್ತದೆ. ಇನ್ನು ವಿದೇಶ ಪ್ರವಾಸಕ್ಕೆ ಯೋಜನೆ ರೂಪಿಸಿದರೆ ಅದರಿಂದ ನಿಮ್ಮ ಕಿಸೆಗೆ ಹೆಚ್ಚಿನ ಬಿಸಿ ಮುಟ್ಟುತ್ತದೆ. ಅದೃಷ್ಟವಶಾತ್ ಭಾರತದ ಹಣದುಬ್ಬರ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ತಕ್ಷಣವೇ ಆತಂಕಕ್ಕೆ ಒಳಗಾಗುವ ಯಾವುದೇ ಅವಶ್ಯಕತೆಯಿಲ್ಲ. ಸರ್ಕಾರವೂ ಭಾರತದಲ್ಲಿರುವ ಬಲವಾದ ಮೂಲಭೂತ ಅಂಶಗಳು, ಪ್ರಬಲ ಆಂತರಿಕ ಬೇಡಿಕೆ, ಮತ್ತು ಜಗತ್ತು ಭಾರತದ ಸಾಮರ್ಥ್ಯವನ್ನು ಗುರುತಿಸಿರುವುದು ಇದಕ್ಕೆ ಕಾರಣ ಎಂದಿದೆ. ನಾವು ಈಗ ಬುದ್ಧಿವಂತಿಕೆಯಿಂದ ಆಲೋಚಿಸಿ, ಲೆಕ್ಕಾಚಾರ ಹಾಕಿ ಮುಂದಿನ ಹೆಜ್ಜೆಗಳನ್ನು ಇಡಬೇಕು. ಅಮೆರಿಕದ ಜೊತೆಗೆ ಒಂದು ವ್ಯಾಪಾರ ಒಪ್ಪಂದ ಏರ್ಪಟ್ಟರೆ, ಅದರಿಂದ ರಫ್ತಿಗೆ ಉತ್ತೇಜನ ಲಭಿಸಿ, ಡಾಲರ್ ಒಳ ಹರಿವು ಹೆಚ್ಚಾಗಿ, ಒಂದಷ್ಟು ನೆಮ್ಮದಿ ಏರ್ಪಡಬಹುದು. ಆರ್‌ಬಿಐ ಸಹ ತನ್ನ ವಿದೇಶೀ ವಿನಿಮಯವನ್ನು ಕಡಿಮೆಗೊಳಿಸದೆ, ಕಾರ್ಯತಂತ್ರದ ನಡೆಯಿಂದ ಮಧ್ಯಪ್ರವೇಶ ಮಾಡಬೇಕು.
ಆದ್ದರಿಂದ, ಭಾರತದ ಆರ್ಥಿಕತೆ ಪ್ರಗತಿ ಹೊಂದುತ್ತಿರುವ ಸಂದರ್ಭದಲ್ಲೂ ರೂಪಾಯಿ ಮೌಲ್ಯ ಕುಸಿಯಬಹುದು. ಯಾಕೆಂದರೆ, ಆರ್ಥಿಕತೆ ಮತ್ತು ರೂಪಾಯಿ ಮೌಲ್ಯಗಳು ಒಂದನ್ನೇ ಅಳೆಯುವ ಮಾಪಕಗಳಲ್ಲ. ಒಂದು ನಮ್ಮ ಹಣಕ್ಕಿರುವ ಬಾಹ್ಯ ಮೌಲ್ಯವನ್ನು ಸೂಚಿಸಿದರೆ, ಇನ್ನೊಂದು ನಮ್ಮ ಆಂತರಿಕ ಉತ್ಪಾದನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಆದರೆ ಇವೆರಡೂ ಮುಖ್ಯವಾದ ಅಂಶಗಳೇ ಆಗಿವೆಯಾದರೂ, ಎರಡೂ ಯಾವಾಗಲೂ ಜೊತೆಯಾಗಿ ಹೆಜ್ಜೆ ಇಡುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡರೆ, ನಮಗೆ ಗೊಂದಲಕಾರಿ ಅಂಶಗಳ ಬದಲು ಸಮಗ್ರ ಚಿತ್ರಣ ಲಭಿಸುತ್ತದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)


