ಉತ್ತರಪ್ರದೇಶದ ಮೀರತ್ನಲ್ಲಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬಾರ್ಡರ್ ರೋಡ್ಸ್ ಸಂಸ್ಥೆಯು ಡ್ರೋನ್ಗಳಿಗಾಗಿ ವಿಶೇಷ ರನ್ವೇ ನಿರ್ಮಿಸುತ್ತಿದೆ. 900 ಎಕರೆ ಪ್ರದೇಶದಲ್ಲಿ 406 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ವಾಯುನೆಲೆಯು, ಎಚ್ಎಎಲ್ಇ ಆರ್ಪಿಎ ಡ್ರೋನ್ಗಳ ಕಾರ್ಯಾಚರಣೆಗೆ ಮೀಸಲು
ನವದೆಹಲಿ (ಫೆ.15) ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ ಸೇರಿದಂತೆ ಜಗತ್ತಿನಾದ್ಯಂತ ನಡೆದ ಸಮರಗಳಲ್ಲಿ ಡ್ರೋನ್ಗಳು ನಿರ್ಣಾಯಕ ಪಾತ್ರ ವಹಿಸಿರುವ ಹೊತ್ತಿನಲ್ಲಿ, ಅವುಗಳಿಗಾಗಿ ಸಮರ್ಪಿತ ರನ್ವೇಅನ್ನು ಉತ್ತರಪ್ರದೇಶದ ಮೀರತ್ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್ಡರ್ ರೋಡ್ಸ್ ಸಂಸ್ಥೆ(ಬ್ರೋ), 900 ಎಕರೆ ಪ್ರದೇಶದಲ್ಲಿ, 15-20 ಕಿ.ಮೀ. ಎತ್ತರದಲ್ಲಿ ನಿರಂತರ 2 ದಿನ ಕಾರ್ಯಾಚರಿಸಬಲ್ಲ ಎಚ್ಎಎಲ್ಇ ಆರ್ಪಿಎ ಡ್ರೋನ್ಗಳಿಗಾಗಿ ವಾಯುನೆಲೆಯನ್ನು ನಿರ್ಮಿಸಲು ಮುಂದಾಗಿದೆ. 406 ಕೋಟಿ ರು. ಮೊತ್ತದ ಯೋಜನೆ ಇದಾಗಿದ್ದು, ಯೋಜನಾ ನಿರ್ವಹಣೆ ಸಲಹಾ ಸೇವೆಗಳಿಗಾಗಿ ಬಿಡ್ ಆಹ್ವಾನಿಸಿದೆ. ಹೇಗಿರಲಿದೆ?:
900 ಎಕರೆ ನೆಲೆಯ ಹೃದಯಭಾಗದಲ್ಲಿ 2,110 ಮೀ. ಉದ್ದ ಹಾಗೂ 45 ಮೀ. ಅಗಲದ ರನ್ವೇ ನಿರ್ಮಿಸಲಾಗುವುದು. ಇದು ಮೂಲತಃ ಡ್ರೋನ್ಗಳಿಗಾಗಿ ಇರುವುದಾದರೂ ಸಿ-295, ಸಿ-130ಯಂತಹ ಸಾರಿಗೆ ವಿಮಾನಗಳ ಬಳಕೆಗೂ ಸೂಕ್ತವಾಗಿರಲಿದೆ. ಕಡಿಮೆ ಗೋಚರತೆ ವೇಳೆ ಲ್ಯಾಂಡಿಂಗ್ ಮತ್ತು ಟೇಕ್ಆಫ್ಗೆ ಅನುಕೂಲವಾಗುವಂತೆ, ವಿಮಾನ ನಿಲ್ದಾಣಗಳ ರನ್ವೇನಲ್ಲಿರುವ ರೀತಿಯ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ವಿಮಾನಗಳ ನಿರ್ವಹಣೆ ಮತ್ತು ತ್ವರಿತ ನಿಯೋಜನೆಗಾಗಿ 60 ಮೀ. ಉದ್ದ ಮತ್ತು 50 ಮೀ. ಅಗಲದ 2 ಹ್ಯಾಂಗರ್ಗಳು ಇರಲಿವೆ. ಇಲ್ಲಿಂದ ಪ್ರತಿ ವರ್ಷ 1,500(ಸರಾಸರಿ ದಿನಕ್ಕೆ 4) ಡ್ರೋನ್ಗಳು ಹಾರಾಟ ನಡೆಸಲಿವೆ.
ಯಾವಾಗ ನಿರ್ಮಾಣ ಪೂರ್ಣ?:
ಈ ಯೋಜನೆ ಪೂರ್ಣಗೊಳ್ಳಲು ಸುಮಾರು 7 ವರ್ಷ(85 ತಿಂಗಳು) ತಗುಲಬಹುದು ಎಂದು ಅಂದಾಜಿಸಲಾಗಿದೆ. ಮೊದಲ 7 ತಿಂಗಳಲ್ಲಿ ವಾಯುನೆಲೆ ನಿರ್ಮಾಣಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಂಡು ಯೋಜನೆ, ನೀಲನಕ್ಷೆ ತಯಾರಿಸಲಾಗುತ್ತದೆ. ಮುಂದಿನ 18 ತಿಂಗಳಲ್ಲಿ ರನ್ವೇ ಮತ್ತು ಹ್ಯಾಂಗರ್ ನಿರ್ಮಾಣವಾಗುತ್ತದೆ. ನಂತರದ 24 ತಿಂಗಳಲ್ಲಿ, ದೋಷಗಳನ್ನೆಲ್ಲಾ ಸರಿಪಡಿಸಲಾಗುತ್ತದೆ. ಬಳಿಕದ 36 ತಿಂಗಳು ಅದರ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಮೇಲ್ವಿಚಾರಣೆ ನಡೆಸಲಾಗುತ್ತದೆ. ಅದಾದ ಬಳಿಕವೇ ಬಳಕೆಗೆ ಮುಕ್ತವಾಗುತ್ತದೆ. ಇದು ದೇಶದ ಭದ್ರತೆಯ ವಿಷಯವಾಗಿರುವುದರಿಂದ ಇಷ್ಟು ಸುದೀರ್ಘ ಪ್ರಕ್ರಿಯೆ ಅತ್ಯಗತ್ಯ.
ಮಹತ್ವವೇಕೆ?:
ಸದ್ಯದ ಸಮಯದಲ್ಲಿ ಡ್ರೋನ್ಗಳಿಗೆ ವಾಯುಪಡೆಯಲ್ಲಿ ಮಹತ್ವದ ಸ್ಥಾನವಿದೆ. ಕಾರಣ, ಇವುಗಳು ಸಿಂದೂರ ಸೇರಿದಂತೆ ಹಲವು ಸಂದರ್ಭಗಳಲ್ಲಿ ಶತ್ರುರಾಷ್ಟ್ರದೊಳಗೆ ನುಗ್ಗಿ, ನಿಖರ ದಾಳಿ ನಡೆಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಗಾತ್ರದಲ್ಲಿ ಯುದ್ಧವಿಮಾನಗಳಿಗಿಂತ ಡ್ರೋನ್ ಸಣ್ಣದಾಗಿರುವ ಕಾರಣ ಅವುಗಳ ತಯಾರಿಕೆಗೆ ತಗಲುವ ವೆಚ್ಚ ಕಡಿಮೆ. ಅಂತೆಯೇ ವೈರಿದೇಶದೊಳಗೆ ಕ್ಷಿಪಣಿಯಿರುವ ಡ್ರೋನ್ ಕಳಿಸಿದರೆ ಯೋದರು/ಪೈಟಲ್ಗಳು ಪ್ರಾಣ ಕಳೆದುಕೊಳ್ಳುವ ಅಪಾಯವೂ ಇರುವುದಿಲ್ಲ. ಅಂತೆಯೇ ಇವು ಕಡಿಮೆ ಎತ್ತರದಲ್ಲಿ ಹಾರುವ ಕಾರಣ ರಡಾರ್ಗಳ ಕಣ್ತಪ್ಪಿಸಲು ಸಕ್ಷಮವಾಗಿವೆ. ಹೀಗಿರುವಾಗ ಡ್ರೋನ್ಗಳಿಗೆ ಪೂರಕವಾದ ಮೂಲಸೌಕರ್ಯ ನಿರ್ಮಾಣ ಅತ್ಯಗತ್ಯ.



