ಪಹಲ್ಗಾಮ್ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ರಫೇಲ್ ಜೆಟ್‌ಗಳು, ಸ್ಕಾಲ್ಪ್ ಮತ್ತು ಹ್ಯಾಮರ್ ಕ್ಷಿಪಣಿಗಳನ್ನು ಬಳಸಲಾಯಿತು. 30ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಪಾಕಿಸ್ತಾನ ಭಾರತದ ಕೃತ್ಯವನ್ನು ಖಂಡಿಸಿ, ನಾಗರಿಕ ಸಾವುನೋವುಗಳಾಗಿವೆ ಎಂದು ಹೇಳಿದೆ. ಹಫೀಜ್ ಸಯೀದ್ ಮದರಸಾವನ್ನೂ ಗುರಿಯಾಗಿಸಲಾಯಿತು. ಗಡಿಯಲ್ಲಿ ಶೆಲ್ ದಾಳಿ ವಿನಿಮಯವೂ ನಡೆಯಿತು.
ನವದೆಹಲಿ (ಮೇ.7): ಏಪ್ರಿಲ್ 22 ರಂದು 26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು, ಐತಿಹಾಸಿಕ ತ್ರಿ-ಸೇನಾ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಬೆಳಗಿನ ಜಾವ 1:44 ಕ್ಕೆ ನಿಖರವಾದ ದಾಳಿಗಳನ್ನು ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಭಾರತ ಪಾಕಿಸ್ತಾನದ ಮೇಲಿನ ದಾಳಿಗೆ ಇದೇ ಮೊದಲ ಬಾರಿಗೆ ರಫೇಲ್ ಜೆಟ್‌ಅನ್ನು ಬಳಕೆ ಮಾಡಿತ್ತು. ಇದಕ್ಕೆ ಅತ್ಯಾಧುನಿಕ ಸ್ಕಾಲ್ಪ್ ಹಾಗೂ ಹಮ್ಮರ್ ಕ್ಷಿಪಣಿಗಳನ್ನು ಜೋಡಿಸಿತ್ತು ಎಂದು ಮೂಲಗಳು ತಿಳಿಸಿವೆ. ಭಾರತದ ದಾಳಿಯಲ್ಲಿ 30ಕ್ಕಿಂತ ಅಧಿಕ ಉಗ್ರರು ಸಾವು ಕಂಡಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಸಶಸ್ತ್ರ ಪಡೆಗಳು ಸ್ಕಲ್ಪ್ ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್ ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳನ್ನು ಹೊಂದಿದ ರಫೇಲ್ ಫೈಟರ್ ಜೆಟ್‌ಗಳನ್ನು ಬಳಸಿಕೊಂಡು ಪಾಕಿಸ್ತಾನದ ಪ್ರದೇಶದೊಳಗೆ ವೈಮಾನಿಕ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಗಡಿಯುದ್ದಕ್ಕೂ ಇರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪ್ರದೇಶದೊಳಗೆ ನಡೆಸಿದ ಒಂಬತ್ತು ನಿಖರ ದಾಳಿಗಳಲ್ಲಿ ಭಾರತೀಯ ನೌಕಾಪಡೆಯ ಸ್ವತ್ತುಗಳು ಸಹ ಭಾಗಿಯಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಪಾಕಿಸ್ತಾನ, ಅಪ್ರಚೋದಿತ ಮತ್ತು ಸ್ಪಷ್ಟವಾದ ಯುದ್ಧ ಕೃತ್ಯದಲ್ಲಿ, ಭಾರತೀಯ ವಾಯುಪಡೆಯು ಭಾರತದ ವಾಯುಪ್ರದೇಶದಲ್ಲಿಯೇ ಉಳಿದುಕೊಂಡು, ಮುರಿಡ್ಕೆ ಮತ್ತು ಬಹಾವಲ್ಪುರದಲ್ಲಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಮತ್ತು ಕೋಟ್ಲಿ ಮತ್ತು ಮುಜಫರಾಬಾದ್, ಆಜಾದ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ನಾಗರಿಕರನ್ನು ಗುರಿಯಾಗಿಸಿಕೊಂಡು, ಸ್ಟ್ಯಾಂಡ್‌ಆಫ್ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪಾಕಿಸ್ತಾನದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ. ಭಾರತದ ಆಕ್ರಮಣಕಾರಿ ಕೃತ್ಯವು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಸಾವಿಗೆ ಕಾರಣವಾಗಿದೆ. ಈ ಆಕ್ರಮಣಕಾರಿ ಕೃತ್ಯವು ವಾಣಿಜ್ಯ ವಾಯು ಸಂಚಾರಕ್ಕೂ ಗಂಭೀರ ಬೆದರಿಕೆಯನ್ನುಂಟುಮಾಡಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿಕೆ ನೀಡಿದ್ದಾರೆ.
ಹಫೀಜ್ ಸಯೀದ್ ಮದರಸಾದ ಮೇಲೆ ದಾಳಿ: ಭಾರತ ಇಡೀ ಉಗ್ರರ ಗುರು ಹಫೀಜ್ ಸೈಯದ್ ಮದರಸಾ ಮೇಲೂ ದಾಳಿ ಮಾಡಿದೆ. ಮುರೀದ್ಕೆ ನಲ್ಲಿರುವ ಹಫೀಜ್ ಸೈಯದ್ ಮದರಸಾ ಸಂಪೂರ್ಣವಾಗಿ ಹಾನಿಗೀಡಾಗಿದೆ. ಇದು ಲಷ್ಕರ್ ಇ ತಯ್ಯಬಾ ಉಗ್ರ ಸಂಘಟನೆಯ ಚಟುವಟಿಕೆ ಗಳ ಕೇಂದ್ರ ಸ್ಥಾನವಾಗಿತ್ತು.
ಎಲ್‌ಓಸಿಯಲ್ಲಿ ಶೆಲ್ ದಾಳಿ: ಭಾರತದಿಂದ ಕ್ಷಿಪಣಿ ದಾಳಿ ಆರಂಭವಾದ ಬೆನ್ನಲ್ಲಿಯೇ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಹಾಗೂ ಭಾರತದ ಸೇನೆಗಳ ನಡುವೆ ಆರ್ಟಿಲರಿ ದಾಳಿ ನಡೆದಿದೆ. ಪಾಕ್ ನಿಂದ ನಿರಂತರವಾದ ಶೆಲ್ ದಾಳಿಗೆ ಭಾರತೀಯ ಸೇನೆ ಕೂಡ ಅದೇ ರೀತಿಯಲ್ಲಿ ಉತ್ತರ ನೀಡಿದೆ.


