ನಾಸಿಕ್‌ನ ಟಿಸಿಎಸ್ ನಂತರ, ಪುಣೆಯ ಇನ್ಫೋಸಿಸ್ ಕಚೇರಿಯಲ್ಲೂ 'ಕಾರ್ಪೊರೇಟ್ ಜಿಹಾದ್' ಆರೋಪಗಳು ಕೇಳಿಬಂದಿವೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್, ಕಿರುಕುಳದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿರುವುದಾಗಿ ಸ್ಪಷ್ಟಪಡಿಸಿದೆ.
ಪುಣೆ (ಏ.20): ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ವರ್ಷಗಳಿಂದ ನಡೆದಿದ್ದ ಕಾರ್ಪೊರೆಟ್ ಜಿಹಾದ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಪುಣೆಯಲ್ಲಿರುವ ಇನ್ಫೋಸಿಸ್‌ನ ಕಚೇರಿಯಲ್ಲೂ ಇಂತಹ ಘಟನೆಗಳು ನಡೆದಿವೆ ಎಂಬ ಆರೋಪಗಳು ಮುನ್ನೆಲೆಗೆ ಬಂದಿವೆ. ಇಂತಹ ಆರೋಪವಿದ್ದ ಒಂದು ಪೋಸ್ಟ್‌ಗೆ ಮಹಾರಾಷ್ಟ್ರದ ಬಿಜೆಪಿ ನಾಯಕ ನಿತೀಶ್ ರಾಣೆ, ‘ಗುರುತಿಸಿಕೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಇನ್ಫೋಸಿಸ್, ‘ಯಾವುದೇ ರೀತಿಯ ಕಿರುಕುಳ, ತಾರತಮ್ಯದ ವಿರುದ್ಧ ನಮ್ಮ ಕಂಪನಿ ಶೂನ್ಯ ಸಹಿಷ್ಣುವಾಗಿದೆ. ಉದ್ಯೋಗಿಗಳಿಗೆ ಎಲ್ಲರನ್ನು ಒಳಗೊಂಡ, ಸುರಕ್ಷಿತ, ಸಕಾರಾತ್ಮಕ ಮತ್ತು ಗೌರವಯುತ ವಾತಾವರಣವನ್ನು ಖಚಿತಪಡಿಸಲು ಶ್ರಮಿಸುತ್ತದೆ’ ಎಂದು ಸ್ಪಷ್ಟನೆ ನೀಡಿದೆ.
ಟಿಸಿಎಸ್‌ನಂತೆ ಆಕ್ಸಿಸ್‌ನಲ್ಲೂ ಕಿರುಕುಳ: ಮಹಾ ಸಿಎಂ ಪತ್ನಿ
ಮುಂಬೈ: ಮಹಾರಾಷ್ಟ್ರದ ನಾಸಿಕ್ ಟಿಸಿಎಸ್ ಬಿಪಿಒ ಕಚೇರಿಯಲ್ಲಿ ನಡೆದ ಕಾರ್ಪೋರೆಟ್ ಜಿಹಾದ್ ರೀತಿಯ ಘಟನೆ ಈ ಹಿಂದೆ ತಾವು ಕೆಲಸ ಮಾಡುತ್ತಿದ್ದ ಆ್ಯಕ್ಸಿಸ್ ಬ್ಯಾಂಕ್‌ನಲ್ಲೂ ನಡೆದಿತ್ತು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರ ಪತ್ನಿ ಅಮೃತಾ ಹೇಳಿದ್ದಾರೆ. ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ತಾನು ಆಕ್ಸಿಸ್ ಬ್ಯಾಂಕಿನ ಉಪಾಧ್ಯಕ್ಷೆಯಾಗಿದ್ದಾಗ ಪುರುಷ ನೌಕರರು ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಆ ಬಳಿಕ ವಿಷಯವನ್ನು ಇತ್ಯರ್ಥಪಡಿಸಲಾಯಿತು. ಆಡಳಿತ ಮಂಡಳಿಯ ಹಿರಿಯರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರು’ ಎಂದು ಹೇಳಿದರು. ಅಮೃತಾ ಆಕ್ಸಿಸ್ ಬ್ಯಾಂಕ್‌ನಲ್ಲಿ ಸುಮಾರು 23 ವರ್ಷ ಕೆಲಸ ಮಾಡಿದ್ದರು.


