ಇಸ್ರೇಲ್‌ ಮತ್ತು ಇರಾನ್‌ ನಡುವಿನ 12 ದಿನಗಳ ಸಂಘರ್ಷಕ್ಕೆ ಕದನ ವಿರಾಮ ಘೋಷಣೆಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ನಡೆದಿದ್ದು, ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ನಂತರ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಟೆಹ್ರಾನ್‌/ಟೆಲ್ ಅವಿವ್‌: ಮಧ್ಯಪ್ರಾಚ್ಯದಲ್ಲಿ ಭಾರೀ ವಿನಾಶದ ಆತಂಕ ಮೂಡಿಸಿದ್ದ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷಕ್ಕೆ ಮಂಗಳವಾರ ತೆರೆ ಬಿದ್ದಿದೆ. ಈ ಮುಂಚೆ ಭಾರತ-ಪಾಕ್‌ ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮದೇ ಮಧ್ಯಸ್ಥಿಕೆಯಲ್ಲಿ ಇರಾನ್‌-ಇಸ್ರೇಲ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ, ಆದರೆ ವಾಸ್ತವವಾಗಿ ಕತಾರ್‌ ಕೂಡ ಮಧ್ಯಸ್ಥಿಕೆ ವಹಿಸಿ ಕದನವಿರಾಮ ಜಾರಿಗೆ ಶ್ರಮಿಸಿದ್ದಾಗಿ ಗೊತ್ತಾಗಿದೆ. ಈ ಮೂಲಕ 12 ದಿನಗಳಿಂದ ನಡೆಯುತ್ತಿದ್ದ ಸಮರಕ್ಕೆ ಕೊನೆ ಬಿದ್ದಂತಾಗಿದೆ.

ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕದನ ವಿರಾಮದ ಸುದ್ದಿ ಘೋಷಿಸಿದ ಬೆನ್ನಲ್ಲೇ ಮೂರು ಗಂಟೆಗಳ ಬಳಿಕ ಇರಾನ್‌ ನಡೆಸಿದ ಸರಣಿ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ನಾಲ್ವರು ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡರು. ಇದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತಾದರೂ ನಂತರ ಇರಾನ್‌ ಕೂಡ ಅಧಿಕೃತವಾಗಿ ಕದನ ವಿರಾಮ ಘೋಷಿಸಿತು. ಜತೆಗೆ, ಇನ್ನು ಮುಂದೆ ಇಸ್ರೇಲ್‌ ದಾಳಿ ನಡೆಸಿದರೆ ಪ್ರತಿ ದಾಳಿ ನಡೆಸುವುದಾಗಿಯೂ ಎಚ್ಚರಿಸಿತು.

ಟ್ರಂಪ್ ‘ಮಧ್ಯಸ್ಥಿಕೆ’ಯ 2ನೇ ಕದನವಿರಾಮ:

ಭಾನುವಾರವಷ್ಟೇ ಅಮೆರಿಕವು ಇರಾನ್‌ನ 3 ಪರಮಾಣು ಕೇಂದ್ರಗಳ ಮೇಲೆ ಭಾರೀ ಬಾಂಬ್‌ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ರಾತ್ರಿಯಷ್ಟೇ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದ ಅಮೆರಿಕ ಪ್ರತಿದಾಳಿ ನಡೆಸುವ ಆತಂಕ ವ್ಯಕ್ತವಾಗಿತ್ತಾದರೂ ಮಂಗಳವಾರ ಮುಂಜಾನೆ ಹೊತ್ತಿಗೆ ಡೊನಾಲ್ಡ್ ಟ್ರಂಪ್‌ ಅವರೇ ಕದನ ವಿರಾಮದ ವಿಚಾರ ಅಧಿಕೃತವಾಗಿ ಸಾಮಾಜಿಕ ಜಾಲತಾಣ ಮೂಲಕ ಘೋಷಿಸಿದರು. ಭಾರತ-ಪಾಕ್‌ ಯುದ್ಧದ ಬಳಿಕ ಟ್ರಂಪ್‌ ಘೋಷಿಸುತ್ತಿರುವ ಎರಡನೇ ಕದನ ವಿರಾಮ ಇದಾಗಿತ್ತು.

20 ಕ್ಷಿಪಣಿ ಹಾರಿಸಿದ ಇರಾನ್‌, ಗೊಂದಲ:

ಟ್ರಂಪ್‌ ಕದನ ವಿರಾಮ ಘೋಷಿಸಿದರೂ ಇರಾನ್‌ ವಿದೇಶಾಂಗ ಸಚಿವ ಸೈಯದ್‌ ಅಬ್ಬಾಸ್‌ ಅವರು ಅಂಥ ಯಾವುದೇ ಒಪ್ಪಂದ ಆಗಿಲ್ಲ ಎಂದು ಹೇಳುವ ಮೂಲಕ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ನಡುವೆ, ಇಸ್ರೇಲ್‌ ಮೇಲೆ 20 ಕ್ಷಿಪಣಿಗಳನ್ನು ಬಳಸಿ ಇರಾನ್‌ ದಾಳಿ ಕೂಡ ಮಾಡಿತು. ಇದರಿಂದ ಇಸ್ರೇಲ್‌ನ ಬೀರ್ಶೇಬಾ ನಗರದಲ್ಲಿ ಮೂರು ಕಟ್ಟಡಗಳಿಗೆ ಹಾನಿಯಾಗಿ, ನಾಲ್ವರು ನಾಗರಿಕರು ಸಾವಿಗೀಡಾದರು. ಆ ಬಳಿಕ ಇರಾನ್‌ ಸರ್ಕಾರ ಅಧಿಕೃತವಾಗಿ ಕದನ ವಿರಾಮ ಘೋಷಿಸಿದ ಬಳಿಕ ದಾಳಿ ಕೈಬಿಡಲಾಯಿತು.

ಸಾವಿರಕ್ಕೂ ಹೆಚ್ಚು ಮಂದಿ ಸಾವು:

ಈ ಹನ್ನೆರಡು ದಿನಗಳ ಯುದ್ಧದಲ್ಲಿ ಇಸ್ರೇಲ್‌ನಲ್ಲಿ 28 ಮಂದಿ ಸಾವಿಗೀಡಾಗಿದ್ದರೆ, 1 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ಇರಾನ್‌ನಲ್ಲಿ 974 ಮಂದಿ ಸಾವಿಗೀಡಾಗಿ, 3458 ಮಂದಿ ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್‌ ಮೂಲದ ನಾಗರಿಕ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.

ಭಿಕ್ಷೆ ಬೇಡಿದ್ರು ಟ್ರಂಪ್‌- ಇರಾನ್ ಟೀವಿ ವರದಿ:

ಇಸ್ರೇಲ್‌ ಮತ್ತು ಇರಾನ್‌ ಎರಡೂ ದೇಶಗಳು ಏಕಕಾಲದಲ್ಲಿ ಶಾಂತಿಯ ಪ್ರಸ್ತಾಪ ಇಟ್ಟರು. ಹೀಗಾಗಿ ಕದನ ವಿರಾಮ ಘೋಷಿಸಲಾಯಿತು ಎಂದು ಟ್ರಂಪ್‌ ಹೇಳಿಕೊಂಡರೆ, ಇರಾನ್‌ನ ಸರ್ಕಾರಿ ಸುದ್ದಿವಾಹಿನಿ ಮಾತ್ರ, ಟ್ರಂಪ್‌ ಅವರೇ ಕದನ ವಿರಾಮಕ್ಕಾಗಿ ಭಿಕ್ಷೆ ಬೇಡಿದರು ಎಂದು ತಿಳಿಸಿದೆ. ಈ ನಡುವೆ, ಕದನ ವಿರಾಮದಲ್ಲಿ ಕತಾರ್‌ ಮಹತ್ವದ ಪಾತ್ರವಹಿಸಿದ್ದಾಗಿ ಮೂಲಗಳು ತಿಳಿಸಿವೆ.

ಅಮೆರಿಕ ದಾಳಿ ನಿರೀಕ್ಷಿಸಬೇಡಿ

ಮುಂದೆ ಅಮೆರಿಕ ಈ ರೀತಿಯ ದಾಳಿಗಳನ್ನು ಮಾಡಲಿದೆ ಎಂದು ನೀವು (ನೆತನ್ಯಾಹು) ನಿರೀಕ್ಷಿಸಬೇಡಿ. ಅಮೆರಿಕಕ್ಕೆ ಅಡ್ಡಿಯಾಗಿದ್ದ ತೊಡಕುಗಳನ್ನುನಾವು ನಾಶ ಮಾಡಿದ್ದೇವೆ. ಇನ್ನೇನಿದ್ದರು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ.

- ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ