ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್ಗೆ ಇವರ ಕಾರು ಡಿಕ್ಕಿ ಹೊಡೆದಿದೆ.
ಛತ್ರಪತಿ ಸಂಭಾಜಿನಗರ (ಏ.17): ಮಹಾರಾಷ್ಟ್ರದಾದ್ಯಂತ ಸದ್ಯ ಚರ್ಚೆಯಲ್ಲಿರುವ ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಅಶೋಕ್ ಖರಾತನ ಅತ್ಯಂತ ಆಪ್ತ ಸಹಚರ ಹಾಗೂ ಶಿವಾನಿಕಾ ಟ್ರಸ್ಟ್ನ ನಿರ್ದೇಶಕ ಮತ್ತು ಉಪಾಧ್ಯಕ್ಷರಾಗಿದ್ದ ಜಿತೇಂದ್ರ ಶೆಲ್ಕೆ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಇದು ಕೇವಲ ಅಪಘಾತವಲ್ಲ, ಸಾಕ್ಷ್ಯ ನಾಶಪಡಿಸಲು ಮಾಡಿದ ಸಂಚು ಎಂಬ ಸಂಶಯ ವ್ಯಕ್ತವಾಗಿದೆ.
ಛತ್ರಪತಿ ಸಂಭಾಜಿನಗರದಿಂದ ಶಿರಡಿಗೆ ಹೋಗುವ ರಸ್ತೆಯ 'ಧೋತ್ರೆ' ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಜಿತೇಂದ್ರ ಶೆಲ್ಕೆ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮಗನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಕಾರು ನಿಂತಿದ್ದ ಕಂಟೇನರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಜಿತೇಂದ್ರ ಶೆಲ್ಕೆಯವರನ್ನು ಸಾಯಿಸಲಾಗಿದೆ: ತೃಪ್ತಿ ದೇಸಾಯಿ ಗಂಭೀರ ಆರೋಪ
ಈ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ, "ಶೆಲ್ಕೆ ಅವರ ಸಾವು ಅತ್ಯಂತ ಶಂಕಾಸ್ಪದವಾಗಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ಮುಗಿಸುವ ಸಂಚು ರೂಪಿಸಲಾಗಿದೆ. ಮಾರ್ಚ್ 17 ರಂದು ಖರಾತ್ ವಿರುದ್ಧ ಪ್ರಕರಣ ದಾಖಲಾಗಿತ್ತು, ಇಂದು ಸರಿಯಾಗಿ ಒಂದು ತಿಂಗಳು ಪೂರೈಸುವಷ್ಟರಲ್ಲಿ ಶೆಲ್ಕೆ ಸಾವನ್ನಪ್ಪಿದ್ದಾರೆ. ಉಪಾಧ್ಯಕ್ಷರಾಗಿ ಟ್ರಸ್ಟ್ನ ಒಳಗಿನ ಎಲ್ಲಾ ವಿಚಾರಗಳು ಅವರಿಗೆ ತಿಳಿದಿತ್ತು. ಈ ಪ್ರಕರಣದಲ್ಲಿ ಇನ್ನೂ ಅನೇಕ ಸಾಕ್ಷಿಗಳಿದ್ದು, ಪೊಲೀಸರು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಈ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. 'ಇವರ ಕಾರು ಹೋಗಿ ಕಂಟೇನರ್ಗೆ ಡಿಕ್ಕಿ ಹೊಡೆದಿದೆಯೇ ಅಥವಾ ಕಂಟೇನರ್ ರಿವರ್ಸ್ ಬಂದು ಇವರಿಗೆ ಗುದ್ದಿದೆಯೇ? ಎಂಬುದು ತನಿಖೆಯಾಗಬೇಕು. ಶಿವಾನಿಕಾ ಸಂಸ್ಥೆಯಲ್ಲಿ ಏನು ನಡೆಯುತ್ತಿತ್ತು ಎಂಬ ಪೂರ್ಣ ಮಾಹಿತಿ ಶೆಲ್ಕೆ ಅವರಿಗಿತ್ತು. ಸಂಸ್ಥೆಯಲ್ಲಿ ಅವರು ಖರಾತ್ ಪತ್ನಿಗಿಂತಲೂ ಉನ್ನತ ಹುದ್ದೆಯಲ್ಲಿದ್ದರು. ಅಪಘಾತವಾದ ತಕ್ಷಣ ಕಂಟೇನರ್ ಚಾಲಕ ಮತ್ತು ಕ್ಲೀನರ್ ನಾಪತ್ತೆಯಾಗಿದ್ದು ಏಕೆ? ಶೆಲ್ಕೆ ಅವರೇ ಬಂದು ಡಿಕ್ಕಿ ಹೊಡೆದಿದ್ದರೆ ಇವರು ಓಡಿಹೋಗುವ ಅಗತ್ಯವಿರಲಿಲ್ಲ. ಇದು ಸಂಚು ಎಂಬ ಸಂಶಯವನ್ನು ದಟ್ಟವಾಗಿಸಿದೆ' ಎಂದು ಹೇಳಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ
ಧೋತ್ರೆ ಗ್ರಾಮದ ಸರ್ಪಂಚ್ ಪ್ರದೀಪ್ ಚೌಹಾಣ್ ಮಾತನಾಡಿ, "ಮಧ್ಯಾಹ್ನ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಗ್ರಾಮಸ್ಥರು ಫೋನ್ ಮಾಡಿದ ತಕ್ಷಣ ನಾವು ಸ್ಥಳಕ್ಕೆ ಬಂದೆವು. ಮಹಿಳೆಯೊಬ್ಬರು (ಶೆಲ್ಕೆ ಪತ್ನಿ) ನೋವಿನಿಂದ ಕಿರುಚುತ್ತಿದ್ದರು. ಮಗನನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕಳುಹಿಸಿದೆವು. ಕಂಟೇನರ್ ಒಳಗೆ ಕಾರು ನುಗ್ಗಿತ್ತು. ಕ್ರೇನ್ ಬರುವುದು ತಡವಾದ ಕಾರಣ ಮಹಿಳೆಯನ್ನು ಬೇಗ ಹೊರತೆಗೆಯಲು ಸಾಧ್ಯವಾಗಲಿಲ್ಲ, ಅವರು ಸ್ಥಳದಲ್ಲೇ ಮೃತಪಟ್ಟರು" ಎಂದು ವಿವರಿಸಿದ್ದಾರೆ.


