ಅನುಮಾನಾಸ್ಪದ ರೀತಿಯಲ್ಲಿ ವಿದೇಶಿ ವಿದ್ಯಾರ್ಥಿಯೋರ್ವ ಸಾವಿಗೀಡಾಗಿದ್ದು, ಸಾವಿಗೂ ಮೊದಲು ಆತ ಮಹಿಳೆಯೊಬ್ಬಳ ಜೊತೆ ವಾಗ್ವಾದ ನಡೆಸಿದ್ದಾನೆ ಎಂದು ನೋಡುಗರು ಹೇಳಿದ್ದು, ಆತನ ಸಾವಿನ ಬಗ್ಗೆ ಈಗ ಅನುಮಾನ ಮೂಡಿದೆ. ಈತನ ಬಗ್ಗೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ರಾಯ್‌ಪುರ: ಅನುಮಾನಾಸ್ಪದ ರೀತಿಯಲ್ಲಿ ವಿದೇಶಿ ವಿದ್ಯಾರ್ಥಿಯೋರ್ವ ಸಾವಿಗೀಡಾಗಿದ್ದು, ಸಾವಿಗೂ ಮೊದಲು ಆತ ಮಹಿಳೆಯೊಬ್ಬಳ ಜೊತೆ ವಾಗ್ವಾದ ನಡೆಸಿದ್ದಾನೆ ಎಂದು ನೋಡುಗರು ಹೇಳಿದ್ದು, ಆತನ ಸಾವಿನ ಬಗ್ಗೆ ಈಗ ಅನುಮಾನ ಮೂಡಿದೆ. ಆ ಮಹಿಳೆಯೂ ಕೂಡ ವಿದೇಶಿ ಪ್ರಜೆಯೇ ಆಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಹಲವು ವ್ಯಕ್ತಿಗಳನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 28 ವರ್ಷದ ಸ್ಯಾಮ್ ಪೌರ್ ಜುಡಯ್ ಮೃತ ವಿದ್ಯಾರ್ಥಿ. ಈತ ಛತ್ತೀಸ್‌ಗಢದ ರಾಯ್‌ಪುರದ ನವ ರಾಯ್‌ಪುರದ ಕಳಿಂಗ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಈತ ಪಶ್ಚಿಮ ಆಫ್ರಿಕಾದ ಲೈಬೀರಿಯಾದ ನಿವಾಸಿಯಾಗಿದ್ದಾನೆ.

ಸೋಮವಾರ ಸಂಜೆ 7 ಗಂಟೆ ಸುಮಾರಿಗೆ 28 ವರ್ಷದ ವಿದ್ಯಾರ್ಥಿ ಸ್ಯಾಮ್ ಪೌರ್ ಜುಡಯ್ ಎಂಬಾತ 4 ಮಹಡಿಗಳ ವಸತಿ ಕಟ್ಟಡದ ಅಂಗಣದಲ್ಲಿ ಮೇಲಿನಿಂದ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ವಸತಿ ಸಂಕೀರ್ಣವೂ ಮಂದಿರ್ ಹಸೌದ್ ಪೊಲೀಸ್ ಸ್ಟೇಷನ್ ಪ್ರದೇಶದಲ್ಲಿ ಇದ್ದು, ಇಲ್ಲೇ ಈತ ವಾಸ ಮಾಡುತ್ತಿದ್ದ. ಈತನನ್ನು ಕೂಡಲೇ ಜೊತೆಗಿದ್ದ ವಿದ್ಯಾರ್ಥಿಗಳು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಂದ ಆತನನ್ನು ನವರಾಯ್‌ಪುರದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಅಲ್ಲಿಂದ ಬಿಆರ್ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ತಲುಪಿದ ಕೆಲವೇ ಸಮಯದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ. ಈ ಬಗ್ಗೆ ನಂತರ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಗೂ ಮುನ್ನ ಸ್ಯಾಮ್ ವಿದೇಶಿ ಪ್ರಜೆಯಾಗಿದ್ದ ಮಹಿಳೆಯೊಂದಿಗೆ ಜಗಳವಾಡಿದ್ದ. ಈ ವೇಳೆ ಆ ಮಹಿಳೆ ತನ್ನ ಗೆಳೆಯನನ್ನು ಸ್ಥಳಕ್ಕೆ ಕರೆಸಿ, ಸ್ಯಾಮ್ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಳು. ಈ ಸಮಯದಲ್ಲಿ ಸ್ಥಳದಲ್ಲಿದ್ದ ಇತರ ಯುವಕರನ್ನು ನೋಡಿ, ಸ್ಯಾಮ್ ಭಯಭೀತನಾಗಿ ಕಟ್ಟಡದ ಮೇಲಿರುವ ತನ್ನ ನಿವಾಸದ ಕಡೆಗೆ ಓಡಿದ್ದಾನೆ. ನಂತರ ಅವನು ನಾಲ್ಕನೇ ಮಹಡಿಯಿಂದ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಘಟನೆ ನಡೆದ ವೇಳೆ ಅಲ್ಲಿದ್ದವರು ಹೇಳಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: ಲಕ್ಸುರಿ ಕಾರುಗಳು, 1 ಕೇಜಿ ಚಿನ್ನ 100 ಕೋಟಿ ಆಸ್ತಿ: ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ

ಆತ ಮೇಲಿನಿಂದ ಬೀಳುವ ಮೊದಲು ಯಾರಾದರು ಆತನನ್ನು ಕೆಳಕ್ಕೆ ತಳ್ಳಿದ್ದಾರೆಯೇ ಅಥವಾ ಹಲ್ಲೆ ಮಾಡಿದ್ದಾರೆಯೇ ಎಂದು ಪೊಲೀಸರು ಅಲ್ಲಿದ್ದವರನ್ನು ವಿಚಾರಿಸಿದ್ದಾರೆ. ಆದರೆ ಈ ರೀತಿ ಆಗಿದ್ದನ್ನು ತಾವು ನೋಡಿಲ್ಲ ಎಂದು ಅಲ್ಲಿದ್ದವರು ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಘಟನೆಯ ನಂತರ ಮೃತ ವಿದ್ಯಾರ್ಥಿಯ ಸ್ನೇಹಿತರು ತಮ್ಮ ಮೇಲೆ ಹಲ್ಲೆ ನಡೆಸಬಹುದು ಎಂದು ಭಯಗೊಂಡ ಆ ಮಹಿಳೆ ಹಾಗೂ ಆಕೆಯ ಗೆಳೆಯ ಸಮೀಪದ ದುರ್ಗ್ ಜಿಲ್ಲೆಯ ಬಿಲಾಲಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ನಂತರ ಅವರನ್ನು ಅಲ್ಲಿಂದ ಪೊಲೀಸರು ಮಂದಿರ್ ಹಸೌದ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಜೀವ ನೀಡಿದವಳೇ ಉಸಿರು ತೆಗೆದಳು: ಅಡ್ಡದಾರಿ ಹಿಡಿದ ತಾಯಿ: ಬುದ್ದಿ ಹೇಳಿದ 16ರ ಹರೆಯದ ಮಗಳ ಕೊಲೆ

ಮಹಿಳೆ ಹಾಗೂ ಆಕೆಯ ಬಾಯ್‌ಫ್ರೆಂಡ್‌ನನ್ನು ವಿಚಾರಣೆ ನಡೆಸಲಾಗಿದ್ದು, ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಯ್‌ಪುರ ಹೆಚ್ಚುವರಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಲಖನ್ ಪಟ್ಲೆ ಮಾತನಾಡಿ, ಘಟನೆಗಳ ಬಗ್ಗೆ ನಿಖರವಾದ ಸಂದರ್ಭವನ್ನು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಎಲ್ಲಾ ಸಂಭಾವ್ಯ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಹಲವಾರು ವ್ಯಕ್ತಿಗಳನ್ನು ಪ್ರಶ್ನಿಸಲಾಗುತ್ತಿದೆ ಮತ್ತು ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.