ಉತ್ತರ ಕಾಶ್ಮೀರದ ಹಂದ್ವಾರಾದಲ್ಲಿ, ಆಕಿಬ್ ರಸೂಲ್ ಎಂಬ ಮುಸ್ಲಿಂ ಯುವಕನಿಗೆ ತನ್ನ ತೋಟದಲ್ಲಿ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ. ಅದನ್ನು ನೋಡಿದಾಕ್ಷಣ ಇದು ಹಿಂದೂಗಳ ಆರಾಧ್ಯ ದೈವ ಶಿವಲಿಂಗ ಮೂರ್ತಿಉ ಎಂಬುದು ತಿಳಿದುಬಂದಿದೆ. ನಂತರ ಆತನ ಕೈಯಿಂದಲೇ ಒಂದು ಚಮಾತ್ಕಾರದ ಘಟನೆ ನಡೆದಿದೆ.

ಜಮ್ಮು-ಕಾಶ್ಮೀರ (ಅ.06): ಕಾಶ್ಮೀರವು ಶತಮಾನಗಳಿಂದಲೂ ಶಿವನ ಆರಾಧನೆ ಮತ್ತು ಶೈವ ತತ್ವಜ್ಞಾನದ ಕೇಂದ್ರವಾಗಿದೆ. ಈ ಶಿವನ ನಾಡಿನಲ್ಲಿ, ಕೋಮು ಸೌಹಾರ್ದತೆಯನ್ನು ಎತ್ತಿಹಿಡಿಯುವ ಒಂದು ಮಹತ್ವದ ಘಟನೆ ನಡೆದಿದೆ. ಉತ್ತರ ಕಾಶ್ಮೀರ ಕಣಿವೆಯ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ, ತಮ್ಮ ತೋಟದ ಭೂಮಿಯನ್ನು ಉಳುಮೆ ಮಾಡುತ್ತಿದ್ದ ಯುವ ಕಾಶ್ಮೀರಿ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಾಚೀನ ಶಿಲಾ ಶಿವಲಿಂಗವನ್ನು ಪತ್ತೆಹಚ್ಚಿ, ಅದನ್ನು ಪುರಾತತ್ವ ಇಲಾಖೆಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

ಧಾರ್ಮಿಕ ಸಂವೇದನೆಯನ್ನು ಮೆರೆದ ಆಕಿಬ್ ರಸೂಲ್:

ಹಂದ್ವಾರಾದ ತುರ್ಕಾಪೋರಾ ಗ್ರಾಮದ ನಿವಾಸಿ ಆಕಿಬ್ ರಸೂಲ್ ಅವರು ತಮ್ಮ ತೋಟಗಾರಿಕೆ ಜಮೀನನ್ನು ಉಳುವಾಗ ಈ ಸೂಕ್ಷ್ಮ ಕೆತ್ತನೆಯ ಅಪೂರ್ವ ಶಿವಲಿಂಗ ಪತ್ತೆಯಾಗಿದೆ. ಈ ಪ್ರಾಚೀನ ಕಲಾಕೃತಿಯ ಧಾರ್ಮಿಕ ಮಹತ್ವವನ್ನು ಅರಿತ ಆಕಿಬ್ ರಸೂಲ್ ಅವರು, ವೈಯಕ್ತಿಕ ಲಾಭ ಅಥವಾ ವಿವಾದಕ್ಕೆ ಎಡೆಮಾಡಿಕೊಡದೆ, ತಕ್ಷಣವೇ ಜಮ್ಮು ಮತ್ತು ಕಾಶ್ಮೀರದ ದಾಖಲೆಗಳು, ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದರು. ಈ ಮೂಲಕ ಎಷ್ಟೇ ಕೋಮು ದ್ವೇಷದ ಭಾವನೆ ಇದ್ದರೂ ಮುಸ್ಲಿಂ ವ್ಯಕ್ತಿಗೆ ಇದನ್ನು ಸಂರಕ್ಷಣೆ ಮಾಡಬೇಕು ಎಂಬ ಮನೋಭಾವನೆ ಬಂದಿರುವುದೇ ಒಂದು ದೊಡ್ಡ ಚಮಾತ್ಕಾರವಾಗಿದೆ.

ಪುರಾತತ್ವ ಇಲಾಖೆಯ ನಿರ್ದೇಶಕರಾದ ಕುಲದೀಪ್ ಕೃಷ್ಣ ಸಿಧಾ (JKAS) ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಒಂದು ತಂಡವನ್ನು ಹಂದ್ವಾರಾಕ್ಕೆ ಕಳುಹಿಸಿಕೊಟ್ಟರು. ಜಿಲ್ಲಾಡಳಿತ ಮತ್ತು ಪೊಲೀಸರ ಸಹಯೋಗದೊಂದಿಗೆ, ಪ್ರಾಚೀನ ಶಿವಲಿಂಗವನ್ನು ಇಲಾಖೆ ವಶಕ್ಕೆ ಪಡೆಯಿತು. ಈ ಶಿವಲಿಂಗದ ಯುಗ ಮತ್ತು ಇತರೆ ವೈಶಿಷ್ಟ್ಯಗಳನ್ನು ಪರಿಶೀಲಿಸಿದ ಬಳಿಕ, ಅದನ್ನು ಶ್ರೀನಗರದ ಎಸ್‌ಪಿಎಸ್ ವಸ್ತುಸಂಗ್ರಹಾಲಯದಲ್ಲಿ (SPS Museum) ಸಂರಕ್ಷಿಸಿ ಪ್ರದರ್ಶನಕ್ಕಿಡಲಾಗುವುದು ಎಂದು ಇಲಾಖೆ ತಿಳಿಸಿದೆ. ಆಕಿಬ್ ರಸೂಲ್ ಅವರ ಈ ಜವಾಬ್ದಾರಿಯುತ ಕಾರ್ಯವನ್ನು ಇಲಾಖೆ ಮುಕ್ತಕಂಠದಿಂದ ಶ್ಲಾಘಿಸಿದೆ ಮತ್ತು ಸದ್ಯದಲ್ಲೇ ಅವರನ್ನು ಸನ್ಮಾನಿಸಲಾಗುವುದು ಎಂದು ಘೋಷಿಸಿದೆ ಎಂದು ಎಕ್ಸ್‌ನಲ್ಲಿ ವಕೀಲ ಜಾವೇದ್ ಬೇಗ್ ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Scroll to load tweet…

ಲಂಕಾದಿಂದ ಕಾಶ್ಮೀರದವರೆಗೂ ಶಿವನ ಮಹಿಮೆ:

ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ಮತ್ತೊಬ್ಬ ನೆಟ್ಟಿಗ ಅಶ್ಮನಿ ಕುಮಾರ್ ಅವರು, ಲಂಕೆಯಿಂದ ಕಾಶ್ಮೀರದವರೆಗೆ ಶಿವನ ಮಹಿಮೆ ಎಂದು ಹೇಳಿದ್ದಾರೆ. ಇಡೀ ಭಾರತದಲ್ಲಿ, ಲಂಕೆಯಿಂದ ಕಾಶ್ಮೀರದವರೆಗೆ ಪ್ರತಿಯೊಂದು ಕಣದಲ್ಲೂ ಶಿವನ ಮಹಿಮೆ ಪಸರಿಸಿದೆ. ರಾವಣನು ಶಿವ ತಾಂಡವ ಸ್ತೋತ್ರವನ್ನು ಹಾಡಿದ್ದರೆ, ಉತ್ತರದಲ್ಲಿ ಕಾಶ್ಮೀರದ ತತ್ವಜ್ಞಾನಿ ವಸುಗುಪ್ತರು ಶೈವ ತತ್ವಶಾಸ್ತ್ರವನ್ನು ಜಗತ್ತಿಗೆ ಸಾರಿದರು.

ಎಂಟನೇ ಶತಮಾನದಲ್ಲಿ (724–761 CE) ಕಾಶ್ಮೀರವನ್ನು ಆಳಿದ ಶ್ರೇಷ್ಠ ಚಕ್ರವರ್ತಿ ಲಲಿತಾದಿತ್ಯ ಅವರು ಶಿವನ ಪರಮ ಭಕ್ತರಾಗಿದ್ದರು. ಅವರು ನಿರ್ಮಿಸಿದ ಮಾರ್ತಾಂಡ ಸೂರ್ಯ ದೇವಾಲಯದ ಅವಶೇಷಗಳು ಇಂದಿಗೂ ಕಾಶ್ಮೀರದ ಶೈವ ಪರಂಪರೆಗೆ ಸಾಕ್ಷಿಯಾಗಿದೆ. ನಂತರ, 14ನೇ ಶತಮಾನದಲ್ಲಿ ಲಲ್ಲೇಶ್ವರಿ (ಲಾಲ್ ದಿದ್) ಎಂಬ ಅಧ್ಯಾತ್ಮ ಕವಯತ್ರಿ ಶಿವನ ಆರಾಧನೆಯಲ್ಲಿ ತಲ್ಲೀನರಾಗಿ, ಕಾಶ್ಮೀರಿ ಭಾಷೆಯ ಮೂಲಕ ಶೈವ ಭಕ್ತಿ ಪರಂಪರೆಯನ್ನು ಮುಂದುವರೆಸಿದರು.

ಹೀಗೆ ಪ್ರತಿ ಧೂಳಿನ ಕಣದಲ್ಲಿ ಶಿವನ ಸಾರವಿರುವ ಕಾಶ್ಮೀರದ ನೆಲದಲ್ಲಿ, ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿ, ಅದನ್ನು ಒಬ್ಬ ಯುವ ಮುಸ್ಲಿಂ ನಾಗರಿಕನಿಂದಲೇ ರಕ್ಷಿಸಲ್ಪಟ್ಟ ಈ ಘಟನೆ ನಡೆದಿದೆ. ಕಾಶ್ಮೀರವು ಶತಮಾನಗಳಿಂದಲೂ ಪೋಷಿಸಿಕೊಂಡು ಬಂದಿರುವ ಸಾಂಸ್ಕೃತಿಕ ಸಾಮರಸ್ಯ ಮತ್ತು ಸಹಬಾಳ್ವೆಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.