ಕೇರಳದ ಎರ್ನಾಕುಲಂನ ಕೆನರಾ ಬ್ಯಾಂಕ್ನಲ್ಲಿ ಗೋಮಾಂಸ ನಿಷೇಧ ಮಾಡಿ ಎಂದು ಮ್ಯಾನೇಜರ್ ಆದೇಶದ ವಿರುದ್ಧ ಉದ್ಯೋಗಿಗಳು ಗೋಮಾಂಸ ಉತ್ಸವ ಆಯೋಜಿಸಿದ ಘಟನೆ ನಡೆದಿದೆ..
ಎರ್ನಾಕುಲಂ: ಕೇರಳದಲ್ಲಿ ಗೋಮಾಂಸವನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಇಲ್ಲಿನ ಯಾವುದೇ ಮಾಂಸಹಾರಿ ಹೊಟೇಲ್ಗಳಲ್ಲೂ ಗೋಮಾಂಸ ಕಡ್ಡಾಯ ಎಂಬಂತೆ ಇದ್ದೇ ಇರುತ್ತದೆ. ಕೇರಳ ರಾಜ್ಯ ಗೋಮಾಂಸ ಹಾಗೂ ಗೋಹತ್ಯೆಯ ಪರವಾಗಿ ಇರುವಂತಹ ರಾಜ್ಯವಾಗಿದ್ದು, ಇಲ್ಲಿ ಗೋವುಗಳ ಸಾಗಣೆ ಹತ್ಯೆಗೆ ಯಾವುದೇ ನಿಷೇಧವಿಲ್ಲ, ಗೋಹತ್ಯೆಯನ್ನು ತಡೆಯುವ ಪ್ರಯತ್ನಗಳ ವಿರುದ್ಧ ಸದಾ ಪ್ರತಿಭಟಿಸುವ ಇತಿಹಾಸವನ್ನು ಕೇರಳ ಹೊಂದಿದೆ. ಹೀಗಿರುವಾಗ ಕೇರಳದ ಎರ್ನಾಕುಲಂನ ಕೆನರಾ ಬ್ಯಾಂಕ್ನ ಕಚೇರಿ ಕ್ಯಾಂಟೀನ್ನಲ್ಲಿ ಗೋಮಾಂಸ ಪೂರೈಕೆಯನ್ನು ನಿಷೇಧಿಸುವಂತೆ ಇತ್ತೀಚೆಗೆ ಬ್ಯಾಂಕ್ಗೆ ಹೊಸದಾಗಿ ನೇಮಕವಾಗಿ ಬಂದ ಬಿಹಾರ ಮೂಲದ ಮ್ಯಾನೇಜರ್ ಆದೇಶ ನೀಡಿದ್ದು, ಇದರಿಂದ ಕುಪಿತರಾದ ಅಲ್ಲಿನ ಉದ್ಯೋಗಿಗಳು ಗೋಮಾಂಸ ಉತ್ಸಹವನ್ನು ಮಾಡಿದಂತಹ ಘಟನೆ ನಡೆದಿದೆ.
ಕ್ಯಾಂಟೀನ್ನಲ್ಲಿ ಗೋಮಾಂಸ ನೀಡೋದು ಬೇಡ ಎಂದ ಮ್ಯಾನೇಜರ್
ಬ್ಯಾಂಕ್ ಮ್ಯಾನೇಜರ್ನ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ ಉದ್ಯೋಗಿಗಳು ಆಹಾರದ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (BEFI) ದೊಂದಿಗೆ ಸಂಯೋಜಿತವಾಗಿರುವ ಕೆನರಾ ಬ್ಯಾಂಕ್ ನೌಕರರು ಬ್ಯಾಂಕಿನ ಕೊಚ್ಚಿಯಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ಗೋಮಾಂಸ ಉತ್ಸವವನ್ನು ಆಯೋಜಿಸಿದ್ದಾರೆ. ಬಿಹಾರ ಮೂಲದ ಪ್ರಾದೇಶಿಕ ಅಧಿಕಾರಿ ಅಶ್ವಿನಿ ಕುಮಾರ್ ಅವರು ಇತ್ತೀಚೆಗೆ ಕೊಚ್ಚಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಗೆ ವರ್ಗಾವಣೆಗೊಂಡು ಬಂದಿದ್ದರು. ಅವರು ಬಂದ ನಂತರ ಕಚೇರಿ ಕ್ಯಾಂಟೀನ್ನಲ್ಲಿ ಕ್ಯಾಂಟೀನ್ನಲ್ಲಿ ಗೋಮಾಂಸವನ್ನು ಬಡಿಸಬಾರದು ಎಂದು ಮೌಖಿಕವಾಗಿ ನಿರ್ದೇಶನ ನೀಡಿದ್ದರು ಎನ್ನಲಾಗಿದೆ ಹೀಗಾಗಿ ಇದರ ವಿರುದ್ಧ ಆಕ್ರೋಶಗೊಂಡ ನೌಕರರು ಗುರುವಾರ ಪ್ರತಿಭಟನೆಯಾಗಿ ಬ್ಯಾಂಕ್ನ ಕಚೇರಿಯಲ್ಲೇ ಗೋಮಾಂಸ ಉತ್ಸವವನ್ನು ಆಯೋಜಿಸಿದ್ದಾರೆ. ಗೋಮಾಂಸದ ಜೊತೆಗೆ ಇಲ್ಲಿ ಪೊರೊಟ್ಟಾ ಎಂದೂ ಕರೆಯಲ್ಪಡುವ ಮಲಬಾರ್ ಪರಾಠವನ್ನು ಬಂದವರಿಗೆ ಬಡಿಸಲಾಯ್ತು.
ಬ್ಯಾಂಕ್ ಉದ್ಯೋಗಿಗಳಿಂದ ಕೊಚ್ಚಿ ಕೆನರಾ ಬ್ಯಾಂಕ್ನಲ್ಲಿ ಗೋಮಾಂಸ ಉತ್ಸವ ಆಚರಿಸಿ ಪ್ರತಿಭಟನೆ
ಎರ್ನಾಕುಲಂನಲ್ಲಿರುವ ಬ್ಯಾಂಕ್ ಉದ್ಯೋಗಿಗಳ ಸಂಘದ ನಾಯಕ ಎಸ್.ಎಸ್. ಅನಿಲ್, ಕ್ಯಾಂಟೀನ್ನಲ್ಲಿ ಸಾಂದರ್ಭಿಕವಾಗಿ ಗೋಮಾಂಸ ಭಕ್ಷ್ಯಗಳನ್ನು ಬಡಿಸಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಇಲ್ಲಿಗೆ ವರ್ಗಾವಣೆಯಾಗಿ ಬಂದ ಪ್ರಾದೇಶಿಕ ವ್ಯವಸ್ಥಾಪಕರು ಸಹೋದ್ಯೋಗಿಗಳಿಗೆ ಕಚೇರಿಯಲ್ಲಿ ಗೋಮಾಂಸ ಸೇವಿಸದಂತೆ ಕೇಳಿಕೊಂಡರು. ಸಿಬ್ಬಂದಿಗೆ ಇನ್ನು ಮುಂದೆ ಗೋಮಾಂಸ ಖಾದ್ಯವನ್ನು ಬಡಿಸಬಾರದು ಎಂದು ಅವರು ಬಯಸಿದ್ದರು. ಈ ದೇಶದಲ್ಲಿ ನಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನಮಗಿದೆ. ಇದು ವೈಯಕ್ತಿಕ ಆಯ್ಕೆಯಾಗಿದೆ ಮತ್ತು ನಾವು ಯಾರನ್ನೂ ಗೋಮಾಂಸ ಸೇವಿಸುವಂತೆ ಒತ್ತಾಯಿಸುವುದಿಲ್ಲ. ಹೀಗಿರುವಾಗ ಕೇರಳದಲ್ಲಿ, ಒಬ್ಬ ಅಧಿಕಾರಿ ಅಂತಹ ನಿರ್ದೇಶನವನ್ನು ಹೇಗೆ ನೀಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಸಿಪಿಐಎಂ ಬೆಂಬಲಿತ ಶಾಸಕನಿಂದ ಬೆಂಬಲ: ಇಲ್ಲಿ ಕೇಸರಿ ಧ್ವಜ ಹಾರಿಸಲು ಬಿಡಲ್ಲ ಎಂದ ಜಲೀಲ್
ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಸಿಪಿಐ(ಎಂ) ಬೆಂಬಲಿತ ಶಾಸಕ ಕೆ.ಟಿ. ಜಲೀಲ್ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, 'ಸಂಘ ಪರಿವಾರ್ ಕಾರ್ಯಸೂಚಿ' ಕೇರಳದಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇತರರು ಏನು ತಿನ್ನಬೇಕು ಮತ್ತು ಏನು ಧರಿಸಬೇಕು ಎಂದು ನಿರ್ಧರಿಸುವ ಹಕ್ಕು ಯಾವುದೇ ಅಧಿಕಾರಿಗೆ ಇಲ್ಲ. ಇಲ್ಲಿ, ಜನರು ಫ್ಯಾಸಿಸ್ಟರ ವಿರುದ್ಧ ಧೈರ್ಯದಿಂದ ಮಾತನಾಡಬಹುದು ಯಾರೂ ನಿಮಗೆ ಏನೂ ಮಾಡುವುದಿಲ್ಲ. ಏಕೆಂದರೆ ಕಮ್ಯುನಿಸ್ಟರು ನಿಮ್ಮ ಪಕ್ಕದಲ್ಲಿದ್ದಾಗ, ಕಾಮ್ರೇಡ್ಗಳು ಯಾರಿಗೂ ಕೇಸರಿ ಧ್ವಜ ಹಾರಿಸಲು ಮತ್ತು ಜನರ ಶಾಂತಿಯನ್ನು ಕದಡಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಆನೆಗೆ ಬಿಯರ್ ಕುಡಿಸಿದ ಪ್ರವಾಸಿಗ: ವಿಡಿಯೋ ವೈರಲ್ ಆಗ್ತಿದ್ದಂಗೆ ತೀವ್ರ ಆಕ್ರೋಶ
ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶದಲ್ಲಿ ಕೇವಲ 12 ಗಂಟೆಯಲ್ಲಿ ಸೇತುವೆ ನಿರ್ಮಿಸಿದ ಭಾರತೀಯ ಸೇನೆ


