ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಅಸಭ್ಯವಾದ ಮೆಸೇಜ್ ಕಳುಹಿಸಿ ತಲೆಮರೆಸಿಕೊಂಡಿದ್ದ ವೃದ್ಧನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಮಹಿಳೆಯರಿಗೆ ಮತ್ತು ಮಹಿಳಾ ಪೊಲೀಸ್ ಇಲಾಖೆಗೆ ಅವಮಾನವಾಗುವಂತೆ ಅಸಭ್ಯ ಧ್ವನಿ ಸಂದೇಶವನ್ನು ಆರೋಪಿ ಗುಂಪಿಗೆ ಕಳುಹಿಸಿದ್ದನು.

ಸಾಮಾನ್ಯವಾಗಿ ಮಹಿಳೆಯರಿಗೆ ಕೆಟ್ಟದಾಗಿ ಸನ್ನೆ ಮಾಡಿದರೂ ಅವರ ವಿರುದ್ಧ ಕೇಸ್ ಹಾಕಿ ಪೊಲೀಸರು ಕಂಬಿ ಎಣಿಸುವಂತೆ ಮಾಡುತ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ವ್ಯಕ್ತಿ ಮಹಿಳಾ ಪೊಲೀಸರಿಗೆ ಅಸಭ್ಯವಾಗಿ ಮಾತನಾಡಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತಹ ಮಹಿಳಾ ಪೊಲೀಸರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಇದೀಗ ಕಂಬಿ ಎಣಿಸುತ್ತಿದ್ದಾನೆ.

ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಅಸಭ್ಯವಾಗಿ ವರ್ತಿಸಿ ತಲೆಮರೆಸಿಕೊಂಡಿದ್ದ ವೃದ್ಧನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಬತ್ತೇರಿ ಮೂಲಂಗಾವ್ ಕೋರುಂಬತ್ ನಿವಾಸಿ ಮಾನು ಎಂಬ ಅಹ್ಮದ್ (61) ನನ್ನು ಬತ್ತೇರಿ ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಯ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಬತ್ತೇರಿ, ಮೀನಂಗಾಡಿ ಮತ್ತು ಅಂಬಲವಯಲ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 30 ರಂದು ಸುಮಾರು 700 ಸದಸ್ಯರಿರುವ 'ಮೊಟ್ಟುಸೂಚಿ' ಎಂಬ ವಾಟ್ಸಾಪ್ ಗುಂಪಿನಲ್ಲಿ ಜಿಲ್ಲೆಯ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪಿ ಅಸಭ್ಯವಾಗಿ ವರ್ತಿಸಿದ್ದನು. ಮಹಿಳೆಯರಿಗೆ ಮತ್ತು ಮಹಿಳಾ ಪೊಲೀಸ್ ಇಲಾಖೆಗೆ ಅವಮಾನವಾಗುವಂತೆ ಅಸಭ್ಯ ಧ್ವನಿ ಸಂದೇಶವನ್ನು ಆರೋಪಿ ಗುಂಪಿಗೆ ಕಳುಹಿಸಿದ್ದನು. ಜುಲೈ 1 ರಂದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಆರೋಪಿ ಕೇರಳದಿಂದ ತಲೆಮರೆಸಿಕೊಂಡು ಮೈಸೂರಿಗೆ ಬಂದಿದ್ದನು.

ಬತ್ತೇರಿ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಪಿ. ರಾಘವನ್, ಎಸ್.ಐ. ಸೋಬಿನ್, ಎ.ಎಸ್.ಐ. ಸಲೀಂ, ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಲಬ್ನಾಸ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಅನಿಲ್, ಅನಿತ್ ಮುಂತಾದವರ ತಂಡವು ಆರೋಪಿಯ ಫೋನ್ ನೆಟ್‌ವರ್ಕ್ ಸೇರಿದಂತ ಇತರೆ ಮಾಹಿತಿಯನ್ನು ಆಧರಿಸಿ ಮೈಸೂರಿಗೆ ಹುಡುಕಿಕೊಂಡು ಬಂದಿದೆ. ಮೈಸೂರಿನ ಪೊಲೀಸರ ನೆರವಿನೊಂದಿಗೆ ಕೇರಳದಿಂದ ಬಂದು ಮೈಸೂರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಕೇರಳಕ್ಕೆ ಕರೆದೊಯ್ದಿದ್ದಾರೆ.