ACS Nupur Bora Arrested:ಕೆಲಸಕ್ಕೆ ಸೇರಿದ ಕೇವಲ ಆರು ವರ್ಷದಲ್ಲಿ ಲಕ್ಷಾಂತರ ರೂ ಹಣ ಆಸ್ತಿ ಮಾಡಿಕೊಂಡಿದ್ದ ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ನೂಪುರ್ ಬೋರಾ ಅವರನ್ನು ವಿಶೇಷ ಜಾಗೃತ ದಳ ಬಂಧಿಸಿದೆ.
ಅಕ್ರಮ ಆಸ್ತಿ ಗಳಿಕೆ ಅಸ್ಸಾಂ ನಾಗರಿಕ ಸೇವೆ ಅಧಿಕಾರಿ ನೂಪುರ್ ಬೋರಾ ಬಂಧನ
ಅಸ್ಸಾಂ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹಣ ಮನೆಯಲ್ಲಿ ಪತ್ತೆಯಾದ ಹಿನ್ನೆಲೆ ಅಸ್ಸಾಂ ನಾಗರಿಕ ಸೇವೆಯಾದ ಎಸಿಎಸ್‌ನ ಅಧಿಕಾರಿ ನೂಪುರ್ ಬೋರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿಯವರ ವಿಶೇಷ ಜಾಗೃತ ದಳದ ಅಧಿಕಾರಿಗಳ ತಂಡ, ಅಧಿಕಾರಿ ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೆ ದಾಳಿ ನಡೆಸಿದಾಗ 92 ಲಕ್ಷ ರೂ. ನಗದು ಮತ್ತು ಸುಮಾರು 1 ಕೋಟಿ ರೂ. ಮೌಲ್ಯದ ಆಭರಣಗಳು ಸಿಕ್ಕಿದ್ದು, ಜಪ್ತಿ ಮಾಡಲಾಗಿದೆ. ಹಾಗೆಯೇ ಇದರ ಜೊತೆಗೆ ಇವರ ಬಾರ್ಪೇಟಾದಲ್ಲಿರುವ ಬಾಡಿಗೆ ಮನೆಯಲ್ಲಿ ದಾಳಿ ನಡೆಸಿದಾಗ ಅಲ್ಲಿ 10 ಲಕ್ಷ ರೂ. ನಗದು ಕೂಡ ಪತ್ತೆಯಾಗಿದೆ.
2019ರಲ್ಲಿ ಕೆಲಸಕ್ಕೆ ಸೇರಿದ ಮಹಿಳಾ ಅಧಿಕಾರಿ ಮನೆಯಲ್ಲಿ ಕೋಟಿ ಕೋಟಿ ಹಣ
2019 ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಆಯ್ಕೆಯಾಗಿದ್ದ ನೂಪುರ್ ಬೋರಾ ಅವರು, ಗೋಲಾಘಾಟ್ ನಿವಾಸಿಯಾಗಿದ್ದು, ಪ್ರಸ್ತುತ ಕಮ್ರೂಪ್ ಜಿಲ್ಲೆಯ ಗೊರೊಮರಿಯಲ್ಲಿ ವೃತ್ತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ವಿವಾದಾತ್ಮಕ ಭೂ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದಲೂ ಆಕೆಯ ಮೇಲೆ ನಿಗಾ ಇಡಲಾಗಿತ್ತು ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಹೇಳಿದ್ದಾರೆ. ಈಕೆ ಬಾರ್ಪೆಟಾದಲ್ಲಿ ಕೆಲಸ ಮಾಡುತ್ತಿದ್ದಾಗ ಹಣಕ್ಕಾಗಿ ಹಿಂದೂ ಭೂಮಿಯನ್ನು ಅನುಮಾನಾಸ್ಪದ ವ್ಯಕ್ತಿಗಳಿಗೆ ವರ್ಗಾಯಿಸಿದ್ದರು. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿನ ಕಂದಾಯ ವಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಸರ್ಮಾ ಹೇಳಿದ್ದಾರೆ.
ನೂಪುರ್ ಬೋರಾ ಸಹಾಯಕನ ಮನೆ ಮೇಲೂ ದಾಳಿ
ಬಾರ್ಪೇಟಾದ ಕಂದಾಯ ವೃತ್ತ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನೂಪುರ್ ಶರ್ಮಾ ಅವರ ಸಹಾಯಕ ಲತ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೂ ವಿಶೇಷ ಜಾಗೃತ ದಳ ದಾಳಿ ನಡೆಸಿದೆ. ನೂಪುರ್ ಬೋರಾ ಅವರು ಅಲ್ಲಿ ವೃತ್ತ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾಗ, ಅವರ ಜೊತೆ ಸೇರಿ ಬಾರ್ಪೇಟಾದಾದ್ಯಂತ ಹಲವಾರು ಭೂ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪ ಈ ಸೂರಜಿತ್ ದೇಕಾ ಮೇಲಿದೆ.
ನಾಗರಿಕ ಸೇವೆಗೆ ಆಯ್ಕೆಯಾಗುವ ಮೊದಲು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನೂಪುರ್
ಹೀಗೆ ಭ್ರಷ್ಟಾಚಾರ ಆರೋಪದ ಕಾರಣಕ್ಕೆ ಬಂಧನಕ್ಕೊಳಗಾಗಿರುವ ನೂಪುರ್ ಬೋರಾ, ಗೋಲ್ಗಾಟ್‌ನಲ್ಲಿ 1989ರ ಮಾರ್ಚ್ 31ರಂದು ಜನಿಸಿದ್ದು, ಕಲೆ ಹಾಗೂ ಇಂಗ್ಲೀಷ್‌ನಲ್ಲಿ ಗುವಾಹಟಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ ಈಕೆ ಇಲ್ಲಿನ ಪ್ರತಿಷ್ಠಿತ ಕಾಟನ್ ಕಾಲೇಜಿನಲ್ಲಯೂ ವ್ಯಾಸಂಗ ಮಾಡಿದ್ದು, ನಾಗರಿಕ ಸೇವೆಗೆ ಸೇರುವ ಮೊದಲು ಜಿಲ್ಲೆ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡಿದ್ದಳು. 2019ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಆಯ್ಕೆಯಾದ ಈಕೆ ಕರ್ಬಿ ಅಂಗ್ಲಾಂಗ್‌ನಲ್ಲಿ ಸಹಾಯಕ ಕಮೀಷನರ್ ಆಗಿ ವೃತ್ತಿ ಆರಂಭಿಸಿದ್ದರು. ನಂತರ ಈಕೆಯನ್ನು ಬಾರ್ಪೆಟಾ ಪ್ರದೇಶಕ್ಕೆ ಸರ್ಕಲ್ ಆಫೀಸರ್ ಆಗಿ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಉಡುಪಿ ಕೃಷ್ಣಾಷ್ಟಮಿ ಶೋಭಯಾತ್ರೆಯಲ್ಲಿ ರಂಜಿಸಿದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್..!
ಇದನ್ನೂ ಓದಿ: ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ: ರುಬಿಯೋ ಹೇಳಿಕೆ ಬೆನ್ನಲೇ ದಾಳಿ ತೀವ್ರಗೊಳಿಸಿದ ಇಸ್ರೇಲ್


