ಹೊಲದಲ್ಲಿ ತಾಯಿಯ ಹಿಂದೆ ನಡೆದು ಹೋಗುತ್ತಿದ್ದ 5 ವರ್ಷದ ಬಾಲಕನ ಮೇಲೆ ಚಿರತೆಯೊಂದು ದಾಳಿ ಮಾಡಿ ಸಾಯಿಸಿದೆ. ಭಾನುವಾರ ಮುಂಜಾನೆ ಬಾಲಕ ತಮ್ಮ ಕುಟುಂಬದ ಹೊಲದಲ್ಲಿ ತಾಯಿಯ ಹಿಂದೆ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಚಿರತೆಯೊಂದು ಬಾಲಕನನ್ನು ಹಿಡಿದು ಸಾಯಿಸಿದೆ

ಅಮ್ರೇಲಿ: ತಮ್ಮ ಹೊಲದಲ್ಲಿ ತಾಯಿಯ ಹಿಂದೆ ನಡೆದು ಹೋಗುತ್ತಿದ್ದ 5 ವರ್ಷದ ಬಾಲಕನನ್ನು ಚಿರತೆಯೊಂದು ಬೇಟೆಯಾಡಿ ಸಾಯಿಸಿದಂತಹ ಭಯಾನಕ ಘಟನೆ ಗುಜರಾತ್‌ನ ಅಮ್ರೇಲಿಯಲ್ಲಿ ನಡೆದಿದೆ. ಭಾನುವಾರ ಮುಂಜಾನೆ ಬಾಲಕ ತಮ್ಮ ಕುಟುಂಬದ ಹೊಲದಲ್ಲಿ ತಾಯಿಯ ಹಿಂದೆ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಚಿರತೆಯೊಂದು ಬಾಲಕನನ್ನು ಹಿಡಿದು ಸಾಯಿಸಿದೆ ಎಂದು ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಗುವನ್ನು ಬೇಟೆಯಾಡಿದ ಈ ನರಭಕ್ಷಕ ಚಿರತೆಯನ್ನು ಹಿಡಿಯುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅಮ್ರೇಲಿ ಜಿಲ್ಲೆಯ ಧಾತ್ರಿ ನಗರದ ಗೋಪಾಲ್‌ಗ್ರಾಮ್‌ನಲ್ಲಿ ಈ ಘಟನೆ ನಡೆದಿದೆ.

ಮಗುವಿನ ಮೇಲೆ ದಾಳಿ ಮಾಡಿ ಸಾಯಿಸಿದ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಮೂರು ಬೋನುಗಳನ್ನು ಇಡಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಹೊಲದಲ್ಲಿ ಅಡಗಿದ್ದ ಚಿರತೆ ಹಠಾತನೇ ಬಾಲಕನ ಮೇಲೆ ದಾಳಿ ಮಾಡಿ ಬಾಲಕನನ್ನು ಎಳೆದೊಯ್ದಿದೆ. ಆ ಬಾಲಕ ಮುಂಜಾನೆ 9 ಗಂಟೆಗೆ ತನ್ನ ತಾಯಿಯ ಹಿಂದೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರಂತ ನಡೆದಿದೆ ಎಂದು ಪ್ರಭಾರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಪ್ರತಾಪ್ ಚಂದು ಹೇಳಿದ್ದಾರೆ.

ಇದನ್ನೂ ಓದಿ: RTE ಕಾಯ್ದೆಯಡಿ ಪ್ರವೇಶ ಪಡೆದ ಬಾಲಕಿಗೆ ಖಾಸಗಿ ಶಾಲೆ ಕಿರುಕುಳ: ರಸ್ತೆಯಲ್ಲೇ ಕುಳಿತು ಬಾಲಕಿ ಪ್ರತಿಭಟನೆ

ಚಿರತೆ ದಾಳಿಯಿಂದ ಮೃತನಾದ ಬಾಲಕನನ್ನು ಸಾಹಿಲ್ ಕತರ್ ಎಂದು ಗುರುತಿಸಲಾಗಿದೆ. ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಇದೇ ರೀತಿಯ ಘಟನೆ ಕಳೆದ ತಿಂಗಳು ನಡೆದಿತ್ತು. ದಲ್ಖನಿಯಾದ ಅರಣ್ಯ ಪ್ರದೇಶದ ಸಮೀಪದಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿತ್ತು. ನವೆಂಬರ್ 28ರಂದು ಈ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಮತ್ತೊಂದು ದುರಂತ ನಡೆದಿದೆ.

ಇದನ್ನೂ ಓದಿ: ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ