ಜಿನೀವಾದ ವಿಶ್ವಸಂಸ್ಥೆಯಲ್ಲಿ ನಡೆದ ವಿಶ್ವ ಧ್ಯಾನ ದಿನದ ಕಾರ್ಯಕ್ರಮದಲ್ಲಿ, ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿಯವರು ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು. ಜಾಗತಿಕ ಸಂಘರ್ಷಗಳ ಈ ಕಾಲದಲ್ಲಿ, ಧ್ಯಾನವು ವೈಯಕ್ತಿಕ ಶಾಂತಿಯ ಜೊತೆಗೆ ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು

ಜಿನೇವಾ: ‘ವೈಯಕ್ತಿಕ ಸುಖ-ಶಾಂತಿಗಷ್ಟೇ ಅಲ್ಲದೆ, ದಣಿವು, ಒತ್ತಡ, ಘರ್ಷಣೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಸಮಾಜಕ್ಕೂ ಧ್ಯಾನ ಅಗತ್ಯ. ಧ್ಯಾನವು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಕ್ತಿಶಾಲಿ ಸಾಧನ’ ಎಂದು ಆರ್ಟ್ ಆಫ್ ಲಿವಿಂಗ್‌ನ ಸ್ಥಾಪಕರೂ ಆಗಿರುವ ಜಾಗತಿಕ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಹೇಳಿದರು.

ಜಿನೀವಾದ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ನಡೆದ 2ನೇ ವರ್ಷದ ವಿಶ್ವ ಧ್ಯಾನ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆತಂಕ, ದೈಹಿಕ-ಮಾನಸಿಕ ದಣಿವು ಹಾಗೂ ಏಕಾಂಗಿತನ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಮಸ್ಯೆಗಳಿಗೆ ಬಾಹ್ಯ ಪರಿಹಾರಗಳಷ್ಟೇ ಸಾಕಾಗುವುದಿಲ್ಲ; ಮನಸ್ಸಿನ ಸ್ಥಿರತೆಯೂ ಅಗತ್ಯ. ಇಂದು ಜನಸಂಖ್ಯೆಯ ಮೂರನೇ ಒಂದು ಭಾಗ ಒಂಟಿತನದಿಂದ ಬಳಲುತ್ತಿದೆ. ಅರ್ಧದಷ್ಟು ಜನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಒತ್ತಡದಿಂದ ನಮ್ಮನ್ನು ಮುಕ್ತಗೊಳಿಸಿ, ಅಂತರಂಗದೊಂದಿಗೆ ಬೆಸೆಯುವ ಮಾರ್ಗ ಬೇಕಾಗಿದೆ. ಆ ಮಾರ್ಗವೇ ಧ್ಯಾನ’ ಎಂದು ತಿಳಿಸಿದರು.

‘ಪ್ರಜ್ಞಾಪೂರ್ವಕ ಸ್ಥಿತಿಯು ದಾರಿಯಾದರೆ, ಧ್ಯಾನವು ಮನೆ ಇದ್ದಂತೆ. ಧ್ಯಾನವು ನಿಮ್ಮನ್ನು ನಿಮ್ಮ ಅಂತರಾಳಕ್ಕೆ ಕೊಂಡೊಯುತ್ತದೆ. ನೆಮ್ಮದಿಯನ್ನು ನೀಡುತ್ತದೆ. ಧ್ಯಾನ ಮಾಡುವುದು ಕಷ್ಟಕರವಲ್ಲ. ಕಂಪ್ಯೂಟರ್‌ನಲ್ಲಿ ಅನಾವಶ್ಯಕ ಕಡತಗಳನ್ನು ತೆಗೆದುಹಾಕಲು ಡಿಲೀಟ್ ಬಟನ್‌ ಒತ್ತುವಂತೆ, ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿರುವ ಅನಾವಶ್ಯಕ ವಿಷಯಗಳಿಂದ ಮುಕ್ತಿ ದೊರೆಯುತ್ತದೆ’ ಎಂದು ತಿಳಿಸಿದರು.

‘ನಾವೆಲ್ಲರೂ ಚೈತನ್ಯಮಯವಾಗಿದ್ದೇವೆ. ಈ ಚೈತನ್ಯ ಶಕ್ತಿ ಸಾಮರಸ್ಯಪೂರ್ಣವಾಗಿದೆಯೇ? ಅದು ನಮ್ಮ ಪರಿಸರದಲ್ಲಿ ಏಕತೆಯನ್ನು ಉಂಟುಮಾಡುತ್ತಿದೆಯೇ? ಎಂಬುದನ್ನು ಗಮನಿಸಬೇಕು. ಇದಕ್ಕೆ ಧ್ಯಾನವೇ ಉತ್ತರ. ಧ್ಯಾನ ನಮ್ಮ ಸುತ್ತಲೂ ಅಗತ್ಯವಾದ ಸಾಮರಸ್ಯವನ್ನು ತರುತ್ತದೆ. ನಮ್ಮ ತರಂಗಗಳನ್ನು ಶುದ್ಧಗೊಳಿಸುತ್ತದೆ. ಜಗತ್ತು ಧ್ಯಾನದ ಮಾರ್ಗದಲ್ಲಿ ಮುಂದುವರಿಯಬೇಕು’ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ, ಜಿನೇವಾದಲ್ಲಿನ ವಿಶ್ವಸಂಸ್ಥೆಯ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳ ಭಾರತದ ಕಾಯಂ ಪ್ರತಿನಿಧಿ ಅರಿಂದಮ್ ಬಾಗ್ಚಿ ಮಾತನಾಡಿ, ‘ಕಳೆದ ವರ್ಷ ಗುರೂಜಿಯವರು ಭಾಗವಹಿಸಿದ್ದ ಜಿನೇವಾದ ಅಂತಾರಾಷ್ಟ್ರೀಯ ಸಮಾವೇಶವನ್ನು ನಾವು ಸ್ಮರಿಸುತ್ತೇವೆ. ಜಟಿಲವಾದ ಸಂಘರ್ಷಗಳು ಮತ್ತು ಅಪನಂಬಿಕೆಯಿಂದ ತುಂಬಿರುವ ಈ ಜಗತ್ತಿನಲ್ಲಿ, ಧ್ಯಾನವು ಕೇವಲ ವೈಯಕ್ತಿಕ, ಸ್ವಯಂ-ಸುಧಾರಣೆಯ ಅಭ್ಯಾಸವಷ್ಟೇ ಅಲ್ಲದೆ ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಶಕ್ತಿಶಾಲಿ ಸಾಧನವಾಗಿದೆ’ ಎಂದರು.

ಕಳೆದ ವರ್ಷ ಡಿ.21ರಂದು ಆಯೋಜಿಸಲಾಗಿದ್ದ ವಿಶ್ವ ಧ್ಯಾನ ದಿನದ ಕಾರ್ಯಕ್ರಮದಲ್ಲಿ 85 ಲಕ್ಷ ಮಂದಿ ಭಾಗವಹಿಸಿದ್ದರು. ಇದು ಇತಿಹಾಸದಲ್ಲೇ ಅತಿದೊಡ್ಡ ಧ್ಯಾನ ಸಮಾಗಮವಾಗಿದ್ದು, 6 ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿತ್ತು.