‘ವಸಾಹತುಶಾಹಿ (ಗುಲಾಮಿ) ಮನಃಸ್ಥಿತಿಯಿಂದ ಹೊರಬರಲು ಭಾರತೀಯರು 2035ರ ಗಡುವು ವಿಧಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ವಿಕಸಿತ ಮಾಡುವತ್ತ ಗಮನಹರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನವದೆಹಲಿ : ‘ವಸಾಹತುಶಾಹಿ (ಗುಲಾಮಿ) ಮನಃಸ್ಥಿತಿಯಿಂದ ಹೊರಬರಲು ಭಾರತೀಯರು 2035ರ ಗಡುವು ವಿಧಿಸಿಕೊಳ್ಳಬೇಕು. ಈ ಮೂಲಕ ದೇಶವನ್ನು ವಿಕಸಿತ ಮಾಡುವತ್ತ ಗಮನಹರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ, ‘ದೇಶ 2-3% ಬೆಳವಣಿಗೆಗಾಗಿ ಹೆಣಗಾಡುತ್ತಿದ್ದಾಗ ಹಿಂದು ಬೆಳವಣಿಗೆಯ ದರ ಎಂಬ ಪದವನ್ನು ಬಳಸಲಾಗುತ್ತಿತ್ತು. ಈ ಮೂಲಕ ಹಿಂದೂ ಜೀವನ ಪದ್ಧತಿಯನ್ನೇ ಅಣಕಿಸಲಾಗುತ್ತಿತ್ತು. ಅಂಥ ಪರಿಸ್ಥಿತಿ ಈಗ ಇಲ್ಲ’ ಎಂದು ಚಾಟಿ ಬೀಸಿದ್ದಾರೆ.
ಹಿಂದು ಬೆಳವಣಿಗೆಯ ದರ ಎಂಬ ಪದ ಬಳಸಲಾಯಿತು
ಹಿಂದುಸ್ತಾನ್ ಟೈಮ್ಸ್ ನಾಯಕತ್ವ ಶೃಂಗದಲ್ಲಿ ಶನಿವಾರ ಮಾತನಾಡಿದ ಅವರು, ‘ಭಾರತವು 2-3% ಬೆಳವಣಿಗೆಗಾಗಿ ಹೆಣಗಾಡುತ್ತಿದ್ದಾಗ ಹಿಂದು ಬೆಳವಣಿಗೆಯ ದರ ಎಂಬ ಪದ ಬಳಸಲಾಯಿತು. ಇಡೀ ಸಮಾಜಕ್ಕೇ ಅನುತ್ಪಾದಕ, ಬಡತನ ಎಂಬ ಟ್ಯಾಗ್ ನೀಡಲಾಯಿತು. ಭಾರತದ ನಿಧಾನಗತಿ ಪ್ರಗತಿಗೆ ಕಾರಣ ’ಹಿಂದು ಸಂಸ್ಕೃತಿ’ ಎಂದು ದೂಷಿಸುವ ಯತ್ನಗಳು ನಡೆದವು. ಆದರೆ ಇಂದು ಭಾರತ ಶೇ.8ರ ದರದಲ್ಲಿ ಪ್ರಗತಿ ಕಾಣುತ್ತಿದೆ. ವಿಶ್ವವು ಸಂಕಷ್ಟದಲ್ಲಿದ್ದಾಗ ಭಾರತದಲ್ಲಿ ಸ್ಥಿರತೆ ಇದೆ’ ಎಂದರು.
ಕೋಮುವಾದ ಕಾಣಲಿಲ್ಲವೇ?’
‘ಹಿಂದು ಬೆಳವಣಿಗೆ ದರ ಎಂಬ ಟೀಕೆಗಳು ಬಂದಾಗ ಕೋಮುವಾದ ಕಾಣಲಿಲ್ಲವೇ?’ ಎಂದು ಪ್ರಗತಿಪರರಿಗೆ ಚಾಟಿ ಬೀಸಿದರು.
ಗುಲಾಮಗಿರಿಯಿಂದ ಹೊರಬನ್ನಿ:‘200 ವರ್ಷದಿಂದ ಬೇರೂರಿರುವ ವಸಾಹತುಶಾಹಿ ಮನಸ್ಥಿತಿಯನ್ನು 2035ರೊಳಗೆ ದೇಶದ ಪ್ರತಿ ಮೂಲೆಯಿಂದಲೂ ತೊಡೆದು ಹಾಕಬೇಕು. ಮುಂದಿನ 10 ವರ್ಷಗಲ್ಲಿ ನಾಗರಿಕರನ್ನು ನಾವು ದೇಶವನ್ನು ಗುಲಾಮಿ ಮನಃಸ್ಥಿತಿಯಿಂದ ಮುಕ್ತಗೊಳಿಸಬೇಕು’ ಎಂದರು.
1835ರಲ್ಲಿ ಮೊದಲ ಬಾರಿ ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ಬಂದಿತ್ತು. ಮೋದಿ ಅವರ, ‘200 ವರ್ಷದಿಂದ ಬೇರೂರಿರುವ ಗುಲಾಮಗಿರಿ ಮನಃಸ್ಥಿತಿ’ ಎಂಬ ಉಲ್ಲೇಖವು ಮೆಕಾಲೆ ಶಿಕ್ಷಣ ನೀತಿಯ 200ನೇ ವಾರ್ಷಿಕೋತ್ಸವ ಉಲ್ಲೇಖಿಸುತ್ತದೆ.

