ಹೋಮ್ ವರ್ಕ್ ಮಾಡದ 11 ವರ್ಷ ಬಾಲಕನ ತಲೆ ಗೋಡೆ ಜಜ್ಜಿ, ಬಾಟಲಿಯಿಂದ ಥಳಿಸಿದ ಶಿಕ್ಷಕ, ಬಾಲಕ ಸಂಪೂರ್ಣ ಅಸ್ವಸ್ಥನಾಗಿ ಮನೆಗೆ ಹಿಂದಿರುಗಿದಾಗ ಘಟನೆ ಬೆಳೆಕಿಗೆ ಬಂದಿದ್ದು, ಶಿಕ್ಷಕ ಹಾಗೂ ಶಾಲೆ ವಿರುದ್ದ ಪ್ರಕರಣ ದಾಖಲಾಗಿದೆ.

ರೇವಾ (ಡಿ.22) ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದೇಗುಲ. ಆದರೆ ಕೆಲವು ಬಾರಿ ಶಾಲೆ ಹಾಗೂ ಅಧ್ಯಾಪಕರು ಕೆಟ್ಟ ಕಾರಣಗಳಿಂದ ವಿದ್ಯಾರ್ಥಿಗಳ ಭವಿಷ್ಯ ಮಾತ್ರವಲ್ಲ, ಬದುಕನ್ನೇ ಕತ್ತಲಾಗಿಸಿದ ಉದಾಹರಣೆಗಳಿವೆ. ಇದೀಗ 11 ವರ್ಷದ ಬಾಲಕ ಹೋಮ್ ವರ್ಕ್ ಮಾಡಿಲ್ಲ ಎಂದು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಬಾಲಕನ ತಲೆಯನ್ನು ಗೋಡೆಗೆ ಜಜ್ಜಿದ್ದು ಮಾತ್ರವಲ್ಲ, ಬಾಲಕನಿಗೆ ಸ್ಟೀಲ್ ಬಾಟಲಿಯಿಂದ ಥಳಿಸಿದ್ದಾರೆ. ಬಾಲಕ ಮನೆಗೆ ಹಿಂದಿರುಗಿದಾಗ ಘಟನೆ ಬೆಳೆಕಿಗೆ ಬಂದಿದೆ.

ಮಧ್ಯಪ್ರವೇಶಿಸಿದ ಸಹೋದರಿಗೂ ಥಳಿತ

11 ವರ್ಷದ ಬಾಲಕ ಎಂದಿನಂತೆ ಶಾಲೆಗೆ ತೆರಳಿದ್ದಾನೆ. ಆದರೆ ಹೋಮ್ ವರ್ಕ್ ಮಾಡಲು ಮರೆತಿದ್ದಾನೆ. ಶಾಲೆಯಲ್ಲಿ ಹೋಮ್ ವರ್ಕ್ ಕುರಿತು ಅಧ್ಯಾಪಕರು ಪ್ರಶ್ನಿಸಿದ್ದಾರೆ. ಈ ವೇಳೆ ಹೋಮ್ ವರ್ಕ್ ಮರೆತಿರುವುದು ಗೊತ್ತಾಗಿದೆ. ಹೋಮ್ ವರ್ಕ್ ಮಾಡಿಲ್ಲ ಎಂದು ಅಧ್ಯಾಪಕ ಕೆರಳಿ ಕೆಂಡವಾಗಿದ್ದಾನೆ. ಯಾಕೆ ಹೋಮ್ ವರ್ಕ್ ಮಾಡಿಲ್ಲ, ಅಧ್ಯಾಪಕನ ಮಾತಿಗೆ ಇಷ್ಟು ಬೆಲೆ ಇಲ್ಲವೇ ಎಂದು ಗದರಿದ್ದು ಮಾತ್ರವಲ್ಲ, ಬಾಲಕನ ತಲೆಯನ್ನು ಗೋಡೆ ಜಜ್ಜಿದ್ದಾನೆ. ಭಯ ಹಾಗೂ ನೋವಿನಿಂದ ಬಾಲಕ ಚೀರಿದ್ದಾನೆ. ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಾಲಕನ ಸಹೋದರಿ ಅಧ್ಯಾಪಕರ ಥಳಿಸದಂತೆ ಮನವಿ ಮಾಡಿದ್ದಾಳೆ. ಅಧ್ಯಾಪಕರ ಬಳಿ ಮನವಿ ಮಾಡಲು ಬಂದ ಸಹೋದರಿಗೂ ಥಳಿಸಿದ ಅಧ್ಯಾಪಕ, ಬಾಲಕ ಬಳಿ ಇದ್ದ ನೀರಿನ ಸ್ಟೀಲ್ ಬಾಟಲಿಯಲ್ಲಿ ಥಳಿಸಿದ್ದಾನೆ.

ಬಾಲಕ ಅಳುತ್ತಲೇ ಮನಗೆ ಮರಳಿದ್ದಾನೆ. ಬಾಲಕ ತಲೆಯಲ್ಲಿ ಗಾಯವಾಗಿ ರಕ್ತ ಸೋರಿಕೆಯಾಗಿದೆ. ಇತ್ತ ನಡೆದ ಘಟನೆಯನ್ನು ಸಹೋದರಿ ವಿವರಿಸಿದ್ದಾರೆ. ಬಾಲಕನ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕ ಭಯ ಹಾಗೂ ನೋವಿನಿಂದ ಬಳಲಿದ್ದಾರೆ. ಪರಿಣಾಮ ಜ್ವರದಿಂದಲೂ ಬಾಲಕನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಧ್ಯಾಪಕನ ವಿರುದ್ದ ಪೋಷಕರ ಆಕ್ರೋಶ

ಹೋಮ್ ವರ್ಕ್ ಮಾಡಿಲ್ಲ ಎಂದರೆ ಗದರಿಸುವುದು, ಶಿಕ್ಷೆ ನೀಡುವುದು ತಪ್ಪಲ್ಲ, ಆದರೆ ಇದು ಯಾವ ರೀತಿಯ ಶಿಕ್ಷೆ? ಮನಬಂದಂತೆ ಥಳಿಸುವುದು ಎಷ್ಟು ಸರಿ, ತಲೆ ಜಜ್ಜಿದ್ದಾರೆ. ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ. ಗಾಯದಿಂದ ರಕ್ತ ಬಂದಿದೆ. ಶಾಲೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆ ಹಾಗೂ ಅಧ್ಯಾಪಕನ ವಿರುದ್ಧ ಪೋಷಕರು ದೂರು ನೀಡಿದ್ದಾರೆ.