QR codes on national highways ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ QR ಕೋಡ್‌ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ರಸ್ತೆ ದೋಷಗಳಿಗೆ ನಾನೊಬ್ಬನೇ ಏಕೆ ಹೊಣೆ ಎಂದು ಗಡ್ಕರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನವದೆಹಲಿ: ನ್ಯಾನೇಕೆ ಎಲ್ಲಾ ಆರೋಪಗಳನ್ನು ತೆಗೆದುಕೊಳ್ಳಲಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವು ಚರ್ಚೆಗಳಿಗೆಮ ಗ್ರಾಸವಾಗಿದೆ. ಮಂಗಳವಾರ ಸಿಐಐ ನ್ಯಾಷನಲ್ ಕಾನ್ಫೆರೆನ್ಸ್‌ನಲ್ಲಿ ಮಾತನಾಡಿರುವ ನಿತಿನ್ ಗಡ್ಕರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರವೇ ಪ್ರಯಾಣಿಕರು ತಾವು ಓಡಾಡುತ್ತಿರುವ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ಹೆದ್ದಾರಿ ಬದಿಯ ಫಲಕಗಳಲ್ಲಿ QR ಕೋಡ್ ಅಳವಡಿಸಲಾಗುತ್ತದೆ. ಪ್ರಯಾಣಿಕರು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ರಸ್ತೆ ಬದಿಯ ಫಲಕಗಳಲ್ಲಿ QR Code ಅಳವಡಿಕೆ
ಸ್ಮಾರ್ಟ್ ರಸ್ತೆ ಮತ್ತು ಭವಿಷ್ಯ ವಿಷಯವಾಗಿ ಭಾರತೀಯ ಕೈಗಾರಿಕಾ ಒಕ್ಕೂಟ (CII) ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಮಾತನಾಡುತ್ತಿದ್ದರು. ಹೆದ್ದಾರಿಗಳ ಉದ್ದಕ್ಕೂ ಸರ್ಕಾರದಿಂದ ಫಲಕಗಳನ್ನು ಅಳವಡಿಸಲಾಗುವುದು. ಫಲಕದಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಪ್ರಯಾಣಿಕರಿಗೆ ಗುತ್ತಿಗೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ತುರ್ತು ಸಹಾಯವಾಣಿ ಸಂಪರ್ಕಗಳಂತಹ ಪ್ರಮುಖ ಯೋಜನೆಯ ವಿವರಗಳ ಮಾಹಿತಿ ಸಿಗುತ್ತದೆ ಎಂದಿದ್ದಾರೆ.
ಈ ಮೂಲಕ ದೇಶಾದ್ಯಂತ ಹೆದ್ದಾರಿ ಯೋಜನೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಗುರಿಯನ್ನು ಹೊಂದಿರೋದಾಗಿ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಪ್ರತಿ ಹೆದ್ದಾರಿ ಯೋಜನೆಗೆ ಯಾರು ಜವಾಬ್ದಾರರು ಎಂಬುದನ್ನು ಜನರು ಸುಲಭವಾಗಿ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂಬ ಮಾಹಿತಿಯನ್ನು ನಿತಿನ್ ಗಡ್ಕರಿ ನೀಡಿದರು.
ನ್ಯಾನೇಕೆ ಎಲ್ಲಾ ದೋಷ ತೆಗೆದಕೊಳ್ಳಲಿ
ಪ್ರಯಾಣಿಕರಿಗೆ ತಾವು ಹೋಗುತ್ತಿರುವ ರಸ್ತೆ ನಿರ್ಮಿಸಿದ ಸಚಿವ, ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ನೀಡಲಾಗುತ್ತದೆ. ಯೋಜನೆಯು ಪೂರ್ಣಗೊಂಡ ನಂತರ 10 ವರ್ಷಗಳ ಕಾಲ ಪ್ರತಿಯೊಬ್ಬ ಗುತ್ತಿಗೆದಾರನು ನಿರ್ವಹಣೆಗೆ ಜವಾಬ್ದಾರನಾಗಿರುತ್ತಾನೆ. ರಸ್ತೆಯಲ್ಲಿ ಗುಂಡಿ ಸೇರಿದಂತೆ ಇತರೆ ದೋಷಗಳಿದ್ರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಜವಾಬ್ದಾರರಾಗಿದ್ದು, ಅವುಗಳನ್ನು ಸರಿಪಡಿಸಬೇಕಾಗುತ್ತದೆ. .
ಹೊಸ ಕ್ಯೂಆರ್ ಕೋಡ್ ವ್ಯವಸ್ಥೆಯು ಹೆದ್ದಾರಿ ಯೋಜನೆಗಳನ್ನು ಹೆಚ್ಚು ಪಾರದರ್ಶಕವಾಗಿಸುವುದಲ್ಲದೆ, ನಾಗರಿಕರನ್ನು ಸಬಲೀಕರಣಗೊಳಿಸುತ್ತದೆ, ಸುಸ್ಥಿರತೆಯನ್ನು ಉತ್ತೇಜಿಸುತ್ತದೆ ಮತ್ತು ಸಮೃದ್ಧಿಯನ್ನು ಪ್ರೋತ್ಸಾಹಿಸುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತುತ ವಾರ್ಷಿಕವಾಗಿ ಸುಮಾರು 55,000 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು, ಈ ಮೊತ್ತವು ಎರಡು ವರ್ಷಗಳಲ್ಲಿ 1.4 ಲಕ್ಷ ಕೋಟಿ ರೂಪಾಯಿಗೆ ಬೆಳೆಯುವ ನಿರೀಕ್ಷೆಯಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ಕೇಂದ್ರ ಸರ್ಕಾರದ ನಿರ್ಧಾರ; ಅಗ್ನಿವೀರರ ಭವಿಷ್ಯ ಮುಂದೇನು?
ವಿಫಲತೆ ಬೇರೆಯವರ ಹೆಗಲಿಗೆ ವರ್ಗಾವಣೆ
ರಸ್ತೆ ಗುಂಡಿಗಳಿದ್ರೆ ಮಾಧ್ಯಮವರು ನನ್ನ ಫೋಟೋ ಮಾತ್ರ ಯಾಕೆ ಹಾಕಬೇಕು? ಗುತ್ತಿಗೆದಾರರ ಫೋಟೋ ಸಹ ಹಾಕಲಿ. ಸೆಕ್ರೆಟರಿ, ಅಧಿಕಾರಿಗಳ ಫೋಟೋ ಬರಲಿ. ಎಲ್ಲವೂ ನನ್ನ ಕುತ್ತಿಗೆಗೆ ಯಾಕೆ ಬರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ನಾನೇಕೆ ಎಲ್ಲದಕ್ಕೂ ಉತ್ತರ ನೀಡಲಿ ಎಂದು ಹೇಳಿ ನಿತಿನ್ ಗಡ್ಕರಿ ನಕ್ಕಿದ್ದಾರೆ. ವಿಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದು, ಇದೇ ನೋಡಿ ವಿಫಲತೆಯನ್ನು ಬೇರೆಯವರ ಹೆಗಲಿಗೆ ವರ್ಗಾವಣೆ ಮಾಡೋದು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ದೇವಾಲಯದ ದುಡ್ಡನ್ನು ಮುಟ್ಟಿದ್ರೆ ಜೋಕೆ! ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದ್ದೇನು?


