ಪೋಷಕರ ಇಚ್ಛೆಗೆ ವಿರುದ್ಧವಾಗಿ ಅನ್ಯ ಧರ್ಮದವರನ್ನು ಮದುವೆಯಾದ ಮಗಳನ್ನು, ತಂದೆಯು ತನ್ನ ಸ್ವಯಾರ್ಜಿತ ಆಸ್ತಿಯಿಂದ ಹೊರಗಿಟ್ಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ನೀಡಬೇಕೆಂಬುದು ತಂದೆಯ ಇಚ್ಛೆಗೆ ಬಿಟ್ಟ ವಿಚಾರವಾಗಿದೆ ಎಂದಿದೆ.

ಅಪ್ಪ- ಅಮ್ಮನ ಇಚ್ಛೆಗೆ ವಿರುದ್ಧವಾಗಿ, ಅನ್ಯ ಧರ್ಮಿಯರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಪಾಠ ಕಲಿಸುವಂಥ ತೀರ್ಪೊಂದನ್ನು ಸುಪ್ರೀಂಕೋರ್ಟ್​ ನೀಡಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರಿಗೂ ಈಗ ಕಾನೂನು ಸಮಾನ ಅವಕಾಶವನ್ನು ನೀಡಿದೆ ನಿಜವಾದರೂ, ಸ್ವಯಾರ್ಜಿತ ಆಸ್ತಿಯನ್ನು ತಂದೆಯಾದವ ಯಾರಿಗೆ ಬೇಕಾದರೂ ಕೊಡಬಹುದಾದ ಕಾನೂನು ಇದೆ. ಆದರೆ ಇಂಥ ಆಸ್ತಿಯಲ್ಲಿಯೂ ಕೆಲವೊಮ್ಮೆ ಪ್ರಶ್ನೆ ಮಾಡುವ ಅಧಿಕಾರ ಹೆಣ್ಣುಮಕ್ಕಳಿಗೆ ಬರಬಹುದು. ಆದರೆ, ಇದೀಗ ಅಪ್ಪ-ಅಮ್ಮನ ಇಚ್ಛೆಗೆ ವಿರುದ್ಧವಾಗಿ ಬೇರೆ ಧರ್ಮದ ಯುವಕನ ಜೊತೆ ಮದುವೆಯಾಗಿರುವ ಹೆಣ್ಣುಮಗಳಿಗೆ ಅಪ್ಪ ಆಸ್ತಿ ನೀಡದೇ ಇರುವುದು, ಆಕೆಯನ್ನು ಆಸ್ತಿಯಿಂದ ಹೊರಕ್ಕೆ ಇಟ್ಟಿರುವುದು ಸರಿಯಾದ ಕ್ರಮವಾಗಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಆಸ್ತಿಯಿಂದ ಹೊರಕ್ಕೆ

ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ಪೀಠ ಇಂಥದ್ದೊಂದು ಆದೇಶವನ್ನು ಹೊರಡಿಸಿದೆ. ಶೈಲಾ ಜೋಸೆಫ್‌ ಎಂಬಾಕೆ ತಮ್ಮ ಸಮುದಾಯದ ಹೊರಗಿನ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಆಕೆಯ ತಂದೆ ಎನ್.ಎಸ್. ಶ್ರೀಧರನ್ ಅವರು ತಮ್ಮ ಆಸ್ತಿಯಿಂದ ಇವಳನ್ನು ಹೊರಕ್ಕೆ ಇಟ್ಟಿದ್ದರು. ಉಳಿದ ಎಂಟು ಮಕ್ಕಳಿಗೆ ಆಸ್ತಿಯನ್ನು ಸಮನಾಗಿ ಕೊಟ್ಟಿದ್ದರು. ಇದನ್ನು ಪ್ರಶ್ನಿಸಿ ಶೈಲಾ ಮೊದಲಿಗೆ ಅಧೀನ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ಅಲ್ಲಿ ಆಕೆಯ ಪರವಾಗಿ ತೀರ್ಪು ನೀಡಲಾಗಿತ್ತು, ಆದರೆ ಇದಕ್ಕೆ ಒಪ್ಪದ ತಂದೆ ಹೈಕೋರ್ಟ್​ ಮೊರೆ ಹೋದಾಗಲೂ ಎಲ್ಲರಿಗೂ ಸಮಾನ ಆಸ್ತಿಯನ್ನು ನೀಡಬೇಕು, ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕಾರಣಕ್ಕೆ ಆಸ್ತಿಯಿಂದ ಹೊರಗೆ ಇಟ್ಟಿರುವುದು ಸರಿಯಲ್ಲ ಎಂದು ಹೈಕೋರ್ಟ್​ ಕೂಡ ಹೇಳಿತ್ತು. ಅಲ್ಲಿಯೂ ಮಗಳ ಪರವಾಗಿಯೇ ತೀರ್ಪು ಬಂದಿತ್ತು.

ಸುಪ್ರೀಂಕೋರ್ಟ್​ ಮೊರೆ

ಆದರೆ ಇದಕ್ಕೆ ಸುತರಾಂ ಒಪ್ಪದ ತಂದೆ, ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಅಧೀನ ಕೋರ್ಟ್​ ಮತ್ತು ಹೈಕೋರ್ಟ್​ ನೀಡಿರುವ ತೀರ್ಪುಗಳನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್​, ಶ್ರೀಧರನ್ ಅವರು ಮಾಡಿರುವ ವಿಲ್ ಸರಿಯಾಗಿದೆ. ಶೈಲಾಳಿಗೆ ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿದೆ. ಈ ವಿಲ್​ ಅನ್ನು ತಂದೆ ತಮ್ಮ ಇಚ್ಛೆಯಂತೆ ಬರೆದಿದ್ದಾರೆ. ಇದು ಸರಿಯಾಗಿದೆ. ಒಂದು ವೇಳೆ ಯಾವುದೇ ಮಕ್ಕಳಿಗೆ ಆಸ್ತಿ ನೀಡಿರಲಿಲ್ಲ ಎಂದಾಗಿದ್ದರೆ ಕೋರ್ಟ್​ ಹಸ್ತಕ್ಷೇಪ ಮಾಡಬಹುದಿತ್ತು. ಆದರೆ ಉಳಿದ ಮಕ್ಕಳಿಗೆ ಆಸ್ತಿ ಹಂಚಿಕೆಯಾಗಿದೆ. ಮಗಳು ಶೈಲಾಳನ್ನು ಮಾತ್ರ ಆಸ್ತಿಯಿಂದ ದೂರ ಇಟ್ಟಿರುವುದು ಅವರ ಸ್ವ ಇಚ್ಛೆ. ಆದ್ದರಿಂದ ಅದನ್ನು ಪ್ರಶ್ನಿಸುವ ಹಕ್ಕು ಆಕೆಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸುಪ್ರೀಂ ಸ್ಪಷ್ಟನೆ

ಮಹಿಳೆಗೂ ಸಮಾನ ಆಸ್ತಿಯ ಹಕ್ಕು ಇರುವುದು ನಿಜವೇ. ಆದರೆ ಇದು ಸ್ವಯಾರ್ಜಿತ ಆಸ್ತಿಯಾಗಿದ್ದು, ತಮ್ಮ ಆಸ್ತಿಯನ್ನು ಯಾರಿಗೆ ಕೊಡಬೇಕು ಎನ್ನುವುದು ತಂದೆಗೆ ಇಚ್ಛೆಯ ವಿಷಯವಾಗಿದೆ. ಆಸ್ತಿ, ಪಿತ್ರಾರ್ಜಿತವಾಗಿದ್ದರೆ, ಅದರಲ್ಲಿ ಪಾಲು ಸಿಗುತ್ತಿತ್ತು. ಆದರೆ ಈ ವಿಷಯದಲ್ಲಿ ಕೋರ್ಟ್​ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದೆ ನ್ಯಾಯಪೀಠ.